ಸಂಚಾರಿ ನಿಯಮ ಉಲ್ಲಂಘನೆ ದಂಡ ತಪ್ಪಿಸಲು ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಬುಲೆಟ್ ಸವಾರ
ಮೈಸೂರು, ಡಿಸೆಂಬರ್ 9: ಪದೇ ಪದೇ ಸಂಚಾರ ಉಲ್ಲಂಘನೆಯ ದಂಡವನ್ನು ತಪ್ಪಿಸಿಕೊಳ್ಳಲು ಬುಲೆಟ್ ಬೈಕ್ ಸವಾರನೊಬ್ಬ ಭಾರೀ ತಂತ್ರ ಮಾಡಿದ್ದು, ಕೊನೆಗೂ ಮೈಸೂರು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.
ಕಳೆದ 8 ತಿಂಗಳ ಅವಧಿಯಲ್ಲಿ ಆರೋಪಿಯು 38 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಾನೆ. ಸಿಗ್ನಲ್ ಜಂಪ್, ಅತಿ ವೇಗದ ಚಾಲನೆ, ಅಜಾಗರೂಕತೆಯ ಚಾಲನೆ ಪ್ರಕರಣವೇ ಇದರಲ್ಲಿ ಹೆಚ್ಚಾಗಿತ್ತು.
ದಂಡದಿಂದ ತಪ್ಪಿಸಿಕೊಳ್ಳಲು ನಕಲಿ ನಂಬರ್ ಅಳವಡಿಸಿಕೊಂಡಿದ್ದ ಈ ಬೈಕ್ ಸವಾರನನ್ನು ನರಸಿಂಹರಾಜ ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಕನ್ನೇಗೌಡನ ಕೊಪ್ಪಲಿನ ನಿವಾಸಿ ರವಿ ಎಂಬಾತನ ಬುಲೆಟ್ ಬೈಕ್ ಅಸಲಿ ನೋಂದಣಿ ಸಂಖ್ಯೆ ಬೇರೆಯಿದ್ದು, ವಾಹನ ಸವಾರ ತನ್ನ ಬೈಕ್ ನ ನಂಬರ್ ಪ್ಲೇಟ್ ತಿದ್ದುಪಡಿ ಮಾಡಿ ಬೇರೆ ನೋಂದಣಿ ಸಂಖ್ಯೆ ಹಾಕಿಕೊಂಡಿದ್ದ. ಸಿಸಿ ಟಿವಿಗಳ ಫುಟೇಜ್ ಮೂಲಕ ಪೊಲೀಸರು ಒಟ್ಟು 38 ನೋಟೀಸ್ ಗಳನ್ನು ಸವಾರನ ಮನೆ ವಿಳಾಸಕ್ಕೆ ಕಳಿಸಿದ್ದರು. ಆದರೆ ಆರೋಪಿಯು ಅಳವಡಿಸಿಕೊಂಡಿದ್ದ ನೋಂದಣಿ ಸಂಖ್ಯೆಯು ಕುವೆಂಪುನಗರದ ನಿವಾಸಿ ಚಂದ್ರ ಅವರ ಹೋಂಡಾ ಡಿಯೋ ಸ್ಕೂಟರ್ ನದಾಗಿತ್ತು.

ಪೊಲೀಸರು ಕಳಿಸಿದ್ದ 38 ನೋಟೀಸ್ ಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದ ಚಂದ್ರ ಅವರು ಟ್ರಾಫಿಕ್ ಮ್ಯಾನೇಜ್ ಮೆಂಟ್ ವಿಭಾಗದಲ್ಲಿ ಪರಿಶೀಲಿಸಿದಾಗ ಬುಲೆಟ್ ಸವಾರನೊಬ್ಬ ಈ ಸಂಖ್ಯೆ ಬಳಸುತ್ತಿರುವುದು ಕಂಡುಬಂದಿತ್ತು. ಕೂಡಲೇ ಚಂದ್ರ ಅವರು ಜಯಲಕ್ಷ್ಮಿ ಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದರು. ದೂರಿನ ಮೇರೆಗೆ 2 ಗಂಟೆಯೊಳಗೇ ಎನ್.ಆರ್. ಸಂಚಾರ ಠಾಣಾ ಆರಕ್ಷಕ ನಿರೀಕ್ಷಕರು ಇರ್ವಿನ್ ರಸ್ತೆಯಲ್ಲಿ ಬುಲೆಟ್ ಮೋಟಾರ್ ಸೈಕಲನ್ನು ಪತ್ತೆ ಮಾಡಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆಗಳ ದಂಡವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ರೀತಿ ವಾಹನ ಸಂಖ್ಯೆ ಬದಲಾವಣೆ ಮಾಡಿಕೊಂಡಿರುವುದಾಗಿ ಆರೋಪಿ ರವಿ ತಿಳಿಸಿದ್ದಾನೆ.
ವಾಹನಗಳ ನೋಂದಣಿ ಸಂಖ್ಯೆಯನ್ನು ನಕಲಿಯಾಗಿ ಉಪಯೋಗಿಸುವುದು ಕಾನೂನು ಬಾಹಿರವಾಗಿದ್ದು, ಕ್ರಿಮಿನಲ್ ಸ್ವರೂಪದ ಅಪರಾಧ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications