ಮೈಸೂರು; ತಳ್ಳುಗಾಡಿಯವರಿಂದ ಲಂಚ ಪಡೆದ ಪೊಲೀಸರು ಅಮಾನತು
ಮೈಸೂರು, ಡಿಸೆಂಬರ್ 24: ಲಂಚ ಸ್ವೀಕರಿಸಿದ ಆರೋಪದ ಮೇಲೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಮೈಸೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಆದರೆ, ಇದಕ್ಕೆ ಆಕ್ಷೇಪ ಸಹ ವ್ಯಕ್ತವಾಗಿದೆ.
ಮೈಸೂರು ನಗರದ ಲಷ್ಕರ್ ಠಾಣೆಯ ಎಎಸ್ಐ ಕುಮಾರಸ್ವಾಮಿ ಹಾಗೂ ಗರುಡ ವಾಹನ ಚಾಲಕ ಮಣಿಕಂಠ ಎಂಬುವವರನ್ನು ನಗರ ಪೊಲೀಸ್ ಆಯುಕ್ತರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಪೊಲೀಸರು ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಎಎಸ್ಐ ಕುಮಾರಸ್ವಾಮಿ ಹಾಗೂ ಗರುಡ ವಾಹನ ಚಾಲಕ ಮಣಿಕಂಠ ಗಸ್ತು ತಿರುಗುವಾಗ ತಳ್ಳುವ ಗಾಡಿಯ ವ್ಯಾಪಾರಿಯೊಬ್ಬರಿಂದ ಹಣ ಪಡೆದಿದ್ದಾರೆಂದು ಆರೋಪಿಸಲಾಗಿದೆ. ಈ ಕುರಿತು ವಿಡಿಯೋವನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.

ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದರು. ವಿಡಿಯೋ ಆಧರಿಸಿ ನಗರ ಪೊಲೀಸ್ ಆಯುಕ್ತರು ಇಬ್ಬರೂ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.
ಅಮಾನತಿಗೆ ಆಕ್ಷೇಪ: ವಿಡಿಯೋವನ್ನು ಆಧಾರವಾಗಿ ಇಟ್ಟುಕೊಂಡು ಒಬ್ಬರು ಪೊಲೀಸರನ್ನು ಅಮಾನತು ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ವಿಡಿಯೋವನ್ನು ಬಹಳ ದೂರದಿಂದ ಚಿತ್ರೀಕರಣ ಮಾಡಲಾಗಿದೆ.
ಪೊಲೀಸರು ವ್ಯಾಪಾರಿ ಜೊತೆ ಏನು ಮಾತುಕತೆ ನಡೆಸಿದ್ದಾರೆ? ಎಂಬುದು ಸ್ಪಷ್ಟವಾಗಿಲ್ಲ. ಇದನ್ನು ಆಧಾರವಾಗಿಟ್ಟುಕೊಂಡು ಅಮಾನತು ಮಾಡಿರುವುದು ಸರಿಯಲ್ಲ ಎಂಬ ವಾದವೂ ಇದೆ.












Click it and Unblock the Notifications