50 ವರ್ಷದ ರಾಜಕೀಯ ಜೀವನಕ್ಕೆ ಶ್ರೀನಿವಾಸ್ ಪ್ರಸಾದ್ ನಿವೃತ್ತಿ
ಮೈಸೂರು, ಅಕ್ಟೋಬರ್ 17: ನನ್ನ ರಾಜಕೀಯ ಜೀವನಕ್ಕೆ 50 ವರ್ಷ ಆಗುತ್ತಿದೆ. ಇನ್ನು ಒಂದೂವರೆ ವರ್ಷಕ್ಕೆ ಸಂಸದ ಅವಧಿ ಮುಕ್ತಾಯವಾಗುತ್ತದೆ. ಅಲ್ಲಿಗೆ ನಾನು ನಿವೃತ್ತಿ ಆಗುತ್ತೇನೆ ಎಂದು ಹಿರಿಯ ರಾಜಕಾರಣಿ, ದಲಿತ ನಾಯಕ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ತಮ್ಮ 50 ವರ್ಷದ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಇದುವರೆಗೆ 14 ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. 11 ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದೇನೆ. 1977ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದೆ. ಒಂದೂವರೆ ವರ್ಷ ಕಳೆದರೆ ನಾನು ರಾಜಕೀಯಕ್ಕೆ ಬಂದು 50 ವರ್ಷವಾಗಲಿದೆ. ಹಾಗಾಗಿ ರಾಜಕೀಯವಾಗಿ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
ಈಗ ನನ್ನ ಆರೋಗ್ಯ ಸರಿಯಿಲ್ಲ, ನನಗೀಗ ಹೆಚ್ಚು ಸಮಯ ನಿಲ್ಲಲಾಗುವುದಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲೇ ಸ್ಪರ್ಧಿಸುವ ಇಚ್ಛೆ ಇರಲಿಲ್ಲ. ಆದರೆ ಕ್ಷೇತ್ರದ ಮತದಾರರು ಕಡೆಯ ಚುನಾವಣೆಯಲ್ಲಿ ಗೆದ್ದು ಅವಧಿ ಮುಗಿದ ಬಳಿಕ ನಿವೃತ್ತಿಯಾಗಿ ಎಂದು ಮನವಿ ಮಾಡಿದ್ದರು. ಹಾಗಾಗಿ ಚುನಾವಣೆಗೆ ಸ್ಪರ್ಧಿಸಿದೆ. ನನ್ನ ರಾಜಕೀಯ ನಿವೃತ್ತಿ ಬಳಿಕ ನನ್ನ ಮಕ್ಕಳು ರಾಜಕಾರಣಕ್ಕೆ ಬರುವುದಿಲ್ಲ ಎಂದು ಹೇಳಿದರು.
ನನಗೆ ನ್ಯಾಷನಲ್ ಎಕ್ಸ್‌ಪೋಷರ್ ಸಿಕ್ಕಿದೆ. ಸಂಸತ್ತು ಜಗತ್ತಿನ ಪ್ರಜಾಪ್ರಭುತ್ವದ ಬಹುದೊಡ್ಡ ಕೇಂದ್ರ. ಸ್ಥಾಯಿ ಸಮಿತಿಗಳ ಮೂಲಕ ದೇಶದ ಪ್ರವಾಸ ಮಾಡಿದ್ದೇನೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮನವರಿಕೆ ಮಾಡಿಕೊಂಡಿದ್ದೇನೆ. ಜಗತ್ತು ಹುಚ್ಚರ ಸಂತೆಯಾಗಿದ್ದು, ಹೇಗೋ ಬದುಕುತ್ತಿದ್ದೇವೆ. ಅಸ್ಪೃಶ್ಯತೆ ಮಾನಸಿಕ ರೋಗ. ಹಿಂದೂ ಧರ್ಮದ ಅಸಮಾನತೆ ವಿರುದ್ಧ ಹೋರಾಡಲು ಸಾಧ್ಯವಾಗದೆ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಸೇರಿದರು. ನಮಗೆ ಧಾರ್ಮಿಕ ವಿಮೋಚನೆ ನೀಡಿದರು ಎಂದು ತಿಳಿಸಿದರು.

ಕಾಂಗ್ರೆಸ್‌ಗೆ ಗಜೇಂದ್ರ ಮೋಕ್ಷ
22 ವರ್ಷಗಳ ಸುದೀರ್ಘ ಅವಧಿಯ ಬಳಿಕ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ಈ ಮೂಲಕ ಕಾಂಗ್ರೆಸ್‌ಗೆ ಗಜೇಂದ್ರ ಮೋಕ್ಷ ಸಿಕ್ಕಂತಾಗಿದೆ. ಆನೆ ನೀರು ಕುಡಿಯಲು ಕೆರೆಯ ಬಳಿ ಹೋದಾಗ ಮೊಸಳೆ ಆನೆಯ ಕಾಲು ಹಿಡಿದುಕೊಳ್ಳುತ್ತದೆ. ಆಗ ವಿಷ್ಣು ಚಕ್ರವನ್ನು ಪ್ರಯೋಗಿಸಿದಾಗ ಮೊಸಳೆಯಿಂದ ಆನೆಗೆ ಮುಕ್ತಿ ಸಿಗುತ್ತದೆ. ಅದೇ ರೀತಿ ಈಗ ಕಾಂಗ್ರೆಸ್ ಪಕ್ಷದ ಪರಿಸ್ಥಿತಿಯೂ ಆಗಿದೆ ಎಂದು ಹೇಳಿದರು.

ಹಿಂದೆ ಜನ್ಮದಿನವೇ ನಿವೃತ್ತಿ ಘೋಷಣೆ
ಕಳೆದ ವರ್ಷ ಆಗಸ್ಟ್ 6ರಂದು ತಮ್ಮ 75ನೇ ವಸಂತಕ್ಕೆ ಕಾಲಿಟ್ಟ ದಿನ 'ಶ್ರೀನಿವಾಸ್ ಪ್ರಸಾದ್‌ರ 50 ವರ್ಷದ ರಾಜಕೀಯ ಜೀವನ ಪುಸ್ತಕ ಬಿಡುಗಡೆ' ಸಮಾರಂಭದಲ್ಲಿ ಮುಂದಿನ ಚುನಾವಣೆಯಲ್ಲಿ ತಾವೂ ಸ್ಪರ್ಧಿಸುವುದಿಲ್ಲ ಎಂದು ಪ್ರಸಾದ್ ಘೋಷಣೆ ಮಾಡಿದ್ದರು.
"ನಾಲ್ಕು ವರ್ಷದ ಹಿಂದೆಯೇ ನಾನು ನಿವೃತ್ತಿ ಬಯಸಿದ್ದೆ. ಆದರೆ ರಾಜಕೀಯ ಬೆಳವಣಿಗೆಗಳಿಂದಾಗಿ ಕಾರಣದಿಂದಾಗಿ ಮತ್ತೆ ಸ್ಪರ್ಧೆ ಮಾಡಿದ್ದೆ. ಈಗ ಆತ್ಮತೃಪ್ತಿಯಿಂದ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುತ್ತಿದ್ದು, ಮುಂದಿನ ಚುನಾವಣೆಗಳಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ" ಎಂದು ವಿ. ಶ್ರೀನಿವಾಸ ಪ್ರಸಾದ್ ಹೇಳಿದ್ದರು.

ಮಂತ್ರಿಸ್ಥಾನ ಸಿಗದಿದ್ದಕ್ಕೆ ಕಾಂಗ್ರೆಸ್ ಬಿಟ್ಟಿದ್ದ ಪ್ರಸಾದ್
2013ರ ಚುನಾವಣೆಯಲ್ಲಿ ಗೆದ್ದ ಬಳಿಕ ವಿ. ಶ್ರೀನಿವಾಸ ಪ್ರಸಾದ್ ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದರು. ಆದರೆ ಸಂಪುಟ ಪುನಾರಚನೆ ವೇಳೆ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಇದರಿಂದಾಗಿ ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ವಿರುದ್ಧ ಅಸಮಾಧಾನಗೊಂಡಿದ್ದ ಅವರು ನಂಜನಗೂಡು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು.

ಲೋಕಸಭೆಯಲ್ಲಿ ಗೆಲುವು
ನಂತರ ನಂಜನಗೂಡು ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು, ಕಾಂಗ್ರೆಸ್‌ನ ಕಳಲೆ ಕೇಶವಮೂರ್ತಿ ವಿರುದ್ಧ ಸೋಲು ಕಂಡರು. 2018ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ವಿ. ಶ್ರೀನಿವಾಸ ಪ್ರಸಾದ್‌ರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಿಸಿತು. 2018ರ ಚುನಾವಣೆಗೆ ಅವರು ಕಣಕ್ಕಿಳಿಯಲಿಲ್ಲ. ನಂಜನಗೂಡಿನಲ್ಲಿ ಶ್ರೀನಿವಾಸ ಪ್ರಸಾದ್ ಅಳಿಯ ಹರ್ಷವರ್ಧನ್ ಬಿಜೆಪಿಯಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಇವರು 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರದಲ್ಲಿ ಸ್ಪರ್ಧಿಸಿ ವಿಜಯ ಸಾಧಿಸಿದ್ದರು.












Click it and Unblock the Notifications