Mysuru-Bengaluru 10 Lane Road; ಎರಡು ಟೋಲ್, ವಿಶ್ರಾಂತಿ ತಾಣ
ಮೈಸೂರು, ಏಪ್ರಿಲ್ 07; ಮೈಸೂರು-ಬೆಂಗಳೂರು ನಡುವಿನ ಸಂಚಾರದ ಅವಧಿ ಕಡಿಮೆಗೊಳಿಸುವ ಮಹತ್ವದ ಮೈಸೂರು-ಬೆಂಗಳೂರು ದಶಪಥ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ವರ್ಷದ ಅಕ್ಟೋಬರ್ ವೇಳೆಗೆ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಈ ಕಾಮಗಾರಿ ಪೂರ್ಣಗೊಂಡ ಬಳಿಕ ವಾಹನ ಸವಾರರು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವಂತಿಲ್ಲ. ಟೀ, ಕಾಫಿಗೆಂದು ಕಾರು, ಬೈಕು ನಿಲ್ಲಿಸಿ ಹರಟೆ ಹೊಡೆಯುವಂತಿಲ್ಲ. ಸವಾರರಿಗೆ ಅನುಕೂಲವಾಗಲೆಂದು ಮಾರ್ಗಮಧ್ಯೆ ವಿಶ್ರಾಂತಿ ತಾಣ (ರೆಸ್ಟ್ ಏರಿಯಾ) ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೀರ್ಮಾನಿಸಿದೆ.
25 ರಿಂದ 30 ಎಕರೆ ಜಾಗದಲ್ಲಿ ಈ ವಿಶ್ರಾಂತಿ ತಾಣವನ್ನು ನಿರ್ಮಾಣ ಮಾಡಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಸದ್ಯ 1500 ಕೋಟಿ ವೆಚ್ಚದಲ್ಲಿ ಭೂ ಸ್ವಾಧೀನಕ್ಕೆ ಅನುಮತಿ ಸಿಕ್ಕಿದ್ದು, ಮುಂದಿನ 15 ದಿನದೊಳಗೆ ನೀಲನಕ್ಷೆ ತಯಾರಾಗಲಿದೆ. ನಂತರ ರೆಸ್ಟ್ ಏರಿಯಾವನ್ನು ಎಲ್ಲಿ?, ಯಾವ ಜಾಗದಲ್ಲಿ ಮಾಡಬಹುದು? ಎಂಬುದು ತಿಳಿದುಬರಲಿದೆ.
ಇಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಬಂಕ್‌ಗಳು, ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಪಾಯಿಂಟ್, ಹೋಟೆಲ್‌ಗಳು ಹಾಗೂ ಶೌಚಾಲಯಗಳ ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲಿ ಪ್ರಯಾಣಿಕರು ಕೆಲಕಾಲ ತಂಗಿ ಊಟದ ಜೊತೆ ವಿಶ್ರಾಂತಿ ಪಡೆದು ನಂತರ ಮುಂದಕ್ಕೆ ಸಾಗಬಹುದಾಗಿದೆ.

ಸಂಸದ ಪ್ರತಾಪ್ ಸಿಂಹ ಹೇಳಿಕೆ
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಈ ಕುರಿತು ಮಾತನಾಡಿದ್ದಾರೆ, "ಭೂಸ್ವಾಧೀನಕ್ಕೆ ಅನುಮತಿ ಸಿಕ್ಕಿದ್ದು, ನೀಲಿ ನಕ್ಷೆ ತಯಾರಾದ ಬಳಿಕ ಕೆಲಸ ಶುರುವಾಗಲಿದೆ. ಮೈಸೂರು-ಬೆಂಗಳೂರು ದಶಪಥ ಕಾಮಗಾರಿ ಅಕ್ಟೋಬರ್ ವೇಳೆಗೆ ಮುಕ್ತಾಯಗೊಳ್ಳಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲೆಂದು ರೆಸ್ಟ್ ಏರಿಯಾ ನಿರ್ಮಾಣ ಮಾಡಲಾಗುತ್ತಿದೆ" ಎಂದು ಹೇಳೀದ್ದಾರೆ.

10 ಪಥದ ರಸ್ತೆ 2 ಕಡೆ ಟೋಲ್
ಮೈಸೂರು-ಬೆಂಗಳೂರು ನಡುವಿನ ಪ್ರಯಾಣಕ್ಕೆ ಎರಡು ಕಡೆ ಟೋಲ್ ಪಾವತಿ ಮಾಡಬೇಕು. ಮೈಸೂರು ಭಾಗದಲ್ಲಿ ಶ್ರೀರಂಗಪಟ್ಟಣದ ನಂತರ ಕೆ. ಶೆಟ್ಟಿಹಳ್ಳಿ ಸಮೀಪ ಗಣಂಗೂರು ಮತ್ತು ಕೋಡಿ ಶೆಟ್ಟಿಪುರ ನಡುವೆ ಒಂದು ಹಾಗೂ ಬೆಂಗಳೂರು ಕಡೆಯಿಂದ ಬಿಡದಿ ಸಮೀಪ ಕೆಣಮಿಣಕಿ ಗ್ರಾಮದ ಬಳಿ ಮತ್ತೊಂದು ಟೋಲ್ ಕೌಂಟರ್ ಆರಂಭವಾಗಲಿದೆ.
ಮೈಸೂರಿನಿಂದ ಹೋಗುವಾಗ ಹಾಗೂ ಬೆಂಗಳೂರಿನಿಂದ ಬರುವಾಗ ಎರಡೂ ಮಾರ್ಗದಲ್ಲೂ ಟೋಲ್ ವಸೂಲು ಮಾಡಲಾಗುತ್ತದೆ. ಏಕಕಾಲದಲ್ಲಿ 8 ವಾಹನಗಳ ಶುಲ್ಕ ಸಂಗ್ರಹಿಸಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ವೈಜ್ಞಾನಿಕವಾಗಿ ಫಾಸ್ಟ್‌ಟ್ಯಾಗ್ ಸೌಲಭ್ಯಕ್ಕೂ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ನಂಜನಗೂಡು ರಸ್ತೆ, ತಿ.ನರಸೀಪುರ ಹೆದ್ದಾರಿಗಳಲ್ಲಿ ಟೋಲ್ ವಸೂಲಿ ಕೌಂಟರ್ ಕಾರ್ಯ ನಿರ್ವಹಿಸುತ್ತಿವೆ.

ಟೋಲ್ ಮೊತ್ತ ಇನ್ನೂ ತೀರ್ಮಾನ ಮಾಡಿಲ್ಲ
ಮೈಸೂರು-ಬೆಂಗಳೂರು ದಶಪಥ ಕಾಮಗಾರಿ ಪೂರ್ಣಗೊಂಡ ನಂತರ ಅದರ ಖರ್ಚು ಹಾಗೂ ನಿರ್ವಹಣಾ ವೆಚ್ಚವನ್ನು ಆಧರಿಸಿ ವಾಹನಗಳಿಗೆ ಎಷ್ಟು ಟೋಲ್ ನಿಗದಿ ಮಾಡಬೇಕು ಎಂದು ನಿರ್ಧರಿಸಲಾಗುತ್ತದೆ. ಕಾಮಗಾರಿ ಮುಗಿದ ಬಳಿಕ ಟೆಂಡರ್ ಮೂಲಕ ಏಜೆನ್ಸಿಗಳಿಗೆ ಅವಕಾಶ ನೀಡಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

75 ನಿಮಿಷದಲ್ಲಿ ಪ್ರಯಾಣ ಮಾಡಬಹುದು
ಬೆಂಗಳೂರು ಹೊರವಲಯದ ನೈಸ್ ರಸ್ತೆ ಜಂಕ್ಷನ್ ಬಳಿಯ ಪಂಚಮುಖಿ ದೇವಸ್ಥಾನದಿಂದ ರಸ್ತೆ ವಿಸ್ತರಣೆ ಕಾರ್ಯ ಆರಂಭಗೊಂಡು ಮೈಸೂರಿನ ಕೊಲಂಬಿಯಾ ಏಷ್ಯಾ ಜಂಕ್ಷನ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಹಳೆಯ ನಾಲ್ಕು ಪಥದ ರಸ್ತೆ ಸುಮಾರು 25 ರಿಂದ 30 ಮೀಟರ್ ಅಗಲ ಇದ್ದು, ಇದನ್ನು 60 ಮೀಟರ್‌ಗೆ ಹಾಗೂ ಎಲಿವೇಟೆಡ್ ಕಾರಿಡಾರ್ ಬಳಿ 45 ಮೀಟರ್‌ಗೆ ವಿಸ್ತರಣೆ ಮಾಡಲಾಗುತ್ತಿದೆ.
ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ 10 ಪಥದ ರಸ್ತೆ ಯೋಜನೆ ಕುರಿತು ಟ್ವೀಟ್ ಮಾಡಿದ್ದಾರೆ. ಬೆಂಗಳೂರು-ನಿಢಗಟ್ಟ-ಮೈಸೂರು ರಾಷ್ಟ್ರೀಯ ಹೆದ್ದಾರಿ 275 10 ಪಥದ 117 ಕಿ. ಮೀ. ಯೋಜನೆಯಾಗಿದೆ. 8,350 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಅಕ್ಟೋಬರ್ 2022ರೊಳಗೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

ಉಭಯ ನಗರಗಳಿಗೆ ಸಹಕಾರಿಯಾಗಿದೆ
ಬಹು ನಿರೀಕ್ಷಿತ ಮೈಸೂರು-ಬೆಂಗಳೂರು ದಶ ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದ್ದು, ಮುಂದಿನ ದಸರಾ ವೇಳೆಗೆ ಪೂರ್ಣಗೊಳ್ಳಲಿದೆ. ಈ ಕಾಮಗಾರಿ ಮುಗಿದಲ್ಲಿ ಬೆಂಗಳೂರು- ಮೈಸೂರು ನಡುವಿನ ಪ್ರಯಾಣ ಈಗಿರುವ 3 ಗಂಟೆಗೆ ಬದಲಾಗಿ 90 ನಿಮಿಷಕ್ಕೆ ಇಳಿಯಲಿದೆ.
2018ರಲ್ಲಿ ಈ ಯೋಜನೆ ಘೋಷಣೆಯಾದಾಗ ಒಟ್ಟು ವೆಚ್ಚವನ್ನು 6400 ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಯೋಜನಾ ವೆಚ್ಚ 3100 ಕೋಟಿ ರೂ. ಹೆಚ್ಚಾಗಿದೆ. ರಾಜಧಾನಿ ಬೆಂಗಳೂರಿನ ನಂತರ ಸಾಂಸ್ಕೃತಿಕ ನಗರಿ ಮೈಸೂರು ವಿವಿಧ ಕ್ಷೆತ್ರದಲ್ಲಿ ವೇಗವಾಗಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿದರೆ ಮೈಸೂರು ಮತ್ತಷ್ಟು ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ.












Click it and Unblock the Notifications