ಮೈಸೂರಿನ ಉದ್ಯಮಿ ಶವ ನಾಲೆಯಲ್ಲಿ ಪತ್ತೆ
ಮೈಸೂರು, ಜನವರಿ 31 : ಮೈಸೂರಿನ ಕೆ.ಆರ್.ಮೊಹಲ್ಲಾದ ವೀಣೆಶೇಷಣ್ಣ ರಸ್ತೆ ನಿವಾಸಿ ಸೆಂದಿಲ್ (38) ಅವರ ಮೃತದೇಹ ಬನ್ನೂರು ಸಮೀಪದ ಬಿದರಹಳ್ಳಿಯ ರಾಜಪರಮೇಶ್ವರಿ ನಾಲೆಯಲ್ಲಿ ಪತ್ತೆಯಾಗಿದೆ. ಸಂಬಂಧಿಕರು ಹಾಗೂ ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಇವರು ಆಯಿಲ್ ಮಿಲ್ ರಸ್ತೆಯಲ್ಲಿ ಅಡುಗೆ ಎಣ್ಣೆ ವ್ಯಾಪಾರ ನಡೆಸುತ್ತಿದ್ದರು. ಸೋಮವಾರ ಬೆಳಿಗ್ಗೆ ವ್ಯಾಪಾರಕ್ಕೆಂದು ಹೋದವರು ಮನೆಗೆ ಬಂದಿರಲಿಲ್ಲ. ಸೋಮವಾರ ರಾತ್ರಿ ತಮ್ಮ ಸಂಬಂಧಿಯೊಬ್ಬರಿಗೆ ಕರೆ ಮಾಡಿದ ಇವರು 2.22 ಲಕ್ಷ ಹಣವನ್ನು ಗನ್‌ಹೌಸ್ ವೃತ್ತಕ್ಕೆ ತಂದರೆ ಒಬ್ಬರು ಬಂದು ಸ್ವೀಕರಿಸುತ್ತಾರೆ ಎಂದು ಹೇಳಿದ್ದರು.
ಸಾಕಷ್ಟು ಬಾರಿ ಕರೆ ಮಾಡಿ ಹೇಳಿದ ನಂತರ ಇವರ ಬಾವ ಹಣವನ್ನು ತೆಗೆದುಕೊಂಡು ಗನ್‌ಹೌಸ್ ವೃತ್ತಕ್ಕೆ ರಾತ್ರಿ11.30ರ ಸುಮಾರಿಗೆ ಹೋದರು. ಆಗ ಸೆಂದಿಲ್ ಅವರದೇ ಬೈಕ್‌ನಲ್ಲಿ ಬಂದ ಮುಸುಕುಧಾರಿ ವ್ಯಕ್ತಿಯೊಬ್ಬ ಹಣವನ್ನು ಪಡೆದು ಹೋದ. ನಂತರ ಸೆಂದಿಲ್ ಅವರ ಮೊಬೈಲ್ ಸ್ವಿಚ್ ಆಫ್ ಆಯಿತು ಎಂದು ಸಂಬಂಧಿಕರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಮೃತದೇಹ ಸಿಕ್ಕ ನಾಲೆಯಲ್ಲಿ ನೀರು ಕೇವಲ ಒಂದು ಅಡಿಯಷ್ಟಿದೆ. ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಸಾಧ್ಯತೆ ಇಲ್ಲವೇ ಇಲ್ಲ. ದೇಹದ ಮೇಲೂ ಗಾಯಗಳಿಲ್ಲ.
ಒಟ್ಟಾರೆ, ಅನುಮಾನಾಸ್ಪದವಾಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಹಣಕಾಸಿನ ವೈಷಮ್ಯದಿಂದ ಕೊಲೆ ಮಾಡಿರುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ಎಲ್ಲ ಆಯಾಮದಿಂದಲೂ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಶವಾಗಾರಕ್ಕೆ ಶಾಸಕ ಎಲ್.ನಾಗೇಂದ್ರ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಬನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications