ರಂಗಾಯಣದ ನೂತನ ನಿರ್ದೇಶಕಿ ಭಾಗೀರಥಿ ಬಾಯಿ ಕದಂ
ಮೈಸೂರು, ಜೂನ್ 15: ಕನ್ನಡದ ಮುಂಚೂಣಿ ನಾಟಕ ಸಂಸ್ಥೆ ಮೈಸೂರು ರಂಗಾಯಣಕ್ಕೆ ಕೊನೆಗೂ ನಿರ್ದೇಶಕರ ನೇಮಕವಾಗಿದೆ. ಈ ಮೊದಲು ನಿರ್ದೇಶಕರಾಗಿದ್ದ ಜನಾರ್ದನ್ (ಜನ್ನಿ) ನಿವೃತ್ತಿಯಾದ ಬಳಿಕ ಬಹುದಿನಗಳಿಂದ ಖಾಲಿ ಇದ್ದ ನಿರ್ದೇಶಕರ ಸ್ಥಾನಕ್ಕೆ ಭಾಗೀರಥಿ ಬಾಯಿ ಕದಂ ಅವರನ್ನು ನೇಮಕ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಆದೇಶ ಹೊರಡಿಸಿದ್ದಾರೆ.
ಜನಾರ್ದನ್ ನಿವೃತ್ತಿಯಾದ ಬಳಿಕ ಖಾಯಂ ನಿರ್ದೇಶಕರು ನೇಮಕವಾಗಿರಲಿಲ್ಲ. ಇದರಿಂದ ರಂಗಾಯಣದ ಕಾರ್ಯಗಳು ಕುಂಠಿತವಾಗಿದ್ದವು. ನಿರ್ದೇಶಕರ ಸ್ಥಾನಕ್ಕೆ ಮಂಡ್ಯ ರಮೇಶ್, ಹಿರಿಯ ರಂಗಕರ್ಮಿ ಉಮೇಶ್ ಸೇರಿದಂತೆ ಅನೇಕರ ಹೆಸರುಗಳು ಕೇಳಿಬಂದಿದ್ದವು. ಆದರೆ ಭಾಗೀರಥಿ ಬಾಯಿ ಕದಂ ನೇಮಕವಾಗಿದ್ದಾರೆ. ಇದಲ್ಲದೆ ಶಿವಮೊಗ್ಗ ರಂಗಾಯಣಕ್ಕೆ ಡಾ.ಎಂ.ಗಣೇಶ್, ಕಲಬುರ್ಗಿ ರಂಗಾಯಣಕ್ಕೆ ಮಹೇಶ್.ವಿ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.

ಇತ್ತೀಚೆಗೆ ತಾನೇ ಮೈಸೂರು ವಿಶ್ವ ವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿಯನ್ನಾಗಿ ಭಾರತಿಯವರನ್ನು ನೇಮಿಸಲಾಗಿದ್ದು, ಇದೀಗ ರಂಗಾಯಣಕ್ಕೂ ಮಹಿಳೆಯನ್ನೇ ನಿರ್ದೇಶಕರನ್ನಾಗಿ ಮಾಡಲಾಗಿದೆ. ಒಟ್ಟಿನಲ್ಲಿ ಮೈಸೂರಿನಲ್ಲಿ ಮಹಿಳೆಯರ ಹವಾ ಹೆಚ್ಚಿದೆ!












Click it and Unblock the Notifications