ಗೆಲ್ಲುವ ಅಭ್ಯರ್ಥಿಗೇ ಟಿಕೆಟ್: ಯಡಿಯೂರಪ್ಪ
ಮೈಸೂರು, ಜನವರಿ 25: ಪಕ್ಷಕ್ಕೆ ಯಾರ ಮೇಲೂ ವೈಯಕ್ತಿಕ ವ್ಯಾಮೋಹ ಇಲ್ಲ, ಅಮಿತ್ ಶಾ ಅವರೊಂದು, ನಾನೊಂದು ಸಮೀಕ್ಷೆ ಮಾಡಿಸಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಇಂದು ಮೈಸೂರಿನಲ್ಲಿ ಆಯೋಜಿಸಿದ್ದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು ಬಿಜೆಪಿ ಅಧಿಕಾರಕ್ಕೆ ಬರಬೇಕು, ರಾಜ್ಯಕ್ಕೆ ಪ್ರಾಮಾಣಿಕ ಅಧಿಕಾರ ನೀಡಬೇಕು ಇದೇ ನಮ್ಮ ಗುರಿ ಎಂದು ಅವರು ಹೇಳಿದರು.
ಚಿತ್ರಗಳು : ಮೈಸೂರಿನಲ್ಲಿ ಅಮಿತ್ ಶಾ ಮೋಡಿ
ಕಾಂಗ್ರೆಸ್ ಪಕ್ಷದ ಮೇಲೆ ಹರಿಹಾಯ್ದ ಅವರು ಕಾಂಗ್ರೆಸ್ ಪಕ್ಷ ಒಡೆದ ಮನೆ ಆಗಿದೆ, ಸ್ವತಃ ಮುಖ್ಯಮಂತ್ರಿಗಳ ಮೇಲೆ ಅನೇಕ ಸಚಿವರು ಮನಸ್ತಾಪ ಹೊಂದಿದ್ದಾರೆ ಎಂದ ಅವರು ಅಧಿಕಾರ ಕಳೆದುಕೊಳ್ಳುವ ಸಮಯ ಹತ್ತಿರವಾದಂತೆ ಸಿದ್ದರಾಮಯ್ಯ ಅವರು ಮನ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.

ಖಜಾನೆ ಖಾಲಿ
ಸಿದ್ದರಾಮಯ್ಯ ಅವರು ಸರ್ಕಾರದ ಖಜಾನೆಯನ್ನು ಖಾಲಿ ಮಾಡಿದ್ದಾರೆ, ಆದರೆ ಪ್ರಚಾರಕ್ಕಾಗಿ ಸುಮ್ಮನೆ ಜಿಲ್ಲೆಗಳಿಗೆ ಹೋಗಿ ನೂರಾರು ಕೋಟಿ ರೂಪಾಯಿಗಳ ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಹಳೆಯ ಯೋಜನೆಗಳಿನ್ನೂ ನೆನಗುದಿಗೆ ಬಿದ್ದಿದ್ದಾಗಲೇ ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ಹಳೆ ಕಲ್ಲು ನೆಟ್ಟು, ಹೊಸ ಬಿಲ್ಲು ಮಾಡಿಕೊಂಡು ಹೋಗಿದ್ದಾರೆ ಎಂದರು.

ಮಹದೇವಪ್ಪ ಅವರ ಮಗನ ವಿರುದ್ಧ ಎಫ್‌ಐಆರ್
ರಾಜ್ಯದಲ್ಲಿ ಮರಳು ಅಕ್ರಮ ತಾಂಡವವಾಡುತ್ತಿದೆ, ಲೋಕೋಪಯೋಗಿ ಸಚಿವರ ಕುಟುಂಬವೇ ಇದರಲ್ಲಿ ಶಾಮೀಲಾಗಿದ್ದು, ಲೋಕೋಪಯೋಗಿ ಸಚಿವರ ಮಗನ ವಿರುದ್ಧವೇ ಮರಳು ದಂದೆ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಮುಖಮಂತ್ರಿಗಳು ಇವರಿಗೆ ಅಭಯ ಹಸ್ತ ನೀಡಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದರು.

ಮರಳು ಅಕ್ರಮದ ಬಗ್ಗೆ ಪ್ರತಿಭಟನೆ
ರಾಜ್ಯದಲ್ಲಿ ಮರಳು ಅಕ್ರಮ ಮಿತಿ ಮೀರಿದ್ದು, ರಾಜ್ಯದಲ್ಲಿನ ಮರಳನ್ನು ಕೊಳ್ಳೆ ಹೊಡೆದ ನಂತರ ಈಗ ಮಲೇಷ್ಯಾದಿಂದ ಬೇನಾಮಿ ಕಂಪೆನಿ ಹೆಸರಲ್ಲಿ ಮರಳು ತರಿಸಿಕೊಳ್ಳಲಾಗುತ್ತಿದೆ. ಜಗದೀಶ್ ಶೆಟ್ಟರ್ ಅವರು ಈ ಕುರಿತು ಈಗಾಗಲೇ ದಾಖಲೆಗಳನ್ನು ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರದ ಅಕ್ರಮಗಳ ವಿರುದ್ಧ ಸದನದಲ್ಲಿ ಬಿಜೆಪಿ ಹೋರಾಟ ಮಾಡಲಿದೆ ಎಂದರು.

ತಪ್ಪಿಸಲು ಸಾಧ್ಯವಿಲ್ಲ
ಎಲ್ಲಾ ಕ್ಷೇತ್ರಗಳಲ್ಲೂ ಓಡಾಡಿ, ಜನರ ಬೆಂಬಲವನ್ನು ನಾವು ಗಳಿಸಿದ್ದೇವೆ, ಹೋದಲ್ಲೆಲ್ಲಾ ನಮಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ, ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಗ್ಯಾರೆಂಟಿ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.












Click it and Unblock the Notifications