ಮುಡಾ ಬಹುಕೋಟಿ ಹಗರಣ ಸಿಬಿಐಗೆ ವಹಿಸಲು ಎಚ್.ವಿಶ್ವನಾಥ್ ಒತ್ತಾಯ
ಮುಡಾ ಬಹುಕೋಟಿ ಹಗರಣದ ಪ್ರಕರಣವನ್ನು ಸರಕಾರ ಕೂಡಲೇ ತನಿಖೆಗೆ ಸಿಬಿಐಗೆ ವಹಿಸಬೇಕು. ಇಲ್ಲದಿದ್ದರೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ.
ನಗರದ ಮುಡಾ ಕಚೇರಿ ಎದುರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜವಾದಿ ಮನಸ್ಸುಳ್ಳ ಸಿದ್ದರಾಮಯ್ಯನವರು ಮಣ್ಣಿಗೋಸ್ಕರ ಆಸೆ ಪಡುತ್ತಿದ್ದಾರೆ. ಕೂಡಲೇ ಕೆಸರೆಯಲ್ಲಿರುವ 3 ಎಕರೆ 16 ಗುಂಟೆ ಜಮೀನನ್ನು ಸರಕಾರಕ್ಕೆ ವಾಪಾಸು ನೀಡಬೇಕು. ಅದೇ ಜಾಗದಲ್ಲಿ ಒಂದು ಆಸ್ಪತ್ರೆಯನ್ನು ಕಟ್ಟಿಸಿ ನಿಮ್ಮ ಹೆಸರು ಚಿರಸ್ಥಾಯಿಯಾಗಿ ಉಯುತ್ತೆದೆ. ಇಲ್ಲದಿದ್ದರೆ ನಿಮ್ಮ ಭ್ರಷ್ಟಾಚಾರ ಜೀವನ ಪರ್ಯಂತ ಉಳಿಯುತ್ತದೆ ಎಂದು ಹೇಳಿದರು.

ಸಿಎಂ ನನಗೆ 62 ಕೋಟಿ ರೂಪಾಯಿ ಬರಬೇಕಾಗಿತ್ತು ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರು ಆರ್ಥಿಕ ಸಚಿವರು ಹೌದು. ವಕೀಲರು ಕೂಡ ಹೌದು. ಯಾವ ರೀತಿಯಲ್ಲಿ ಲೆಕ್ಕಾಚಾರ ಮಾಡುತ್ತೀರಾ? ಭೂಮಿ ಅಭಿವೃದ್ಧಿ ಮಾಡಿದ ಮೇಲೆ ಉಳಿಯುವುದು ಶೇ.40ರಷ್ಟು ಮಾತ್ರ, ಹಣಕಾಸು ಖಾತೆಯವರಿಗೆ ಇಷ್ಟು ಗೊತ್ತಾಗುವುದಿಲ್ಲವೇ? ಎಂದು ಪ್ರಶ್ನಿಸಿದರು.
ಬಡವರಿಗೆ ಸೂರು ಒದಗಿಸುವ ಮುಡಾ ಸಂಸ್ಥೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದರು. ಆದರೆ, ಇಂದು ಅದರ ಪರಿಸ್ಥಿತಿ ಕೆಟ್ಟದಾಗಿದೆ. ಎಲ್ಲಾ ಪಕ್ಷಗಳ ನಾಯಕರು ಸೇರಿ ಈ ಪರಿಸ್ಥಿತಿಗೆ ತಂದು ಇಟ್ಟಿರುವುದು ದೊಡ್ಡ ದುರಂತ ಎಂದರು.
ಭೈರತಿ ಸುರೇಶ್ ಬಳಿ 7 ನಿವೇಶನ ಕೇಳಿ ನಾನೇಕೆ ಹೋಗಲಿ. ನಿವೇಶನಕ್ಕಾಗಿ ಅರ್ಜಿ ಹಾಕಿಲ್ಲ. ಪ್ರಾಮಾಣಿಕ ರಾಜಕಾರಣ ಮಾಡಿದ್ದೇನೆ. ಮುಡಾ ಹಗರಣ ಹೊರಬರುತ್ತಿದ್ದಂತೆಯೇ ಹೆಲಿಕಾಪ್ಟರ್‌ನಲ್ಲಿ ಬಂದು ಪೊಲೀಸರ ಭದ್ರತೆಯಲ್ಲಿ ಸಭೆ ಮಾಡಿದ್ದಾರೆ. ಸುರೇಶಾ, ಭೂ ಪರಿವರ್ತನೆ ಮತ್ತು ಅಧಿಕಾರಿಗಳ ವರ್ಗಾವಣೆಗೆ ಎಷ್ಟು ಫಿಕ್ಸ್ ಮಾಡಿದ್ದೀಯಾ? ಹೇಳಬೇಕಾ ಎಂದರು.
ಸಾಮಾಜಿಕ ಹೋರಾಟಗಾರ ಗಂಗರಾಜು ಮಾತನಾಡಿ, ಹಕ್ಕು ಪತ್ರ ವರ್ಗಾವಣೆಯಾಗಿದ್ದರೂ ಅಣ್ಣನಿಂದ ಸಿಎಂ ಪತ್ನಿ ಪಾರ್ವತಿ ದಾನಪತ್ರವಾಗಿ 2010ರಲ್ಲಿ ಜಮೀನು ಪಡೆಯುತ್ತಾರೆ. ಸಿದ್ದರಾಮಯ್ಯ ಅವರ ಅವಧಿಯಲ್ಲೇ ಈ ಲೋಪವಾಗಿದೆ. ದಾನಪತ್ರದಲ್ಲಿ ಮಲ್ಲಿಕಾರ್ಜುಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ವಿಳಾಸ ಒಂದೇ ಆಗಿದೆ. ಇದು ಸಿದ್ದರಾಮಯ್ಯ ಅವರ ಬೇನಾಮಿ ಆಸ್ತಿಯಾಗಿರಬಹುದಲ್ಲವೇ ಎಂದು ಪ್ರಶ್ನಿಸಿದರು.












Click it and Unblock the Notifications