ಮದುವೆ ದಿನ ವಧು ನಾಪತ್ತೆ, ಬೇರೆ ಯುವತಿ ಜೊತೆ ನಡೆಯಿತು ವಿವಾಹ!
ಮೈಸೂರು, ಜುಲೈ 08 : ಮದುವೆ ದಿನವೇ ವಧು ನಾಪತ್ತೆಯಾದ ಘಟನೆ ನಂಜನಗೂಡಿನಲ್ಲಿ ನಡೆದಿದೆ. ವರ ಅದೇ ಮುಹೂರ್ತದಲ್ಲಿ ದೂರದ ಸಂಬಂಧಿ ಯುವತಿ ಜೊತೆ ವಿವಾಹವಾಗಿದ್ದಾನೆ.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯ ನೀಲಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ
ನಾರಾಯಣ ಮತ್ತು ನಂದಿನಿ ವಿವಾಹವಾಗಬೇಕಿತ್ತು. ಆದರೆ, ಇಂದು ಬೆಳಗ್ಗೆ ವಧು ನಂದಿನಿ ಪರಾರಿಯಾಗಿದ್ದಾಳೆ.
ಹುಲ್ಲಹಳ್ಳಿಯ ನೀಲಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ನಾರಾಯಣ ಮತ್ತು ನಂದಿನಿ ವಿವಾಹ ನಡೆಯಬೇಕಿತ್ತು. ಶನಿವಾರ ರಾತ್ರಿ ಆರತಕ್ಷತೆ ಮತ್ತು ವಿವಾಹ ಶಾಸ್ತ್ರಗಳಲ್ಲಿ ನಂದಿನಿ ಪಾಲ್ಗೊಂಡಿದ್ದಳು. ಆದರೆ, ಇಂದು ಬೆಳಗ್ಗೆ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.

ನಂದಿನಿ ಪರಾರಿಯಾಗಿರುವ ವಿಚಾರ ತಿಳಿದ ಬಳಿಕ ವರ ಮತ್ತು ವಧುವಿನ ಕುಟುಂಬದವರ ನಡುವೆ ಮಾತಿನ ಚಕಮಕಿ ನಡೆಯಿತು. ವಿಷಯ ತಿಳಿದು ಹುಲ್ಲಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.
ನಂದಿನಿ ಪರಾರಿಯಾದ ಬಳಿಕ ಮದುವೆಗೆ ಅಡ್ಡಿ ಆಯಿತು. ಕೊನೆಗೆ ಕುಟುಂಬದವರೆಲ್ಲಾ ಸೇರಿ ದೂರದ ಸಂಬಂಧಿ ಯುವತಿ ಜೊತೆ ನಾರಾಯಣ ಮದುವೆ ಮಾಡಿದರು.
ನಾರಾಯಣನ ಮದುವೆ ಏನೋ ಸಂಬಂಧಿ ಯುವತಿ ಜೊತೆ ನಡೆಯಿತು. ನಂದಿನಿ ಕುಟುಂಬದವರು ಕಲ್ಯಾಣ ಮಂಟಪದಿಂದ ಬರಿಗೈನಲ್ಲಿ ಮನೆಗೆ ಮರಳಿದರು. ಆದರೆ, ನಂದಿನಿ ಇಂದು ಬೆಳಗ್ಗೆ ಕಲ್ಯಾಣ ಮಂಟಪದಿಂದ ಹೋಗಿದ್ದು ಹೇಗೆ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.












Click it and Unblock the Notifications