Bengaluru-Mysuru expressway: ಅಪೂರ್ಣ ಕಾಮಗಾರಿ ಹಾಗೂ 25 ಅಪಘಾತ ವಲಯಗಳಿವೆ: ADGP ಅಲೋಕ್ ಕುಮಾರ್
ಮೈಸೂರು, ಜುಲೈ, 27: ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ಅಪೂರ್ಣವಾಗಿದ್ದು, ಇಲ್ಲಿ 25 ಅಪಘಾತ ವಲಯಗಳಿವೆ. ಈ ಎಲ್ಲಾ ಕಡೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ರಾಜ್ಯ ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರನ್ನು ಕೇಳಿ ಕಾಮಗಾರಿ ನಡೆಸಿಲ್ಲ. ಸಮಸ್ಯೆಯಾದಾಗ ಸರಿ ಮಾಡಿ ಎಂದು ನಮ್ಮನ್ನು ಕೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಹಾಗೆಯೇ ಬಾಕಿ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ತಂದು ಕೆಲಸ ಮಾಡಿಸುವುದು ಎನ್‌ಎಚ್‌ಎಐ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಸರ್ಕಾರದ ನಿಯಮಗಳ ಪ್ರಕಾರ ಪ್ರಸ್ತಾವನೆ, ಟೆಂಡರ್ ಮಾಡಿ ಕೆಲಸ ಮಾಡಿಸಬೇಕಿದ್ದು, ಇದಕ್ಕಾಗಿ ತಡವಾಗಬಹುದು ಎಂದು ಹೇಳಿದರು.

ಹೆದ್ದಾರಿಯಲ್ಲಿ 25 ಅಪಘಾತ ವಲಯಗಳಿದ್ದು, ಎಲ್ಲಾ ಕಡೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಸಾಕಷ್ಟು ಕಾಮಗಾರಿಗಳು ಬಾಕಿ ಇದೆ. ಆದರೆ ಕಾಮಗಾರಿ ಪೂರ್ಣಗೊಳಿಸದೇ ಉದ್ಘಾಟನೆ ಮಾಡಲಾಗಿದೆ ಎಂದರು. ಇನ್ನು ಹೆದ್ದಾರಿಯಲ್ಲಿ ಗ್ರಿಲ್, ವಿದ್ಯುತ್ ಕಂಬಗಳ ಕಳ್ಳತನ ವಿಚಾರವಾಗಿ ಪ್ರಾಧಿಕಾರದಿಂದ ಯಾವುದೇ ದೂರು ಬಂದಿಲ್ಲ ಎಂದರು.
ಈಗ ತಡೆಗೋಡೆ ಕಬ್ಬಿಣ ಕಳ್ಳತನದಿಂದ ಹಸು, ಪಾದಚಾರಿಗಳು ರಸ್ತೆಗೆ ಬರುತ್ತಿದ್ದಾರೆ. ಇದರಿಂದಾಗಿ ಅಪಘಾತ ಆಗುತ್ತಿವೆ ಅಂತಾ ಹೇಳುತ್ತಾರೆ. ಆದರೆ ಪೊಲೀಸರಿಗೆ ಈ ಬಗ್ಗೆ ದೂರು ಕೊಟ್ಟಿಲ್ಲ. ದರೋಡೆ ಪ್ರಕರಣಗಳ ವಿಚಾರವನ್ನೂ ನಮ್ಮ ಗಮನಕ್ಕೆ ತಂದಿಲ್ಲ. ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಎಕ್ಸ್‌ಪ್ರೆಸ್ ವೇನ ಅಪಘಾತದಲ್ಲಿ ಮೃತಪಟ್ಟ ಬಹುತೇಕರು ಬೈಕ್ ಸವಾರರಾಗಿದ್ದಾರೆ. 150 ಸಿಸಿ ವಾಹನಗಳಲ್ಲಿ ಹೆಚ್ಚು ವೇಗದಲ್ಲಿ ಹೋಗಲು ಸಾಧ್ಯವಿಲ್ಲ. ಆಟೋ ರಿಕ್ಷಾದಂತಹ ವಾಹನಗಳ ವೇಗ ಇನ್ನೂ ಕಡಿಮೆ ಇರುತ್ತದೆ. ಎತ್ತಿನ ಗಾಡಿ, ಕುದುರೆ ಗಾಡಿಯಂತಹ ಮೋಟಾರ್ ರಹಿತ ವಾಹನಗಳನ್ನು ಬಿಡಲು ಸಾಧ್ಯವೇ ಇಲ್ಲ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಿಂದೆಯೇ ಆದೇಶವನ್ನು ಹೊರಡಿಸಿದೆ. ದ್ವಿಚಕ್ರ ವಾಹನ ಸಂಚಾರ ನಿರ್ಬಂಧ ಜುಲೈ 12ರಂದು ನೋಟಿಫಿಕೇಷನ್ ಕೂಡ ಆಗಿದೆ. ಆಗಸ್ಟ್ 1ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದರು.












Click it and Unblock the Notifications