ಮತದಾನ ಮಾಡಿದ ಅಭ್ಯರ್ಥಿ ಭಿಕ್ಷುಕ ಅಂಕ ನಾಯಕ; ಗೆಲುವಿನ ವಿಶ್ವಾಸ
ಮೈಸೂರು, ಡಿಸೆಂಬರ್ 27: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬೊಕ್ಕಹಳ್ಳಿ ಗ್ರಾಮದಲ್ಲಿ ಭಿಕ್ಷುಕ ಅಂಕ ನಾಯಕ ಮತದಾನ ಮಾಡಿದರು. ಗ್ರಾಮಸ್ಥರು ಅಂಕ ನಾಯಕನನ್ನು ಗ್ರಾಮ ಪಂಚಾಯಿತಿ ಚುನಾವಣಾ ಕಣಕ್ಕಿಳಿಸಿದ್ದಾರೆ. ಅಂಕ ನಾಯಕ ಗೆಲುವಿನ ವಿಶ್ವಾಸದಲ್ಲಿದ್ದಾರೆ.
ಭಾನುವಾರ ಗ್ರಾಮ ಪಂಚಾಯಿತಿ ಚುನಾವಣೆಗೆ ಬ್ಲಾಕ್ ನಂಬರ್ 1ರಲ್ಲಿ ಮತದಾನ ಮಾಡಿದ ಅಂಕನಾಯಕ ಮಾತನಾಡಿ, "ಗ್ರಾಮದ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಹೀಗಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ ಎಂಬ ವಿಶ್ವಾಸವಿದೆ" ಎಂದರು.
ಈ ಹಿಂದೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದವರು ಮೂಲ ಸೌಕರ್ಯಗಳನ್ನು ಕಲ್ಪಿಸಲು ವಿಫಲರಾಗಿದ್ದರು. ಆದ್ದರಿಂದ, ಆಕ್ರೋಶಗೊಂಡ ಗ್ರಾಮದ ಜನರು ಭಿಕ್ಷುಕ ಅಂಕ ನಾಯಕನನ್ನು ಚುನಾವಣಾ ಕಣಕ್ಕಿಳಿಸಿದ್ದಾರೆ. ಅವರ ಪರವಾಗಿ ಪ್ರಚಾರ ಮಾಡಿದ್ದಾರೆ.

40 ವರ್ಷದ ಅಂಕ ನಾಯಕ ಹುಳಿಮಾವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಕ್ಕಹಳ್ಳಿ ಗ್ರಾಮದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಗ್ರಾಮದ ಯುವಕರು ಅಂಕ ನಾಯಕನಿಗೆ ಹೊಸ ಬಟ್ಟೆ ತೊಡಿಸಿ, ಕನ್ನಡಕ ಹಾಕಿಸಿ, ಕಾರಿನಲ್ಲಿ ಕರೆದುಕೊಂಡು ಬಂದು ನಾಮಪತ್ರ ಹಾಕಿಸಿದ್ದಾರೆ.
ಅವಿವಾಹಿತನಾದ ಅಂಕ ನಾಯಕ ಅಂಗವಿಕಲರಾಗಿದ್ದು, ಗ್ರಾಮದಲ್ಲಿ ಭಿಕ್ಷೆ ಬೇಡುತ್ತಿದ್ದರು. ಆಗಾಗ ಊರಿನವರು ಅವರಿಗೆ ಊಟ, ಹಣ ಕೊಡುತ್ತಿದ್ದರು. ಸಾಮಾನ್ಯ ವರ್ಗಕ್ಕೆ ಮೀಸಲಾದ ಕ್ಷೇತ್ರದಿಂದ ಕಣಕ್ಕಿಳಿದಿರುವ ಇವರಿಗೆ ಕ್ಯಾಮರಾ ಚಿಹ್ನೆ ಲಭಿಸಿದೆ.
"ಪ್ರತಿ ಬಾರಿ ಹಣ ಖರ್ಚು ಮಾಡಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಹಣವಿಲ್ಲದ ವ್ಯಕ್ತಿ ಸಹ ಗೆಲ್ಲಬೇಕು. ಆದ್ದರಿಂದ, ಅಂಕ ನಾಯಕನನ್ನು ಕಣಕ್ಕಿಳಿಸಿದ್ದೇವೆ" ಎನ್ನುತ್ತಾರೆ ಗ್ರಾಮಸ್ಥರು. ಗ್ರಾಮದ ಯುವಕರೆಲ್ಲರೂ ಅಂಕ ನಾಯಕನ ಬೆಂಬಲಕ್ಕಿದ್ದಾರೆ.












Click it and Unblock the Notifications