Breaking: ಬಿಜೆಪಿಗೆ ಒಲಿದ ಮೈಸೂರು ಮೇಯರ್ ಹುದ್ದೆ
ಮೈಸೂರು, ಆಗಸ್ಟ್ 25: ಇಂದು ನಡೆದ ಮೈಸೂರು ಮೇಯರ್ ಚುನಾವಣೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದು, ಮೇಯರ್ ಆಗಿ ಸುನಂದಾ ಪಾಲನೇತ್ರ ಆಯ್ಕೆಯಾಗಿದ್ದಾರೆ.
ಇತಿಹಾಸದಲ್ಲಿ ಮೊದಲಬಾರಿಗೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನವನ್ನು ಬಿಜೆಪಿ ಪಡೆದುಕೊಂಡಿದೆ. ವಾರ್ಡ್ ನಂ.56ರ ಬಿಜೆಪಿಯ ಸದಸ್ಯೆ ಸುನಂದಾ ಪಾಲನೇತ್ರ ಮೈಸೂರಿನ ನೂತನ ಮೇಯರ್ ಆಗಿ ಆಯ್ಕೆಗೊಂಡರು.
ಬಿಜೆಪಿಯ ಸುನಂದಾ ಪಾಲನೇತ್ರ ಪರ 26 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಶಾಂತಕುಮಾರಿ ಪರ 22 ಮತಗಳು ಲಭಿಸಿವೆ. ಅಧಿಕೃತ ಘೋಷಣೆಯೊಂದೇ ಬಾಕಿಯುಳಿದಿದೆ. ಮೈಸೂರು ಮೇಯರ್ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಕೊಂಡಿದ್ದರಿಂದ ಬಿಜೆಪಿಗೆ ಮೇಯರ್ ಹುದ್ದೆ ಲಭಿಸಿದೆ.

ಭಾರೀ ಕುತೂಹಲ ಮೂಡಿಸಿದ್ದ ಮೈಸೂರು ಮಹಾನಗರ ಪಾಲಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ವಾರ್ಡ್ ನಂ.59ರ ಬಿಜೆಪಿ ಪಾಲಿಕೆ ಸದಸ್ಯೆ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಂಬಂಧಿ ಸುನಂದಾ ಪಾಲನೇತ್ರ ಮೈಸೂರು ಮಹಾನಗರ ಪಾಳಿಕೆಯ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಬುಧವಾರ ನಡೆದ ಮೇಯರ್ ಆಯ್ಕೆ ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿಯ ಪಾಲಿಕೆ ಸದಸ್ಯೆ ಸುನಂದಾ ಪಾಲನೇತ್ರ ಮೇಯರ್ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದರು. ಬಳಿಕ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕ್ಕಾರಕ್ಕೇರಿದ್ದು, ಆ ಮೂಲಕ ಮೇಯರ್ ಆಗುವ ಸುನಂದಾ ಕನಸು ನನಸಾಗಿದೆ.
ಮೈಸೂರು ಪಾಲಿಕೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಕೌನ್ಸಿಲ್ ಸಭಾಂಗಣದಲ್ಲಿ ಭಾರತ್ ಮಾತಾ ಕೀ ಜೈ ಎಂದು ಸಂಸದ ಪ್ರತಾಪ್ ಸಿಂಹ ಘೋಷಣೆ ಕೂಗುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.

ಮೈಸೂರು ಪಾಲಿಕೆಯಲ್ಲಿ ಈ ಹಿಂದೆ ಇದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಮುರಿದುಬಿದ್ದ ಪರಿಣಾಮ ಮೇಯರ್ ಸ್ಥಾನ ಬಿಜೆಪಿಗೆ ಒಲಿಯಿತು.
ಈ ಬಾರಿಯೂ ಮೈತ್ರಿ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಶಾಕ್ ಕೊಟ್ಟ ಜೆಡಿಎಸ್ ಸದಸ್ಯರು, ವೋಟಿಂಗ್ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಂತಕುಮಾರಿಗೆ ಬೆಂಬಲ ನೀಡದ ಪರಿಣಾಮ, ಮೇಯರ್ ಗದ್ದುಗೆ ಏರುವ ಕಾಂಗ್ರೆಸ್ ನಾಯಕರ ಕನಸು ನುಚ್ಚು ನೂರಾಯಿತು.
ಈ ನಡುವೆ ಮೈಸೂರು ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯರು ಕೈಕೊಟ್ಟ ಕಾರಣ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಜೆಡಿಎಸ್ ವಿರುದ್ಧ ಘೋಷಣೆ ಕೂಗುತ್ತಾ ಕೌನ್ಸಿಲ್ ಸಭಾಂಗಣದಿಂದ ಹೊರ ನಡೆದರು.
ಸುನಂದಾ ಪಾಲನೇತ್ರ ಪರ 26 ಮತ, ಕಾಂಗ್ರೆಸ್ ಪಕ್ಷದ ಶಾಂತಕುಮಾರಿ 22 ಮತ ಗಳಿಸಿದರೆ, ಜೆಡಿಎಸ್ ಪಕ್ಷದ ಅಶ್ವಿನಿ ಅನಂತು 19 ಮತ ಪಡೆದುಕೊಂಡರು. ಇದರೊಂದಿಗೆ ಮೈಸೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕಮಲ ಪಕ್ಷಕ್ಕೆ ಮೇಯರ್ ಪಟ್ಟ ಲಭಿಸಿದೆ.
ಈ ಹಿಂದೆ ಜೆಡಿಎಸ್- ಕಾಂಗ್ರೆಸ್ ದೋಸ್ತಿ ಆಡಳಿತದಿಂದ ಮೇಯರ್ ಪಟ್ಟದಿಂದ ವಂಚಿತವಾಗಿದ್ದ ಬಿಜೆಪಿ, ಹೆಚ್ಚು ಸದಸ್ಯರ ಬಲ ಹೊಂದಿದ್ದರೂ, ಪಾಲಿಕೆ ಅಧಿಕಾರ ಹಿಡಿಯುವ ಅದೃಷ್ಟ ಸಿಕ್ಕಿರಲಿಲ್ಲ. ಇಂದಿನಿಂದ 2022 ಫೆಬ್ರವರಿ 23ರವರಗೆ ಸುನಂದಾ ಪಾಲನೇತ್ರ ಮೇಯರ್ ಆಗಿ ಅಧಿಕಾರದಲ್ಲಿರಲಿದ್ದಾರೆ.
ಕಾಂಗ್ರೆಸ್ ವಿರುದ್ಧ ಜೆಡಿಎಸ್ ಮುಖಂಡರ ಆಕ್ರೋಶ
ಕಾಂಗ್ರೆಸ್ ವಿರುದ್ಧ ಜೆಡಿಎಸ್ ಮುಖಂಡರು ಪಾಲಿಕೆ ಮುಂಭಾಗ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. "ಎಲ್ಲಾ ಹುದ್ದೆ ನಮಗೆ ಬೇಕು ಎಂಬುದು ಕಾಂಗ್ರೆಸ್‌ನ ಅಧಿಕಾರದ ಲಾಲಸೆ. ಉಪ ಮೇಯರ್, ಸ್ಥಾಯಿ ಸಮಿತಿ ಎಲ್ಲ ಹುದ್ದೆ ಇದ್ದರೂ ಮೇಯರ್ ಕೂಡ ನಮಗೆ ಬೇಕೆಂಬ ದುರಾಸೆ,'' ಎಂದು ಕಾಂಗ್ರೆಸ್ ವಿರುದ್ಧ ಎಂಎಲ್‌ಸಿ ಶ್ರೀಕಂಠೇಗೌಡ ಆಕ್ರೋಶ ಹೊರಹಾಕಿದರು.
"ಇತಿಹಾಸ ಮೊದಲ ಬಾರಿಗೆ ಸುನಂದಾ ಪಾಲನೇತ್ರ ಮೇಯರ್ ಆಗಿದ್ದಾರೆ. ಮೂರು ದಶಕಗಳ ಕಾಲ ಕಾದಿದ್ದೆವು. ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಿಎಂ ಬೊಮ್ಮಾಯಿ ಹಾಗೂ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಂದು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಕ್ಷಣ. ಬಹಳ ವರ್ಷಗಳಿಂದ ನಮ್ಮ ಕಾರ್ಯಕರ್ತರು ಈ ಕ್ಷಣವನ್ನು ಎದುರು ನೋಡುತ್ತಿದ್ದರು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಜೆಡಿಎಸ್ ಪಕ್ಷದಿಂದ ಬಹುತೇಕ ದೂರ ಉಳಿದಿರುವ ಶಾಸಕ ಜಿ.ಟಿ. ದೇವೇಗೌಡ ಹಾಗೂ ಎಂಎಲ್‌ಸಿ ಸಂದೇಶ್ ನಾಗರಾಜ್ ಇಂದು ನಡೆದ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಿಂದ ದೂರ ಉಳಿದಿದ್ದರು.
ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ ಮಂಗಳವಾರ ಜೆಡಿಎಸ್ ಪಕ್ಷ ತೊರೆಯುವುದಾಗಿ ಘೋಷಿಸಿದ್ದರು. ಮೇಯರ್ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಾ.ರಾ. ಮಹೇಶ್, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಜಿಟಿಡಿಗೆ ಟಾಂಗ್ ಕೊಟ್ಟಿದ್ದಾರೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಭಿನಂದನೆ
ಮೈಸೂರು ಪಾಲಿಕೆಯಲ್ಲಿ ಬಿಜೆಪಿಗೆ ಮೇಯರ್ ಹುದ್ದೆ ಲಭಿಸಿದ್ದಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
"ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಮೊದಲ ಬಾರಿಗೆ ಬಿಜೆಪಿ ಪಡೆದುಕೊಂಡಿದ್ದು, ಇದು ಪಕ್ಷದ ಬೇರುಗಳು ವಿಸ್ತಾರಗೊಳ್ಳುತ್ತಿರುವ ಪ್ರಬಲ ಸಂಕೇತವಾಗಿದೆ. ಮೈಸೂರಿನ ಮೇಯರ್ ಆಗಿ ಆಯ್ಕೆಯಾಗಿರುವ ಪಕ್ಷದ ಅಭ್ಯರ್ಥಿ ಸುನಂದಾ ಪಾಲನೇತ್ರ ಅವರಿಗೆ ಹಾರ್ದಿಕ ಅಭಿನಂದನೆಗಳು," ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications