Bird Flu: ಹಕ್ಕಿಜ್ವರ ತಡೆಗೆ ಮೈಸೂರು ಗಡಿಯಲ್ಲಿ ತೀವ್ರ ಕಟ್ಟೆಚ್ಚರ
ಮೈಸೂರು, ಮಾರ್ಚ್ 05: ರಾಜ್ಯದ ಕೆಲವೆಡೆ ಹಕ್ಕಿಜ್ವರ ಕಾಣಿಸಿಕೊಂಡಿರುವ ಬೆನ್ನಲ್ಲೇ ಮೈಸೂರು ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಗಡಿ ಭಾಗದಲ್ಲಿ ಚೆಕ್‌ಪೋಸ್ಟ್ ನಿರ್ಮಾಣ ಮಾಡಿ, ತಪಾಸಣೆ ನಡೆಸುವ ಮೂಲಕ ಯಾವುದೇ ಸೋಂಕು ಜಿಲ್ಲೆಯನ್ನು ಪ್ರವೇಶಿಸದಂತೆ ನೋಡಿಕೊಳ್ಳಲಾಗುತ್ತಿದೆ.
ಇದುವರೆಗೆ ಜಿಲ್ಲೆಯಲ್ಲಿ ಈವರೆಗೆ ಹಕ್ಕಿಜ್ವರದ ಯಾವ ಲಕ್ಷಣವೂ ಕಂಡುಬಂದಿಲ್ಲ. ಆದರೂ ಆರೋಗ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ ಜಾಗರೂಕವಾಗಿವೆ. ಸೂಕ್ತ ಕ್ರಮ ವಹಿಸಲಾಗಿದೆ. ನೆರೆಯ ಕೇರಳ ರಾಜ್ಯದಲ್ಲಿ ಹಕ್ಕಿಜ್ವರ ಭೀತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಗಡಿ ಭಾಗ ಎಚ್.ಡಿ.ಕೋಟೆ ತಾಲೂಕಿನ ಬಾವಲಿ ಗ್ರಾಮದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ತಪಾಸಣೆ ಮಾಡಲಾಗುತ್ತಿದೆ.

ಕಳೆದೊಂದು ವಾರದಿಂದ ಬಳ್ಳಾರಿ, ರಾಯಚೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಹಲವು ಕೋಳಿಗಳು ಮೃತಪಟ್ಟಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಕೋಳಿ ಆಮದು ಮಾಡಿಕೊಳ್ಳುತ್ತಿರುವುದರ ಮೇಲೆ ನಿಗಾ ಇರಿಸಿದೆ. ಜೊತೆಗೆ ತಪಾಸಣೆ ನಡೆಸಿ, ಹಕ್ಕಿ ಜ್ವರವನ್ನು ಖಾತ್ರಿ ಪಡಿಸಿಕೊಳ್ಳಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದೆ.
ಹಕ್ಕಿಜ್ವರ ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ಪಶು ಸಂಗೋಪನಾ ಇಲಾಖೆ ವತಿಯಿಂದ ಜಾಗೃತ ತಂಡ ರಚನೆ ಮಾಡಲಾಗಿದ್ದು, ಕೋಳಿ ಸಾಕಣೆದಾರರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಪ್ರತಿ ಕೋಳಿ ಸಾಕಣೆ ಕೇಂದ್ರಗಳು, ರೈತರ ಮನೆಗಳು, ಗ್ರಾಮಗಳಿಗೆ ಭೇಟಿ ನೀಡಿ ಕರಪತ್ರ ಹಂಚಿಕೆ ಮಾಡಿ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

ಹಕ್ಕಿಗಳು ಅಥವಾ ಕೋಳಿಗಳು ಸಾವಿಗೀಡಾಗಿರುವುದು ಕಂಡುಬಂದರೆ ತಕ್ಷಣ ಪಶುಸಂಗೋಪನಾ ಇಲಾಖೆಯ ಗಮನಕ್ಕೆ ತರಬೇಕು ಎಂದು ರೈತರಿಗೆ ತಿಳಿಸಲಾಗಿದೆ. ಹಕ್ಕಿಜ್ವರ ಹರಡುವುದರ ಕುರಿತು ಮತ್ತು ಅದನ್ನು ತಡೆಯುವ ಕ್ರಮಗಳ ಬಗ್ಗೆ ಪಶುವೈದ್ಯರು ರೈತರಿಗೆ ಮಾಹಿತಿ ನೀಡುತ್ತಾರೆ. ಕೋಳಿ ಸಾಕಣೆ ಕೇಂದ್ರ ಮತ್ತು ಮಾಂಸ ಸಂಸ್ಕರಣೆ ಘಟಕಗಳಲ್ಲಿ ಕೆಲಸ ಮಾಡುವವರಿಗೆ ಹಕ್ಕಿಜ್ವರದ ಸೋಂಕು ತಗಲುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದಿರುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಜೊತೆಗೆ ಕೋಳಿ ಸಾಗಣೆ ಮಾಡುವ ವಾಹನಗಳಿಗೆ ನಂಜುನಾಶಕಗಳಿಂದ ಶುಚಿಗೊಳಿಸಲು ಸೂಚನೆ ನೀಡಲಾಗಿದೆ. ಈ ಬಗ್ಗೆ ವರದಿ ನೀಡಲು ತಿಳಿಸಲಾಗಿದೆ.
ಹಕ್ಕಿಜ್ವರ ಇದ್ದರೂ ಕೋಳಿ ಮಾಂಸ ಸೇವನೆಯಿಂದ ಹರಡುವುದಿಲ್ಲ. ಸೋಂಕು ಕಾಲಿಟ್ಟರೂ ಕೋಳಿ ಸಾಕಣೆ ಕೇಂದ್ರ ಮತ್ತು ಮಾಂಸ ಸಂಸ್ಕರಣೆ ಮಾಡುವವರಿಗೆ ಮಾತ್ರ ತಗಲುತ್ತದೆ. ಈ ಸೋಂಕು ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ. ಹಕ್ಕಿಗಳಿಂದ ಮಾತ್ರ ಹರಡುತ್ತದೆ. ಆದ್ದರಿಂದ ಯಾರೂ ಗಾಬರಿಯಾಗಬೇಕಾದ ಅಗತ್ಯವಿಲ್ಲ ಎಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಹಕ್ಕಿಗಳ ಅಸಹಜ ಸಾವು ಕಂಡಬಂದಲ್ಲಿ ತಕ್ಷಣ ಪಶು ಇಲಾಖೆಗೆ ತಿಳಿಸಬೇಕು. ವ್ಯಾಧಿಗೊಳಗಾದ ಅಥವಾ ಆಕಸ್ಮಿಕವಾಗಿ ಮರಣ ಹೊಂದಿದ ಹಕ್ಕಿಗಳನ್ನು ಕೈಯಿಂದ ಮುಟ್ಟಬಾರದು. ಮನೆಯಲ್ಲಿ ಸೋಂಕು ತಗುಲಿದ ಹಕ್ಕಿಗಳ ಪುಕ್ಕಗಳನ್ನು ತೆಗೆಯಬಾರದು, ಕೊಲ್ಲಬಾರದು ಅಥವಾ ಕೈಯಿಂದ ಮುಟ್ಟಬಾರದು. ಹಕ್ಕಿಗಳು ವೈರಾಣು ಸೋಂಕನ್ನು ಹೊಂದಿರುವುದರಿಂದ ಮಕ್ಕಳನ್ನು ಅಂತಹ ಹಕ್ಕಿಗಳನ್ನು ಸ್ಪರ್ಶ ಮಾಡುವುದಕ್ಕಾಗಲೀ, ಅವುಗಳೊಂದಿಗೆ ಆಟ ಆಡುವುದಕ್ಕಾಲೀ ಅಥವಾ ಸಾಗಿಸುವುದಕ್ಕಾಗಲಿ ಬಿಡಬಾರದು ಎಂದು ಅರಿವು ಮೂಡಿಸಲಾಗುತ್ತಿದೆ.
ಹಕ್ಕಿಗಳನ್ನು ಕೈಯಿಂದ ಮುಟ್ಟಿದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆದುಕೊಳ್ಳಬೇಕು. ಕೋಳಿ ಮರಿಗಳನ್ನು ಕೈಗಳಿಂದ ಮುಟ್ಟುವಾಗ ಮೂಗು ಮತ್ತು ಬಾಯಿಗೆ ದಪ್ಪ ಬಟ್ಟೆಯ ಮುಸುಕು ಹಾಕಿಕೊಳ್ಳಬೇಕು. ಹಕ್ಕಿಗಳನ್ನು ಮುಟ್ಟಿದ ನಂತರ ಕೈಗಳಿಂದ ಕಣ್ಣು, ಮೂಗು ಅಥವಾ ಬಾಯಿಯನ್ನು ಉಜ್ಜಿಕೊಳ್ಳದಂತೆ ಎಚ್ಚರಿ ವಹಿಸಬೇಕು.
ಸಾಮಾನ್ಯವಾಗಿ ಸೋಂಕಿತ ಕೋಳಿಗಳು ಆಹಾರ ತಿನ್ನುವುದಿಲ್ಲ. ಮೊಟ್ಟೆ ಉತ್ಪಾದನೆ ಕಡಿಮೆಯಾಗುತ್ತದೆ. ಹೆಚ್ಚು ಓಡಾಡುವುದಿಲ್ಲ. ಕಣ್ಣುಗಳು ತೇವಗೊಂಡಿರುತ್ತವೆ. ರೆಕ್ಕೆಗಳು ಕೆದರಿರುತ್ತವೆ. ತಲೆ ಭಾಗ ಊದಿಕೊಳ್ಳುತ್ತದೆ. ಕಾಲಿನ ಚರ್ಮದ ಅಡಿಯಲ್ಲಿ ರಕ್ತಸ್ರಾವವೂ ಕಾಣಿಸಿಕೊಳ್ಳಬಹುದು. ದಿಢೀರ್ ಸಾವು ಕೂಡ ಸಂಭವಿಸುತ್ತದೆ.
ವೈರಸ್ ಹಕ್ಕಿಗಳಿಂದ ಹಕ್ಕಿಗಳಿಗೆ ಹರಡುತ್ತದೆ. ಹಕ್ಕಿಗಳು ವಲಸೆ ಹೋದಾಗ, ಗುಂಪಿನಲ್ಲಿ ಸೋಂಕಿತ ಹಕ್ಕಿ ಇದ್ದರೆ ಹೋದ ಸ್ಥಳದಲ್ಲಿರುವ ಹಕ್ಕಿಗಳಿಗೂ ಸುಲಭವಾಗಿ ಹರಡುತ್ತದೆ. ಸೋಂಕಿತ ಕೋಳಿ ಅಥವಾ ಹಕ್ಕಿಗಳೊಂದಿಗೆ ನೇರ ಸಂಪರ್ಕಕ್ಕೆ ಬಂದ ಮನುಷ್ಯರು ಮತ್ತು ಪ್ರಾಣಿಗಳಿಗೂ ಸೋಂಕು ಹರಡುವ ಸಾಧತೆಗಳಿವೆ ಎಂದು ಜಿಲ್ಲಾಡಳಿತ ಈಗಾಗಲೇ ಎಚ್ಚರಿಕೆ ನೀಡಿದೆ.












Click it and Unblock the Notifications