ಬೊಂಬು ಬಿರಿಯಾನಿ ಮಳಿಗೆದಾರರು ಸಾಲಗಾರರಾದ ಹಿಂದಿನ ಕಥೆ-ವ್ಯಥೆ
ಮೈಸೂರು, ಜನವರಿ 29: ದಸರಾ ಮಹೋತ್ಸವ ಎಂದರೆ ಥಟ್ಟನೆ ನೆನಪಾಗುವುದು ಆಹಾರ ಮೇಳ. ಈ ಆಹಾರ ಮೇಳದಲ್ಲಿ ಕಳೆದ ಕೆಲವು ವರ್ಷಗಳಿಂದೀಚೆಗೆ ಹೆಚ್ಚು ಮನೆ ಮಾತಾಗಿರುವುದು ಬಾಯಲ್ಲಿ ನೀರೂರಿಸುವ ಬೊಂಬು ಬಿರಿಯಾನಿ.
ದಸರಾ ಮಹೋತ್ಸವದ ಅಂಗವಾಗಿ ನಡೆದ ಜನಪ್ರಿಯ ಆಹಾರ ಮೇಳದಲ್ಲಿ ಹೆಚ್ಚು ಸುದ್ದಿಯಾದ ಈ ಬಿರಿಯಾನಿ ಸಾಕಷ್ಟು ಮಂದಿಗೆ ಆದಿವಾಸಿಗಳ ಕೈ ರುಚಿ ತೋರಿಸಿ ಭೇಷ್ ಎನಿಸಿಕೊಂಡಿತ್ತು. ಆದರೆ, ಈ ಆಹಾರ ತಯಾರಿಸಿ ಕೊಟ್ಟ ಮೂವರು ಮಳಿಗೆದಾರರು ಅಧಿಕ ಬಂಡವಾಳ ಹಾಗೂ ಮಳೆಯಿಂದಾಗಿ ನಷ್ಟದ ಸುಳಿಗೆ ಸಿಲುಕಿದ್ದಾರೆ.
ಹೌದು, ಆಹಾರ ಮೇಳದಲ್ಲಿ ರುಚಿಕಟ್ಟಾದ ಬಿರಿಯಾನಿ ನೀಡಿ, ವ್ಯಾಪಾರ ಮಾಡಿ ಲಾಭಗಳಿಸುವ ಉದ್ದೇಶದಿಂದ ಕಾಡಿನಿಂದ ನಾಡಿಗೆ ಬಂದ ಆದಿವಾಸಿಗಳು ಕಂಗಾಲಾಗಿದ್ದಾರೆ.
ಆದಿವಾಸಿಗಳು ಸೇವನೆ ಮಾಡುವ ಆಹಾರವಾದ ಈ ಬಿರಿಯಾನಿ, ಬಿದಿರಕ್ಕಿ ಪಾಯಸ, ಮಾಗಳಿ ಬೇರು, ನಳ್ಳಿ ಸಾಂಬಾರು, ಮುದ್ದೆ ರುಚಿಯನ್ನು ನಗರದ ಜನತೆಗೆ ಪರಿಚಯಿಸಬೇಕೆಂಬ ಉದ್ದೇಶದಿಂದ ಜಿಲ್ಲಾಡಳಿತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಜನಪ್ರಿಯ ಆಹಾರ ಮೇಳದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಈ ಆಹಾರ ಪದಾರ್ಥಗಳ ಮಾರಾಟಕ್ಕೆ ವೇದಿಕೆ ಕಲ್ಪಿಸಿದೆ.
ಅಂತೆಯೇ ಕಳೆದ ಅಕ್ಟೋಬರ್ ನಲ್ಲಿಯೂ ನಡೆದ ಆಹಾರ ಮೇಳದಲ್ಲಿ ಬುಡಕಟ್ಟು ಕೃಷಿಕರ ಸಂಘ, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತು, ಮೈಸೂರಿನ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ರಾಜ್ಯ ಆದಿವಾಸಿ ರಕ್ಷಣಾ ವೇದಿಕೆ ಎಂಬ ಸಂಘಟನೆಗೆ ಆದಿವಾಸಿ ಆಹಾರ ಮಳಿಗೆ ತೆರೆಯಲು ಅವಕಾಶ ನೀಡಿತ್ತು.

ಮಳಿಗೆದಾರರ ಆರೋಪ
ಆರಂಭದ ಎರಡು ವರ್ಷ ಈ ಸಂಘಟನೆಗಳಿಗೆ ಉತ್ತಮ ವ್ಯಾಪಾರವಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ಆಹಾರ ಮೇಳದ ಸಂದರ್ಭದಲ್ಲಿ ಎರಡರಿಂದ - ಮೂರು ದಿನ ಮಳೆಯಾಗಿದ್ದರಿಂದ ಅಂದುಕೊಂಡಷ್ಟು ವ್ಯಾಪಾರವಾಗಿಲ್ಲ. ಇದನ್ನು ಮನಗಂಡ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೊದಲ ಬಾರಿ ನಷ್ಟವಾದ ಮಳಿಗೆದಾರರಿಗೆ ಒಂದೂವರೆ ಲಕ್ಷ ಹಣವನ್ನು ನೀಡಿತ್ತು. ಆದರೆ ಈ ಬಾರಿಯ ಮಳೆಯಿಂದಾಗಿ ಆದಿವಾಸಿಗಳಿಗೆ ವ್ಯಾಪಾರದಲ್ಲಿ ಆದ ನಷ್ಟವನ್ನು ದಸರಾ ಮುಗಿದು ಎರಡು ತಿಂಗಳಾದರೂ ನೀಡಿಲ್ಲ ಎಂಬುದು ಮೂವರು ಆದಿವಾಸಿ ಸಾಂಪ್ರದಾಯಿಕ ಆಹಾರ ತಯಾರಿಕೆ ಮಳಿಗೆದಾರರ ಆರೋಪ.

ನಮ್ಮ ವ್ಯಾಪ್ತಿಗೆ ಬರುವುದಿಲ್ಲ
ಸಮಸ್ಯೆ ಆಲಿಸಿದ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಈ ಬಗ್ಗೆ ಮನವಿ ಸ್ವೀಕರಿಸಿದ್ದು, ನಮಗೆ ಇವರ ಸಾಲದ ಸುಳಿಗೆ ಸಿಲುಕಿರುವ ವಿಚಾರ ಗೊತ್ತಿದೆ. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಮೇಲಿನ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅನುದಾನ ಬಿಡುಗಡೆಯಾಗಿಲ್ಲ ಎಂದು ಹೇಳುತ್ತಿದ್ದಾರೆ.

ಮಾಗಳಿ ಬೇರಿಗೂ ಬೆಲೆ ಜಾಸ್ತಿ
ಮಾರಾಟಕ್ಕಾಗಿ ತಂದಿದ್ದ ಕಾಡು ಗೆಣಸು, ಜೇನುತುಪ್ಪ, ಕಾಡು ಬಾಳೆ ಕಾಯಿ , ಬಾಳೆ ಹಣ್ಣು , ಮಾಗಳಿ ಬೇರಿಗೂ ಬೆಲೆ ಜಾಸ್ತಿ. ಇದಲ್ಲದೆ ಬಿದಿರು, ಕಳಲೆ ಒಂದು ಕೆಜಿಗೆ 300 ರೂ, ಬಿದಿರಕ್ಕಿ ತರಬೇಕಾದರೆ ಕ್ಯಾಲಿಕಟ್ಗೆಟ್ ಗೆ ಹೋಗಬೇಕು. ಒಂದು ಕೆ. ಜಿ ಬಿದಿರಕ್ಕಿ 750 ರಿಂದ 800 ರೂ.ಗೆ ದೊರೆಯುತ್ತದೆ. ಒಟ್ಟಾರೆ ಒಂದು ಮಳಿಗೆಗೆ ಬರೋಬ್ಬರಿ 5 ಲಕ್ಷ ರೂ ಬೇಕು ಎನ್ನುತ್ತಾರೆ ಅಂಗಡಿ ಮಾಲೀಕರು.

ನಾವು ಸಾಲಗಾರರಾಗಿದ್ದೇವೆ
ಇನ್ನು ಸಾಂಪ್ರದಾಯಿಕ ಆಹಾರವನ್ನು ಜನರಿಗೆ ಪರಿಚಯಿಸಬೇಕು ಎಂದು ಹೋಗಿ ನಾವು ಸಾಲಗಾರರಾಗಿದ್ದೇವೆ. 18 ಸಾವಿರ ಬಿದಿರಿಗೆ ಕೊಡಬೇಕು. ಅಡುಗೆ ಅವರಿಗೆ ಒಂದೂವರೆ ಲಕ್ಷ ರೂ ನೀಡಬೇಕು. ಬೇಯಿಸುವವರಿಗೆ ನಿತ್ಯವೂ ಒಂದು ಸಾವಿರ ನೀಡಿದ್ದೇವೆ. ಮಳೆಯಿಂದ ಆಗಿರುವ ನಷ್ಟಕ್ಕೆ ನಮಗೆ ಪರಿಹಾರ ದೊರಕಿಸಿ ಕೊಡಿ ಎಂದು ಆದಿವಾಸಿ ಆಹಾರ ಮಳಿಗೆದಾರ ವಿಜಯ್ ತಿಳಿಸುತ್ತಾರೆ.












Click it and Unblock the Notifications