ರೋಹಿಣಿ ಸಿಂಧೂರಿ ವಿರುದ್ಧ ಸಿಡಿದೆದ್ದ ಪ್ರತಾಪ್ ಸಿಂಹ: ರೂಪಾಗೆ ಬೆಂಬಲ ನೀಡಿದ ಮೈಸೂರು ಸಂಸದ ಹೇಳಿದ್ದೇನು?
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ ರೂಪಾ ನಡುವಿನ ವಿವಾದದ ರಣಾಂಗಣಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ದುಮುಕಿದ್ದಾರೆ. ಸಿಂಧೂರಿ ವಿರುದ್ಧ ರೂಪಾ ಮಾಡಿರುವ ಆರೋಪಗಳು ಸರಿಯಾಗಿವೆ. ಅವುಗಳ ತನಿಖೆ ಆಗಲಿ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರು, ಫೆಬ್ರವರಿ 20: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ ರೂಪಾ ನಡುವಿನ ವಿವಾದದ ರಣಾಂಗಣಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ದುಮುಕಿದ್ದಾರೆ. ಸಿಂಧೂರಿ ವಿರುದ್ಧ ರೂಪಾ ಮಾಡಿರುವ ಆರೋಪಗಳು ಸರಿಯಾಗಿವೆ. ಅವುಗಳ ತನಿಖೆ ಆಗಲಿ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಈ ವಿಚಾರವಾಗಿ ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪ್ರತಾಪ್ ಸಿಂಹ, 'ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಕುರಿತು ಐಪಿಎಸ್ ಅಧಿಕಾರಿ ಡಿ ರೂಪ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಪ್ರಶ್ನೆಗಳು ನೈತಿಕವಾಗಿವೆ. ಕಾನೂನಿಗೂ ಒಳಪಡುತ್ತವೆ. ಅವರ ಎತ್ತಿರುವ ಪ್ರಶ್ನೆಗಳ ಸತ್ಯಾಸತ್ಯತೆಗಳನ್ನು ಹುಡುಕುವ ಪ್ರಯತ್ನವಾಗಬೇಕಿದೆ. ಇಲ್ಲಿ ನಡೆದಿರುವ ವಾಸ್ತವವು ಬಯಲಿಗೆ ಬರಬೇಕಿದೆ. ಈ ಘಟನೆ, ಆರೋಪಗಳ ಒಳಗಿನ ಸತ್ಯಗಳನ್ನು ಶೋಧನೆ ಮಾಡಬೇಕಿದೆ. ಇದನ್ನು ಪತ್ರಕರ್ತರು ಮಾಡಲಿ' ಎಂದು ಹೇಳಿದರು.

'ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಒಂದೇ ದಿನ 24 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟರು. ಆ ವೇಳೆ, ಮೈಸೂರು ಜಿಲ್ಲಾಡಳಿತದ ವಿರುದ್ಧ ಆರೋಪಗಳು ಕೇಳಿಬಂದವು. ಇದಕ್ಕೆ ಯಾರು ಹೊಣೆ ಎಂಬ ಸತ್ಯ ಗೊತ್ತಾಗಲಿಲ್ಲ. ನಮ್ಮ ಮೇಲೆಯೇ ಆರೋಪಗಳನ್ನು ಹೊರಿಸಿಲಾಯಿತು. ಆ ನಂತರ ಆಕ್ಸಿಜನ್ ಉಸ್ತುವಾರಿಯನ್ನು ನಾನು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿಯಾಗಿರುವ ಸಚಿವ ಸೋಮಶೇಖರ್ ತೆಗೆದುಕೊಂಡೆವು' ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ರೋಹಿಣಿ- ರೂಪಾ ಅವರ ವಿಚಾರವಾಗಿ ಮಾತನಾಡಿರುವ ಬಿಜೆಪಿ ಎಂಎಲ್‌ಸಿ ಎಚ್ ವಿಶ್ವನಾಥ್, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರವು ಈ ಇಬ್ಬರು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಈ ಇಬ್ಬರು ಅಧಿಕಾರಗಳ ಮೇಲೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ನೀಡುವುದಾಗಿ ಹೇಳಿದ್ದಾರೆ.
ರೋಹಿಣಿ ಸಿಂಧೂರಿ ಅವರು ಕೆಲವು ಐಎಸ್‌ಎಸ್ ಅಧಿಕಾರಿಗಳಿಗೆ ಅಶ್ಲೀಲ ಫೋಟೊಗಳನ್ನು ಕಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. 'Not So Decent' ಎಂಬ ಬರಹದ ಅಡಿಯಲ್ಲಿ ರೋಹಿಣಿ ಸಿಂಧೂರಿ ಅವರ ಫೋಟೋಗಳನ್ನು ಸಹ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ. ಡಿ ರೂಪಾ ಅವರ ವಿರುದ್ಧ ರೋಹಿಣಿ ಸಿಂಧೂರಿ ಅವರ ಪತಿ ದೂರು ನೀಡಿದ್ದಾರೆ. ಈ ಇಬ್ಬರು ಅಧಿಕಾರಿಗಳು ಇಂದು (ಸೋಮವಾರ) ವಿಧಾನಸೌಧಕ್ಕೆ ತೆರಳಿ ಮೇಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ರೂಪಾ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿಯೂ ಅವರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರೂಪಾ ಕಾನೂನು ಹೋರಾಟಕ್ಕೆ ಸಿದ್ದರಿರುವುದಾಗಿ ಹೇಳಿದ್ದಾರೆ.

ಈ ಎಲ್ಲ ಬೆಳವಣಿಗಳ ನಡುವೆ ಟ್ವೀಟ್ ಮಾಡಿರುವ ಮಾಜಿ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಪತ್ನಿ, ಕಾಂಗ್ರೆಸ್ ಮುಖಂಡೆ ಕುಸುಮಾ ಹನುಮಂತಯ್ಯ ಅವರು ಡಿ ರೂಪಾ ಪರ ಬ್ಯಾಟ್ ಬೀಸಿದ್ದಾರೆ. 'Karma will come back to you' ಎಂದು ರೋಹಿಣಿ ಸಿಂಧೂರಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ. ಕುಸುಮಾ ಅವರಿಗೆ ರೂಪಾ ಅವರು ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ, ಪ್ರತಿಕ್ರಿಯಿಸಿರುವ ಡಿಕೆ ರವಿ ತಾಯಿ ಗೌರಮ್ಮ, ತಮ್ಮ ಮಗನ ಹೆಸರನ್ನು ಬಳಸದಂತೆ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications