Darshan Arrest: ಮೈಸೂರಿಗೆ ಬಂದ ಪೊಲೀಸರಿಗೆ ಮಹಜರು ವೇಳೆ ಸಿಕ್ಕಿದ್ದೇನು?
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಮೈಸೂರಿಗೆ ಕರೆತಂದ ಪೊಲೀಸರು ಸ್ಥಳ ಮಹಜರು ನಡೆಸಿದರು.
ರೇಣುಕಾಸ್ವಾಮಿ ಕೊಲೆ ಮಾಡಿದ ನಂತರ ಕೆಲವು ಆರೋಪಿಗಳು ಮೈಸೂರಿಗೆ ಬಂದಿದ್ದರು. ಇದೇ ವೇಳೆ ದರ್ಶನ್ ಮೈಸೂರಿನಲ್ಲಿ ಡೆವಿಲ್ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ನಗರದ ಪ್ರತಿಷ್ಠಿತ ರ್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ತಂಗಿದ್ದರು.

ಜೂನ್ 9ರಂದು ಹೋಟೆಲ್‌ಗೆ ಬಂದಿದ್ದ ದರ್ಶನ್ ಜೂನ್10ರ ಬೆಳಗ್ಗೆ ಕುವೆಂಪುನಗರದ ಗೋಲ್ಡ್ ಜಿಮ್‌ನಲ್ಲಿ ವರ್ಕ್ ಔಟ್ ಮಾಡಿ ನಂತರ ಹೋಟೆಲ್‌ಗೆ ಬಂದಿದ್ದರು. ಜಿಮ್ ಮುಗಿಸಿಕೊಂಡು ಹೋಟೆಲ್‌ಗೆ ಹೊರಡುವ ವೇಳೆ ದರ್ಶನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಇಬ್ಬರು ಆರೋಪಿಗಳೊಂದಿಗೆ ಮಹಜರು
ಮಂಗಳವಾರ ಸ್ಥಳ ಮಹಜರಿಗೆ ಆರೋಪಿ ಎ 11 ನಾಗರಾಜ ಅಲಿಯಾಸ್ ನಾಗ ಹಾಗೂ ಆರೋಪಿ ಎ 12 ಲಕ್ಷ್ಮಣ್ ಅವರನ್ನು ಪೊಲೀಸರು ಮೈಸೂರಿಗೆ ಕರೆದುಕೊಂಡು ಬಂದಿದ್ದಾರೆ. ಲಕ್ಷ್ಮಣ್ ದರ್ಶನ್ ಕಾರ್ ಡ್ರೈವರ್ ಆಗಿದ್ದು, ನಾಗರಾಜ್ ದರ್ಶನ್ ಅವರ ಮ್ಯಾನೇಜರ್ ಆಗಿದ್ದ. ಹೋಟೆಲ್ ಬಳಿ ಜನ ಹೆಚ್ಚಾಗಿ ಸೇರುತ್ತಾರೆ ಎನ್ನುವ ಕಾರಣದಿಂದ ದರ್ಶನ್ ಅವರನ್ನು ಪೊಲೀಸರು ಕರೆತಂದಿರಲಿಲ್ಲ.
ಎರಡು ಗಂಟೆ ಶೋಧಕಾರ್ಯ
ಮೈಸೂರಿನ ರ್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಪೊಲೀಸರು ಸತತ ಎರಡು ಗಂಟೆಗೂ ಹೆಚ್ಚು ಕಾಲ ಸ್ಥಳ ಮಹಜರು ನಡೆಸಿದರು. ನಟ ದರ್ಶನ್ ಉಳಿದುಕೊಂಡಿದ್ದ ಹೋಟೆಲ್‌ನ ಕೊಠಡಿಯಲ್ಲಿ ಇಂಚಿಂಚು ಶೋಧಕಾರ್ಯ ನಡೆಸಿದರು.
ಆರೋಪಿಗಳನ್ನು ಕರೆತಂದ ಸುದ್ದಿ ತಿಳಿದು ನಟ ದರ್ಶನ್ ಅವರನ್ನೇ ಕರೆ ತಂದಿರಬಹುದು ಎಂದುಕೊಂಡು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಸ್ಥಳ ಮಹಜರು ಮುಗಿಸಿ ವಾಪಸ್ ತೆರಳುವ ವೇಳೆ ಆರೋಪಿಗಳ ಮುಖ ಮುಚ್ಚಿಕೊಂಡು ಪೊಲೀಸರು ವಾಹನದಲ್ಲಿ ಕರೆದುಕೊಂಡು ಹೋದರು.
ಪೊಲೀಸರಿಂದ ತೀವ್ರ ವಿಚಾರಣೆ
ಇದೊಂದು ಮಹತ್ವದ ಪ್ರಕರಣವಾಗಿರುವ ಕಾರಣ, ಪೊಲೀಸರು ತೀವ್ರ ವಿಚಾರಣೆ ಮಾಡುತ್ತಿದ್ದಾರೆ. ಆರೋಪಿಗಳು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳದಂತೆ ಮಹತ್ವದ ಸಾಕ್ಷಿಗಳನ್ನು ಕಲೆಹಾಕುತ್ತಿದ್ದಾರೆ.
ದರ್ಶನ್ ರಾಜಕೀಯವಾಗಿ ಕೂಡ ಪ್ರಭಾವ ಹೊಂದಿದ್ದಾರೆ, ಲಕ್ಷಾಂತರ ಅಭಿಮಾನಿಗಳ ಬೆಂಬಲ ಅವರಿಗಿದೆ. ಇದೇ ಕಾರಣಕ್ಕೆ ಪೊಲೀಸರು ಯಾವುದೇ ತಪ್ಪಿಗೆ ಆಸ್ಪದ ಕೊಡದೆ ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ.
ಈಗಾಗಲೇ ಬಂಧಿತ 17 ಆರೋಪಿಗಳ ವಿರುದ್ಧ ಮಹತ್ವದ ಸಾಕ್ಷಿಗಳನ್ನು ಪೊಲೀಸರು ಕಲೆಹಾಕಿದ್ದು, ನ್ಯಾಯಾಲಯಕ್ಕೆ ನೀಡಲಿದ್ದಾರೆ. ವಿಚಾರಣೆ ಗೌಪ್ಯವಾಗಿರುವ ಕಾರಣ ಪೊಲೀಸರು ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಡುತ್ತಿಲ್ಲ.












Click it and Unblock the Notifications