ವೀಳ್ಯದೆಲೆ, ಬಾಳೆಹಣ್ಣು, ಮಲ್ಲಿಗೆ ಮೈಸೂರಿನ ಹೆಮ್ಮೆ: ಹೇಗೆ ಗೊತ್ತಾ?
ಮೈಸೂರು, ಸೆಪ್ಟೆಂಬರ್ 20: ಮೈಸೂರು ತನ್ನದೇ ಆದ ವಿಶೇಷತೆಗಳಿಂದ ದೇಶ ವಿದೇಶಗಳಲ್ಲಿ ಹೆಸರು ಮಾಡುತ್ತಾ ಬಂದಿದೆ. ಇದಕ್ಕೆ ಇಲ್ಲಿನ ಸಂಸ್ಕೃತಿ ಸಂಪ್ರದಾಯ ಮಾತ್ರವಲ್ಲದೆ, ಭೌಗೋಳಿಕ ವಿಶೇಷತೆಗಳು ಕೂಡ ಕಾರಣವಾಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇವತ್ತಿಗೂ ಇಲ್ಲಿನ ವೀಳ್ಯದೆಲೆ, ಬಾಳೆಹಣ್ಣು, ಮಲ್ಲಿಗೆ ತನ್ನದೇ ಆದ ಖ್ಯಾತಿ ಹೊಂದಿದ್ದು ಎಲ್ಲರೂ ಇಷ್ಟಪಟ್ಟು ಖರೀದಿಸುವುದನ್ನು ಕಾಣಬಹುದಾಗಿದ್ದು, ಸದಾ ಬೇಡಿಕೆಯನ್ನು ಹೊಂದಿ ಮೈಸೂರಿಗೆ ಹೆಮ್ಮೆಯಾಗಿದೆ.
ಸಾಮಾನ್ಯವಾಗಿ ಮೈಸೂರಿಗೆ ಬಂದವರು ಇಲ್ಲಿನ ಪ್ರವಾಸಿ ತಾಣಗಳ, ಸಿಹಿತಿನಿಸು, ಆಹಾರ ಪದಾರ್ಥಗಳು, ಮಾತ್ರವಲ್ಲದೆ ವೀಳ್ಯದೆಲೆ, ಮಲ್ಲಿಗೆ ಮತ್ತು ರಸಬಾಳೆ ಮೊದಲಾದವುಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ. ಈಗಾಗಲೇ ಭೌಗೋಳಿಕ ವಿಶೇಷತೆಗಳಿಂದಲೇ ಮೈಸೂರು ಹೆಸರನ್ನು ಜಗದಗಲಕ್ಕೂ ಪಸರಿಸುವಂತೆ ಮಾಡಿದ್ದು, ಇವು ಇಲ್ಲಿನ ಹೆಗ್ಗುರುತಾಗಿವೆ. ಇವುಗಳನ್ನು ರೈತರು ಹಿಂದಿನಿಂದಲೂ ಬೆಳೆಯುತ್ತಾ ಬಂದಿದ್ದು ಅವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮೂಲಕ ಮುಂದಿನ ತಲೆಮಾರಿಗೂ ಉಳಿಯುವಂತೆ ಮಾಡಬೇಕಾಗಿದೆ.

ಕರ್ನಾಟಕದ 42 ವಿಶೇಷತೆಗಳಿಗೆ ಜಿಐ (ಜಿಯಾಗ್ರಫಿಕಲ್ ಇಂಡಿಕೇಷನ್) ಟ್ಯಾಗ್ ಸಿಕ್ಕಿದ್ದು, ಅದರಲ್ಲಿ ಮೈಸೂರಿನ 18 ಉತ್ಪನ್ನಗಳು ಸ್ಥಾನ ಪಡೆದಿವೆ ಎಂದರೆ ಅಚ್ಚರಿಯಾಗಬಹುದು ಆದರೆ ಇದು ನಿಜ. ಈ ಪೈಕಿ ಒಂದು ಕಾಲದಲ್ಲಿ ಮೈಸೂರಿನ ಅಸ್ಮಿತೆಯಾಗಿ ಜನಮಾನಸದಲ್ಲಿ ನೆಲೆಯೂರಿದ್ದ ಜನಪ್ರಿಯ ಉತ್ಪನ್ನಗಳಾದ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆ ಹೆಚ್ಚು ಗಮನಸೆಳೆದಿವೆ.
ಮೂರು ಬೆಳೆಗಳ ಕೃಷಿಗೆ ಆದ್ಯತೆ
ಇವುಗಳ ವೃದ್ಧಿಗೆ ಇನ್ನಷ್ಟು ವೇಗ ನೀಡುವ ಸಲುವಾಗಿ ರಾಜ್ಯ ಸರ್ಕಾರ ಮತ್ತು ತೋಟಗಾರಿಕೆ ಇಲಾಖೆ ಅದರ ಉತ್ತೇಜನದತ್ತ ಗಮನಹರಿಸಿ ನಶಿಸಿ ಹೋಗದಂತೆ ಹಾಗೂ ಮುಂದಿನ ತಲೆಮಾರಿನವರಿಗೆ ಉಳಿಸಿ, ಬೆಳೆಸುವ ಮತ್ತು ಅದರ ಮಹತ್ವವನ್ನು ಇವತ್ತಿನ ತಲೆಮಾರಿಗೆ ತಿಳಿಸಿಕೊಡುವ ಕಾರ್ಯವನ್ನು ಮಾಡಲಾಗುತ್ತಿದ್ದು, ಇದನ್ನು ಬೆಳೆಯಲು ರೈತರನ್ನು ಪ್ರೇರೇಪಿಸುವುದು, ವ್ಯಾಪಾರಸ್ಥರಿಗೆ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುವುದು ಹೀಗೆ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಒಂದು ಕಾಲದಲ್ಲಿ ನಂಜನಗೂಡು ಭಾಗದಲ್ಲಿ ಬೆಳೆಯುತ್ತಿದ್ದ ರಸಬಾಳೆಗೆ ಎಲ್ಲಿಲ್ಲದ ಬೇಡಿಕೆಯಿತ್ತು. ಹಣ್ಣುಗಳು ಕೂಡ ಸವಿಯಾಗಿ, ರುಚಿಕರವಾಗಿದ್ದವು. ರೈತರು ಇವುಗಳನ್ನು ಬೆಳೆಯುತ್ತಿದ್ದರು. ರೋಗಬಾಧೆಗಳಿರಲಿಲ್ಲ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಇದನ್ನು ಬೆಳೆಯುವುದು ಕಷ್ಟವಾಗುತ್ತಿದ್ದು, ರೈತರು ಬೆಳೆದರೂ ಹಣ್ಣುಗಳ ತಿರುಳುಗಳಲ್ಲಿ ಗಂಟುಗಳು ಕಾಣಿಸುತ್ತಿದ್ದು, ರುಚಿಯೂ ಮೊದಲಿನಂತೆ ಬರುತ್ತಿಲ್ಲ. ಇದೆಲ್ಲ ಸಮಸ್ಯೆಗಳಿಂದ ತೊಂದರೆ ಅನುಭವಿಸಿದ ಕೆಲವು ರೈತರು ರಸಬಾಳೆ ಬೆಳೆಯಲು ಹಿಂದೇಟು ಹಾಕಲಾರಂಭಿಸಿದರು. ಸದ್ಯ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಭಾಗದಲ್ಲಿ 15 ಎಕರೆ ಜಾಗದಲ್ಲಿ 10 ರೈತರು ರಸಬಾಳೆ ಬೆಳೆಯುತ್ತಿದ್ದಾರೆ.

ರುಚಿಕರ ನಂಜನಗೂಡಿನ ರಸಬಾಳೆ
ರಸಬಾಳೆ ಎಲ್ಲ ಮಣ್ಣಿನಲ್ಲಿ ಬೆಳೆದರೆ ಅದಕ್ಕೆ ಅದರದ್ದೇ ಆದ ರುಚಿ ಇರುವುದಿಲ್ಲ. ಅದು ಕಪ್ಪು ಮೆಕ್ಕಲು ಅಥವಾ ಲವಣಯುಕ್ತ ಮಣ್ಣಿನಲ್ಲಿ ಬೆಳೆದರೆ ಮೂಲಗುಣವನ್ನು ಹೊಂದಿರುತ್ತದೆ. ಇದನ್ನರಿತು ಈ ಭಾಗದ 5 ಎಕರೆ ಪ್ರದೇಶದಲ್ಲಿ ತೋಟಗಾರಿಕಾ ಇಲಾಖೆಯು ನಂಜನಗೂಡು ರಸಬಾಳೆ ಬೆಳೆಸುತ್ತಿದೆ. ಜತೆಗೆ ಹೆಚ್ಚುವರಿಯಾಗಿ 20 ರೈತರಿಗೆ ತಲಾ 500 ರಸಬಾಳೆಯ ಗಿಡಗಳನ್ನು ವಿತರಣೆ ಮಾಡುವುದರೊಂದಿಗೆ ಬಾಳೆ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ರೈತರು ರಸಬಾಳೆ ಬೆಳೆಯುವ ಮನಸ್ಸು ಮಾಡಿ ಶ್ರಮಪಟ್ಟು ಬೆಳೆದರೆ ರಸಬಾಳೆಯ ವೈಭವವನ್ನು ಮರಳಿ ಪಡೆಯಬಹುದು.
ಇನ್ನು ಮೈಸೂರು ಮಲ್ಲಿಗೆಗೂ ಉತ್ತೇಜನ ನೀಡಲಾಗುತ್ತಿದೆ. ಸದ್ಯ ಮೈಸೂರು ತಾಲೂಕಿನ ಇಲವಾಲದ ಸಮೀಪದಲ್ಲಿ ಮಾತ್ರ ಮೈಸೂರು ಮಲ್ಲಿಗೆ ಬೆಳೆಯುತ್ತಿದ್ದಾರೆ. ಆದರೆ, ಮಲ್ಲಿಗೆ ತಳಿ ಬಿತ್ತನೆ ದುಬಾರಿಯಾಗಿದೆ. ಬೆಳೆ ನಿರ್ವಹಣೆಗೂ ಹೆಚ್ಚು ಹಣ ಖರ್ಚಾಗುತ್ತದೆ. ಇದರಿಂದ ರೈತರು ಮೈಸೂರು ಮಲ್ಲಿಗೆ ಕೃಷಿ ಮಾಡಲು ಹಿಂದೇಟು ಹಾಕುತ್ತಿದ್ದು, ಕೇವಲ ಒಂದು ಎಕರೆ ಪ್ರದೇಶದಲ್ಲಿ ಒಬ್ಬ ರೈತ, ಅಲ್ಲದೆ ಹುಣಸೂರು ತಾಲೂಕು ಬಿಳಿಕೆರೆ ಹೋಬಳಿ ಬಳಿ ನಾಲ್ಕು ಎಕರೆ ಜಾಗದಲ್ಲಿ ರೈತರು ಮೈಸೂರು ಮಲ್ಲಿಗೆ ಬೆಳೆಸಲಾಗುತ್ತಿದ್ದಾರೆ. ರೈತರಿಗೆ ಮಲ್ಲಿಗೆ ಗಿಡಗಳನ್ನು ನೀಡಿ ಕೃಷಿಗೆ ಪ್ರೋತ್ಸಾಹಿಸುತ್ತಾ ಬರುತ್ತಿದೆ.
ಬಾಯಲ್ಲಿಟ್ಟರೆ ಕರಗುವ ವೀಳ್ಯದೆಲೆ
ಮೈಸೂರು ವಾತಾರವಣಲ್ಲಿ ಬೆಳೆಯುವ ಮೈಸೂರು ವೀಳ್ಯದೆಲೆ ಇತರೆಡೆಯ ವೀಳ್ಯದೆಲೆಗಿಂತ ರುಚಿಯಲ್ಲಿ ವಿಭಿನ್ನವಾಗಿವೆ. ಮೈಸೂರು ಅರಸರ ಕಾಲದಿಂದಲೂ ವೀಳ್ಯದೆಲೆಗೆ ಮಹತ್ವ ನೀಡಲಾಗಿದೆ. ವೀಳ್ಯದೆಲೆ ತೋಟವನ್ನು ನಿರ್ಮಿಸಲು ಪ್ರೋತ್ಸಾಹ ನೀಡಿದ್ದರು. ಇದೀಗ ಮೈಸೂರು ತಾಲೂಕಿನ ಜಯಪುರ ಹೋಬಳಿಯ ಉದ್ಬೂರು, ಮಾರ್ಬಳ್ಳಿ, ಟಿ.ಕಾಟೂರು, ಗುಮಚನಹಳ್ಳಿ, ಕೆಲ್ಲಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತಿದೆ. ಉದ್ಬೂರು ಗ್ರಾಮದಲ್ಲಿ ವೀಳ್ಯದೆಲೆ ಮಾರುಕಟ್ಟೆ ಇದ್ದು, ಪ್ರತಿ ದಿನ ಸಂಜೆ ವ್ಯಾಪಾರ ನಡೆಯುತ್ತದೆ.
ಮೈಸೂರು ವಿಳ್ಯದೆಲೆ ತನ್ನ ವಿಶಿಷ್ಟ ರುಚಿಯಿಂದಾಗಿ ರಾಜ್ಯದೆಡೆ ಹೆಸರು ಪಡೆದಿದೆ. ನಗರೀಕರಣದ ಪರಿಣಾಮ ಮೈಸೂರಿನಲ್ಲಿ ವೀಳ್ಯದೆಲೆ ಬೆಳೆಯಲು ಜಾಗದ ಕೊರತೆ ಉಂಟಾಗಿದೆ. ಇದೆಲ್ಲ ಸಮಸ್ಯೆಗಳನ್ನು ಬಗೆಹರಿಸಿ ವೀಳ್ಯದೆಲೆ ಬೆಳೆಯಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಇಲ್ಲಿ ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ದೊರೆಯುವಂತಾದರೆ ರೈತರು ಅವುಗಳತ್ತ ಆಸಕ್ತಿ ವಹಿಸಲು ಸಾಧ್ಯವಾಗುತ್ತದೆ. ದಸರಾ ಸಂದರ್ಭದಲ್ಲಿ ಭೌಗೋಳಿಕವಾಗಿ ಪ್ರಸಿದ್ಧಿ ಹೊಂದಿರುವ ಪದಾರ್ಥಗಳು ಪ್ರವಾಸಿಗರಿಗೆ ಸಿಗುವಂತೆ ಮಾಡುವುದು ಬಹುಮುಖ್ಯವಾಗಿದೆ.












Click it and Unblock the Notifications