Black Panther: ನಾಗರಹೊಳೆಯಲ್ಲಿ ಪ್ರತ್ಯಕ್ಷನಾದ ಭಗೀರ..ಯಾರಿದು ನಿಮಗೆ ಗೊತ್ತಾ?
ಮೈಸೂರು, ಏಪ್ರಿಲ್ 29: ನಾಗರಹೊಳೆ ಅಭಯಾರಣ್ಯದಲ್ಲಿ ಮತ್ತೊಮ್ಮೆ ಭಗೀರನ ದರ್ಶನವಾಗಿದೆ. ಸುಮಾರು ಎಂಟು ತಿಂಗಳ ಬಳಿಕ ಅರಣ್ಯದ ನಡುವೆ ಗಾಂಭೀರ್ಯದ ಹೆಜ್ಜೆ ಹಾಕುತ್ತಾ ಹುಲ್ಲಿನಲ್ಲಿ ಹೊರಳಾಡುತ್ತಿದ್ದ ಭಗೀರನ ಕಂಡು ಸಫಾರಿಗೆ ತೆರಳಿದವರು ಖುಷಿಪಟ್ಟಿದ್ದಾರೆ.
ಕಪ್ಪು ಚಿರತೆಯಾಗಿರುವ ಈತನನ್ನು ಎಲ್ಲರೂ ಪ್ರೀತಿಯಿಂದ ಭಗೀರ ಎಂದು ಕರೆಯುತ್ತಾರೆ. ಈ ಭಗೀರನಿಗಾಗಿ ಕಬಿನಿ ಹಿನ್ನೀರ ಪ್ರದೇಶದಲ್ಲಿ ಸಫಾರಿಗೆ ತೆರಳುವ ಪ್ರತಿಯೊಬ್ಬರೂ ಕಾತರದಿಂದ ಕಾಯುತ್ತಾರೆ. ಆದರೆ ಈತ ಪ್ರವಾಸಿಗರಿಗೆ ಅದರಲ್ಲೂ ಪ್ರಾಣಿಪ್ರಿಯರಿಗೆ ದರ್ಶನ ನೀಡುವುದು ಅಪರೂಪ. ಆದರೂ ಆಗೊಮ್ಮೆ ಈಗೊಮ್ಮೆ ಕೆಲವರಿಗೆ ಕಾಣಿಸಿ ಅಚ್ಚರಿ ಮೂಡಿಸುತ್ತಾನೆ.

ಕೆಲವು ವರ್ಷಗಳಿಂದ ಒಮ್ಮೊಮ್ಮೆ ಕಾಣಿಸುತ್ತಿದ್ದ ಚಿರತೆ ಇತ್ತೀಚೆಗಿನ ದಿನಗಳಲ್ಲಿ ಎಲ್ಲಿಯೂ ಕಾಣಿಸಿರಲಿಲ್ಲ. ಆದರೆ ಎಂಟು ತಿಂಗಳ ಬಳಿಕ ಇದೀಗ ನಾಗರಹೊಳೆಯಲ್ಲಿ ಸಫಾರಿಗೆ ಹೋದವರಿಗೆ ಭಗೀರ ಕಾಣಿಸಿರುವುದು ಅಚ್ಚರಿ ಜತೆಗೆ ಖುಷಿಯನ್ನುಂಟು ಮಾಡಿದೆ. ಸಾಮಾನ್ಯವಾಗಿ ಕಬಿನಿ ಹಿನ್ನೀರಿನ ಕಾಡಿನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾ ಪ್ರಾಣಿಪ್ರಿಯರು ಆನಂದತುಂದಿಲರನ್ನಾಗಿಸುತ್ತಿದ್ದ ಭಗೀರ ಕಳೆದ ಹಲವು ಸಮಯಗಳಿಂದ ಯಾರ ಕಣ್ಣಿಗೆ ಕಾಣಿಸದೆ ಸಫಾರಿಗೆ ತೆರಳಿದವರಿಗೆ ನಿರಾಸೆ ಮೂಡಿಸುತ್ತಾ ಬಂದಿದ್ದನು.
ಭಗೀರನಿಗಾಗಿ ಪ್ರವಾಸಿಗರ ಹುಡುಕಾಟ
ಹೆಚ್ಚಿನ ಪ್ರವಾಸಿಗರು ಸಫಾರಿಗೆ ಹೋದಾಗಲೆಲ್ಲ ಎಲ್ಲಿಯಾದರೂ ಭಗೀರ ಕಾಣಿಸುತ್ತಾನಾ ಎಂದು ಆಸೆಗಣ್ಣಿನಿಂದ ಹುಡುಕಾಟ ನಡೆಸುತ್ತಿದ್ದರು. ಆದರೆ ಎಲ್ಲಿಯೂ ಕಾಣಿಸದೆ ಇದ್ದಾಗ ನಿರಾಸೆಯಿಂದ ಹಿಂತಿರುಗುತ್ತಿದ್ದರು. ಇದೀಗ ಮತ್ತೆ ಪ್ರತ್ಯಕ್ಷಗೊಂಡು ದರ್ಶನ ನೀಡುತ್ತಿರುವುದು ಖುಷಿ ತಂದಿದೆ. ಇನ್ನು ನಾಗರಹೊಳೆ ವ್ಯಾಪ್ತಿಯಲ್ಲಿ ಎರಡು ಕರಿಚಿರತೆ ಇವೆ ಎಂದು ಹೇಳಲಾಗುತ್ತಿದೆ. ಇವುಗಳನ್ನು ನೋಡುವುದು ಪ್ರವಾಸಿಗರ ಪಾಲಿಗೊಂದು ಹಬ್ಬವೇ.
ಸಫಾರಿಗೆ ಹೋಗುವ ಎಲ್ಲ ಪ್ರವಾಸಿಗರಿಗೆ ಇವು ಕಾಣಿಸುವುದಿಲ್ಲ. ಯಾವತ್ತಾದರೂ ಒಮ್ಮೆ ಕಾಣಿಸುತ್ತವೆ. ಅದರಲ್ಲೂ ಭಗೀರನನ್ನು ಗುರುತಿಸುವುದು ಸುಲಭ ಕಾರಣ ಈತನ ಮುಖದಲ್ಲೊಂದು ಗಾಯದ ಗುರುತಿದೆ. ಈ ಗಾಯದ ಗುರುತಿನಿಂದಲೇ ಪ್ರಾಣಿಪ್ರಿಯರು ಈತನನ್ನು ಭಗೀರ ಎಂದು ಗುರುತಿಸುತ್ತಾರೆ. ಸಾಮಾನ್ಯವಾಗಿ ಈತನನ್ನು ನೋಡಲೆಂದೇ ಎಲ್ಲರೂ ಸಫಾರಿಯತ್ತ ತೆರಳುತ್ತಾರೆ.

ಪ್ರವಾಸಿಗರಿಗೆ ಖುಷಿಕೊಡುವ ಚಿರತೆ
ಅರಣ್ಯದ ನಡುವೆ ಹೋಗುವಾಗಲೆಲ್ಲ ಕಾಡಿನ ನಡುವೆ ಎಲ್ಲಿಯಾದರೂ ಭಗೀರ ಕಾಣಿಸುತ್ತಾನಾ ಎಂದು ಅತ್ತ ಇತ್ತ ಕಣ್ಣಾಡಿಸುತ್ತಾರೆ. ಆದರೆ ಎಲ್ಲಿಯೂ ಕಾಣಿಸದೆ ಇದ್ದಾಗ ಬೇಸರದಿಂದ ಹಿಂತಿರುಗುತ್ತಾರೆ. ಸಾಮಾನ್ಯವಾಗಿ ಭಗೀರ ಗಂಭೀರ ನಡಿಗೆಯಿಂದ ಗಮನಸೆಳೆಯುತ್ತಾನೆ. ಒಮ್ಮೊಮ್ಮೆ ನೆಲದ ಮೇಲೆ ಹೆಜ್ಜೆ ಹಾಕುತ್ತಾ ನಡೆದರೆ ಮತ್ತೊಮ್ಮೆ ಮರದ ಕೊಂಬೆಯಲ್ಲಿ ಮಲಗಿ ನಿದ್ದೆ ಮಾಡುತ್ತಾ ಅಥವಾ ಮರದ ಕೊಂಬೆಯಲ್ಲಿ ಗಾಬರಿಯ ನೋಟ ಬೀರುತ್ತಾ ನಿಂತ ದೃಶ್ಯಗಳು ಕಾಣಿಸುತ್ತಿದ್ದವು. ಈ ನೋಟಕ್ಕಾಗಿಯೇ ಪ್ರವಾಸಿಗರು ಕಾದು ಕುಳಿತು ಕೊಳ್ಳಬೇಕಾಗಿತ್ತು.
ಹಾಗೆನೋಡಿದರೆ, ನಾಗರಹೊಳೆಯಲ್ಲಿ ಸಫಾರಿಗೆ ತೆರಳುವ ಹೆಚ್ಚಿನ ಜನರು ಹುಲಿ, ಕಾಡಾನೆ, ಕಾಡುಕೋಣ, ಜಿಂಕೆಗಳು ಹೀಗೆ ಹಲವು ಪ್ರಾಣಿಗಳನ್ನು ನೋಡಿದರೂ ಕೂಡ ಕರಿ ಚಿರತೆ ಎಲ್ಲಾದರೂ ಕಾಣಿಸುತ್ತಾ ಎಂದು ಎಲ್ಲರೂ ಹುಡುಕುತ್ತಾರೆ. ಇದು ಕಾಣಿಸಿದಾಗ ಸಂಭ್ರಮಿಸುತ್ತಾರೆ. ಇದೀಗ ಕಾಣಿಸಿರುವುದು ಖುಷಿಕೊಟ್ಟಿದೆ. ಕರಿಚಿರತೆ ಅರ್ಥಾತ್ ಭಗೀರನ ನೋಡಬೇಕಾದರೆ ಸಫಾರಿಗೆ ತೆರಳಲೇ ಬೇಕಾಗುತ್ತದೆ.
ಹುಲ್ಲಿನ ಮೇಲೆ ಉರುಳಾಡುವ ಭಗೀರ
ಭಗೀರ ಕೆಲವು ವರ್ಷಗಳ ಹಿಂದೆ ಬೇರೊಂದು ಚಿರತೆ ಜೊತೆ ಕಾಳಗ ನಡೆಸಿ ಮುಖಕ್ಕೆ ಗಾಯ ಮಾಡಿಕೊಂಡಿತ್ತು. ಬಳಿಕ ಕಾಣಿಸಿಕೊಂಡಿರಲಿಲ್ಲ. ಕೊರೋನಾ ಬಳಿಕ ಒಮ್ಮೊಮ್ಮೆ ಕಾಣಿಸಿಕೊಂಡಿತ್ತು. ಆದಾದ ನಂತರ ಕಳೆದ ಎಂಟು ತಿಂಗಳ ಕಾಲ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಹೀಗಾಗಿ ಹೆಚ್ಚಿನ ಪ್ರಾಣಿಪ್ರಿಯರು ಎಲ್ಲಿಗೆ ಹೋಯಿತು? ಎಂದು ಪ್ರಶ್ನೆ ಮಾಡಿಕೊಳ್ಳುತ್ತಿದ್ದರು. ಆದರೀಗ ಸಫಾರಿಗೆ ಹೋದವರಿಗೆ ಕಾಣಿಸಿ ಖುಷಿ ನೀಡಿದ್ದಾನೆ. ನೆಲದ ಮೇಲೆ ಹೊರಳಾಡುತ್ತಾ ಖುಷಿಪಡುತ್ತಿದ್ದ ದೃಶ್ಯಗಳು ಪ್ರವಾಸಿಗರ ಕ್ಯಾಮರಾಗಳಲ್ಲಿ ಸೆರೆಯಾಗಿದೆ.

ಕಪ್ಪು ಚಿರತೆ ಹುಟ್ಟುವಾಗ ಕಪ್ಪು ಬಣ್ಣ ಹೊಂದಿಲ್ಲವಾದರೂ ಚರ್ಮರೋಗದ ಹಿನ್ನೆಲೆಯಲ್ಲಿ ಇದರ ಮೈಬಣ್ಣ ಕಪ್ಪಾಗುತ್ತದೆ. ಇದರಿಂದ ಚಿರತೆಯ ಆರೋಗ್ಯಕ್ಕೆ ತೊಂದರೆಯಾಗಲ್ಲ. ಇದು ಚಿರತೆ ನಡುವೆ ಹುಟ್ಟಿ ಮಾಮೂಲಿ ಚಿರತೆಗಿಂತ ಭಿನ್ನವಾಗಿ ಗೋಚರಿಸಿ ಕರಿಚಿರತೆಯಾಗಿ ಜೀವನ ಕಳೆಯುತ್ತದೆ. ಅದು ಏನೇ ಇರಲಿ ನಾಗರಹೊಳೆಯಲ್ಲಿ ಸಫಾರಿ ಮಾಡುವ ಪ್ರವಾಸಿಗರಿಗೆ ಅದರಲ್ಲೂ ಕಬಿನಿ ಹಿನ್ನೀರಿನಲ್ಲಿ ಸಫಾರಿ ನಡೆಸುವವರಿಗೆ ಮಾತ್ರ ಭಗೀರ ಕಾಣಿಸುತ್ತಾನೆ.
ದರ್ಶನ ನೀಡಿದರೂ ನೀಡಬಹುದು ಭಗೀರ
ಮುಂದೆ ನೀವು ಯಾವತ್ತಾದರೂ ಕಬಿನಿ ಹಿನ್ನೀರಿಗೆ ಸಫಾರಿಗೆ ತೆರಳಿದರೆ ಭಗೀರ ಪ್ರತ್ಯಕ್ಷವಾದರೂ ಪ್ರತ್ಯಕ್ಷವಾಗಬಹುದೇನೋ? ಅಂದ ಹಾಗೆ ಸಫಾರಿ ದಿನಕ್ಕೆ ನಾಲ್ಕು ಬಾರಿ ನಡೆಯಲಿದ್ದು ಮೊದಲನೆಯದು ಬೆಳಿಗ್ಗೆ 6ರಿಂದ 7.30, ಎರಡನೆಯದು 7.30ರಿಂದ 9 ಗಂಟೆ ಹಾಗೂ ಮಧ್ಯಾಹ್ನ 2ರಿಂದ 4ರವರೆಗೆ ಮತ್ತು ಸಂಜೆ 4 ರಿಂದ 5.30ರವರೆಗೆ ನಡೆಯಲಿದೆ. ಸಫಾರಿಗೆ ಟಿಕೆಟ್‌ಗಳನ್ನು ಬೆಳಿಗ್ಗೆ 6ರಿಂದ 7.30 ಹಾಗೂ ಮಧ್ಯಾಹ್ನ 2 ರಿಂದ 3.30ರೊಳಗೆ ಪಡೆದುಕೊಂಡು ಸಫಾರಿ ಮಾಡಬಹುದಾಗಿದೆ.












Click it and Unblock the Notifications