ಮೈಸೂರಿನಲ್ಲಿ ದಸರಾ ಆನೆಗಳಿಗೆ ತೂಕ ಪರೀಕ್ಷೆ: ಈ ಬಾರಿಯೂ ಅರ್ಜುನನೇ ಬಲಶಾಲಿ
Recommended Video

ಮೈಸೂರು, ಸೆಪ್ಟೆಂಬರ್.06: ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಗಜಪಡೆಗೆ ತೂಕ ಪರೀಕ್ಷೆ ಮಾಡಲಾಯಿತು. ತೂಕ ಪರೀಕ್ಷೆಯಲ್ಲಿ ಈ ಬಾರಿಯು ಅಂಬಾರಿ ಆನೆ ಅರ್ಜುನನೇ ಬಲಶಾಲಿಯಾಗಿದ್ದು, ಬರೋಬ್ಬರಿ 5,650 ಕೆಜಿ ತೂಗಿದ್ದಾನೆ.
ಕಳೆದ ವರ್ಷ 5,250 ಕೆಜಿ ತೂಕವಿದ್ದ ಕ್ಯಾಪ್ಟೆನ್ ಅರ್ಜುನ ಈ ಬಾರಿ 400 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಕಳೆದ ವರ್ಷ 2,830 ಕೆಜಿ ತೂಕ ಇದ್ದ ವರಲಕ್ಷ್ಮೀ ಆನೆ ಬರುವಾಗಲೇ 290 ಕೆಜಿ ತೂಕ ಹೆಚ್ಚಿಸಿಕೊಂಡಿದೆ.
ಇನ್ನು ಕ್ರಮವಾಗಿ ವಿಕ್ರಮ 3,985 ಕೆಜಿ, ಧನಂಜಯ 4,045 ಕೆಜಿ, ಗೋಪಿ 4,435 ಕೆಜಿ, ಚೈತ್ರ 2,920 ಕೆಜಿ ಇದ್ದು, ಕಳೆದ ವರ್ಷ ಎರಡನೇ ತಂಡದಲ್ಲಿ ಆಗಮಿಸಿದ್ದರು. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಧನಂಜಯ ತೂಕ ಹಾಕಿಸಿಕೊಂಡಿದ್ದಾನೆ.

ದಸರಾ ಸಂದರ್ಭದಲ್ಲಿ ಆನೆಗಳ ಆರೋಗ್ಯ, ಅವುಗಳಿಗೆ ನೀಡಬೇಕಾದ ಪೌಷ್ಠಿಕಾಂಶ ಎಷ್ಟು ನೀಡಬೇಕು, ಯಾವ ರೀತಿಯ ಆಹಾರ ನೀಡಬೇಕು ಎಂಬುದನ್ನು ನಿರ್ಧರಿಸುವ ನಿಟ್ಟಿನಲ್ಲಿ ದಸರಾದಲ್ಲಿ ಪಾಲ್ಗೊಳ್ಳಲು ಬಂದ ಆನೆಗಳಿಗೆ ಅರಮನೆಯ ಸ್ವಾಗತದ ನಂತದ ದಿನವೇ ತೂಕ ಮಾಡಿಸಲಾಗುತ್ತದೆ.

ಆನೆಗಳ ಆರೈಕೆಗಾಗಿ ಭತ್ತದ ಹುಲ್ಲು ಬೆಣ್ಣೆ, ಕಬ್ಬು, ಬೆಲ್ಲ, ಕೊಬ್ಬರಿ, ವಿವಿಧ ರೀತಿಯ ಸೊಪ್ಪುಗಳನ್ನು ಅವುಗಳ ತೂಕದ ಆಧಾರದ ಮೇಲೆ ನೀಡಲಾಗುತ್ತದೆ. ಜಂಬೂ ಸವಾರಿಗೆ ಎರಡು ದಿನ ಬಾಕಿ ಇರುವಾಗ ಚಿನ್ನದ ಅಂಬಾರಿ ಹೊರುವ ಅರ್ಜುನನಿಗೆ ಮತ್ತೊಮ್ಮೆ ತೂಕ ಮಾಡಿಸಿ ಎಷ್ಟು ಪೌಷ್ಠಿಕಾಂಶ ನೀಡಬೇಕು ಎಂಬುದನ್ನು ನಿರ್ಧರಿಸಿ ಆಹಾರ ನೀಡಲಾಗುತ್ತದೆ.

ಕಾಡಿನಿಂದ ನಾಡಿಗೆ ಬಂದಿರುವ ಆನೆಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು, ಶಬ್ದ, ಜನಸಂದಣಿ ಪರಿಚಯ ಮಾಡಿಸುವ ಸಲುವಾಗಿ ಇಂದಿನಿಂದ ಬೆಳಗ್ಗೆ ಹಾಗೂ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಕರೆದೊಯ್ಯಲಾಗುತ್ತದೆ.

ಕೆಲ ದಿನ ಕಳೆದ ನಂತರ ಅವುಗಳ ಬೆನ್ನಿನ ಮೇಲೆ ಮರಳಿನ ಮೂಟೆ ಭಾರ ಹೊರುವ ತಾಲೀಮು ನೀಡಲಾಗುತ್ತದೆ. ಅರಮನೆ ಆವರಣದಲ್ಲಿ ನಿರ್ಮಿಸಿರುವ ಶೆಡ್ ಗಳಲ್ಲಿ ಬೀಡು ಬಿಟ್ಟಿರುವ ಈ ಆನೆಗಳಿಗೆ ಸ್ನಾನ ಮಾಡಿಸಿ ಉಪಚಾರ ಮಾಡಲಾಗುತ್ತಿದೆ.












Click it and Unblock the Notifications