Karnataka election 2023: ಮಂಡ್ಯದಲ್ಲೂ ಬಿಜೆಪಿ ಬಾವುಟ ಹಾರಾಡುವಂತೆ ಮಾಡಬೇಕು: ಪ್ರತಾಪ್ ಸಿಂಹ
ನರಸಿಂಹರಾಜ ಕ್ಷೇತ್ರದ ಜೊತೆಗೆ ಮಂಡ್ಯದಲ್ಲೂ ಬಿಜೆಪಿ ಬಾವುಟ ಹಾರಾಡುವಂತೆ ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಕಾರ್ಯಕರ್ತರಿಗೆ ಸೂಚಿಸಿದರು.
ಮೈಸೂರು, ಮಾರ್ಚ್, 05: ಮಾರ್ಚ್ 12ರಂದು ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯದಲ್ಲಿ ಉದ್ಘಾಟಿಸಲಿದ್ದಾರೆ. ನರಸಿಂಹರಾಜ ಕ್ಷೇತ್ರದ ಜೊತೆಗೆ ಮಂಡ್ಯದಲ್ಲೂ ಬಿಜೆಪಿ ಬಾವುಟ ಹಾರಾಡುವಂತೆ ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಹಿನ್ನೆಲೆಯಲ್ಲಿ ಭಾನುವಾರ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ರೋಡ್ ಶೋನಲ್ಲಿ ಅವರು ಮಾತನಾಡಿದರು. ವಿಜಯ ಸಂಕಲ್ಪ ಯಾತ್ರೆಯ ಮೂಲಕ ಬಿಜೆಪಿ ಸರ್ಕಾರದ ಸಾಧನೆ, ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡಬೇಕು. ಈ ಮೂಲಕ ಮುಂದಿನ ಚುನಾವಣೆಯಲ್ಲಿ ನರಸಿಂಹರಾಜ ಕ್ಷೇತ್ರದಲ್ಲೂ ಕಮಲ ಅರಳಿಸಬಹುದು. ನರಸಿಂಹರಾಜ ಎನ್ನುವುದು ಮಹಾರಾಜರ ಹೆಸರು ಹೊಂದಿರುವ ಕ್ಷೇತ್ರವಾಗಿದೆ. ಆದ್ದರಿಂದ ಮಹಾರಾಜರು ಆರಾಧಿಸುವ ಶ್ರೀ ಚಾಮುಂಡೇಶ್ವರಿ ತಾಯಿ ಭಕ್ತರು ಮಾತ್ರ ಈ ಕ್ಷೇತ್ರದಲ್ಲಿ ಗೆಲ್ಲಬೇಕು ಎಂದರು.

ನರಸಿಂಹರಾಜದಲ್ಲೂ ಜಯ ಸಾಧಿಸಬೇಕು
ಮೈಸೂರು ನಗರದಲ್ಲಿ ಕೃಷ್ಣರಾಜ, ಚಾಮರಾಜ ಕ್ಷೇತ್ರಗಳ ಜೊತೆಗೆ ಈ ಬಾರಿ ನರಸಿಂಹರಾಜ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಜಯ ಸಾಧಿಸಬೇಕು. ಅಮೃತ ಯೋಜನೆಯಡಿ ನರಸಿಂಹರಾಜ ಕ್ಷೇತ್ರಕ್ಕೆ 60 ಎಂಎಲ್‌ಡಿ ನೀರು ಹರಿಸುವ ಕೆಲಸ ಆಗಿದೆ. ನರಸಿಂಹರಾಜ ಕ್ಷೇತ್ರದಲ್ಲಿ ನಿರ್ಮಿಸಿರುವ ಹೊಸ ಜಿಲ್ಲಾಧಿಕಾರಿ ಕಚೇರಿಗೆ ಜಾಗ ನೀಡಿದ್ದು ಕೂಡ ನರೇಂದ್ರ ಮೋದಿಯವರ ಸರ್ಕಾರವಾಗಿದೆ. ಮುಂದೆ ಕ್ಷೇತ್ರದ ಪ್ರತಿಯೊಬ್ಬ ನಿರ್ಗತಿಕರಿಗೆ ಮನೆ ಕಟ್ಟಿಸಿಕೊಡುವ ಕೆಲಸ ಮಾಡಲಾಗುತ್ತದೆ ಎಂದರು.
ಅಭಿವೃದ್ಧಿ ಕೆಲಸಗಳನ್ನ ಎಲ್ಲರಿಗೂ ತಲುಪಿಸಬೇಕು
ಆದ್ದರಿಂದ ನಮ್ಮ ಅಭಿವೃದ್ಧಿ ಕೆಲಸಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ನರಸಿಂಹರಾಜ ಕ್ಷೇತ್ರದಲ್ಲಿ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಬೇಕು. ಸಿದ್ದರಾಮಯ್ಯ ಯಾರ ಪರ ಇದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. 2015ರಲ್ಲಿ ನರಸಿಂಹರಾಜ ಕ್ಷೇತ್ರದಲ್ಲಿ ಹಿಂದೂ ಕಾರ್ಯಕರ್ತ ರಾಜು ಹತ್ಯೆಯಾಗುತ್ತದೆ. ಆ ವೇಳೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮದುವೆ, ಬೀಗರ ಊಟ ಎಂದು ವಾರಕ್ಕೆ ಒಂದು ಬಾರಿ ಮೈಸೂರಿಗೆ ಬರುತ್ತಿದ್ದರು. ಆಗ ಅವರು ರಾಜು ಮನೆಗೆ ಹೋಗಲಿಲ್ಲ. ಆದ್ದರಿಂದ ನಮ್ಮ ಕಾರ್ಯಕರ್ತ ಬಂಧುಗಳು ಅದನ್ನು ಮರೆಯದೆ ಈ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಪಾಠ ಕಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಿ.ವೈ.ರಾಘವೇಂದ್ರ, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಮಾಜಿ ಮೇಯರ್ ಸಂದೇಶ್ ಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications