ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿದ್ದ ಬಾಹುಬಲಿ ಮೇಣದ ಪ್ರತಿಮೆ ತೆರವು, ಏಕೆ?, ಇಲ್ಲಿದೆ ನೋಡಿ ಸಂಪೂರ್ಣ ವಿವರ
ಮೈಸೂರು, ಸೆಪ್ಟೆಂಬರ್, 26: ಬಾಹುಬಲಿ ಸಿನಿಮಾ ಇಡೀ ಭಾರತ ಮಾತ್ರವಲ್ಲ, ಪ್ರಪಂಚದಾದ್ಯಂತ ಸದ್ದು ಮಾಡಿತ್ತು. ಅದರಲ್ಲೂ ಬಾಹುಬಲಿಯಾಗಿ ಪ್ರಭಾಸ್ ನಟನೆ ಅದ್ಭುತವಾಗಿತ್ತು ಎಂಬ ಮೆಚ್ಚುಗೆ ವಿಮರ್ಶಕರಿಂದ ಬಂದಿತ್ತು. ಇದೀಗ ಬಾಹುಬಲಿ ಮೇಣದ ಪ್ರತಿಮೆ ವಿವಾದಕ್ಕೆ ಸಿಲುಕಿದ್ದು, ನಿರ್ಮಾಪಕರ ಆಕ್ಷೇಪದ ಮೇರೆಗೆ ವ್ಯಾಕ್ಸ್ ಮ್ಯೂಸಿಯಂ ಪ್ರತಿಮೆಯನ್ನು ತೆರವುಗೊಳಿಸಿದೆ.
ಅಂದಹಾಗೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ "ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂ" ಇದೆ. ಇಲ್ಲಿ ಸಾಕಷ್ಟು ಮಹನೀಯರು ಹಾಗೂ ಸಿನಿಮಾ ಸೆಲೆಬ್ರಿಟಿಗಳ ಪ್ರತಿಮೆಯನ್ನು ಮಾಡಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಮ್ಯೂಸಿಯಂಗೆ ನಿತ್ಯ ಸಾಕಷ್ಟು ಪ್ರವಾಸಿಗರು ಬರುತ್ತಾರೆ. ಈ ನಿಟ್ಟಿನಲ್ಲಿ ಇತ್ತೀಚಿಗೆ ಬಾಹುಬಲಿ ಪ್ರಭಾಸ್ ಅವರ ಮೇಣದ ಪ್ರತಿಮೆಯನ್ನು ನಿರ್ಮಿಸಲಾಗಿತ್ತು. ಆದರೆ, ಇದೇ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಪ್ರತಿಮೆ ಸ್ಥಾಪನೆಯಾದ ಕೆಲವೇ ದಿನಗಳಲ್ಲಿ ಅದನ್ನು ತೆರವುಗೊಳಿಸಲಾಗಿದೆ.

ಏನಿದು ವಿವಾದ?
ವ್ಯಾಕ್ಸ್ ಮ್ಯೂಸಿಯಂನಲ್ಲಿ ಮೂರು ವರ್ಷದ ಹಿಂದೆ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅವರ ಮೇಣದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು. ಇದರ ಚಿತ್ರವನ್ನು ತೆಗೆದು ಅಭಿಯಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಪ್ರಭಾಸ್ ನೆಟ್‌ವರ್ಕ್ ಮತ್ತು ಎಕ್ಸ್ ಪೇಜ್‌ನಲ್ಲಿ ಈ ಚಿತ್ರವನ್ನು ಹಂಚಿಕೊಳ್ಳಲಾಗಿತ್ತು. ಆದರೆ, ಆ ಚಿತ್ರ ಬಾಹುಬಲಿಯನ್ನು ಹೋಲುತ್ತಿಲ್ಲ ಎಂದು ಹಲವು ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಪ್ರಭಾಸ್ ರೀತಿ ಇಲ್ಲ. ಡೇವಿಡ್ ವಾರ್ನರ್ ರೀತಿ ಇದೆ ಎಂದು ಬೇಸರ ಹೊರ ಹಾಕಿದ್ದರು.
ನಿರ್ಮಾಪಕರಿಂದ ಆಕ್ಷೇಪ
ಇದು ಪ್ರಭಾಸ್ ಅವರನ್ನು ಹೋಲುತ್ತಿಲ್ಲ, ಬಾಹುಬಲಿ ಅವತಾರ ನೋಡಿಯಷ್ಟೇ ಪ್ರಭಾಸ್ ಎಂದು ಗುರುತಿಸಬಹುದು ಎಂದು ಹಲವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಚರ್ಚೆ ಆಗುತ್ತಿರುವುದು ಬಾಹುಬಲಿ ಸಿನಿಮಾದ ನಿರ್ಮಾಪಕ ಶೋಭು ಯರ್ಲಗಡ್ಡ ಅವರ ಗಮನಿಸಿದ್ದಾರೆ. ಮೇಣದ ಪ್ರತಿಮೆ ನೋಡಿ ಬೇಸರಗೊಂಡಿದ್ದಾರೆ. "ಮ್ಯೂಸಿಯಂನಲ್ಲಿರುವ ಮೇಣದ ಪ್ರತಿಮೆ ಉತ್ತಮ ಗುಣಮಟ್ಟದಿಂದ ಕೂಡಿಲ್ಲ. ಇದರ ಕಸ್ಟ್ಯೂಮ್ ಸರಿ ಇಲ್ಲ. ಪ್ರಭಾಸ್ ಅನ್ನು ಇದು ಹೋಲುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದರು.
ತೆರವಾಯ್ತು ಪ್ರತಿಮೆ
ಬಾಹುಬಲಿ ನಿರ್ಮಾಪಕ ಮೇಣದ ಪ್ರತಿಮೆಗೆ ಆಕ್ಷೇಪ ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ, ವ್ಯಾಕ್ಸ್ ಮ್ಯೂಸಿಯಂಗೆ ಕರೆ ಮಾಡಿ ಪ್ರತಿಮೆ ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಸಂಸ್ಥೆಯು ಸೋಮವಾರ ಪ್ರಭಾಸ್ ಪ್ರತಿಮೆಯನ್ನು ತೆರವುಗೊಳಿಸಿದೆ. ನಾವು ಅವರಿಂದ ಅನುಮತಿ ಪಡೆಯದ ಕಾರಣ ಹಾಗೂ ಪ್ರತಿಮೆ ಬಗ್ಗೆ ಆಕ್ಷೇಪ ಎತ್ತಿದ ಕಾರಣ ತೆರವುಗೊಳಿಸಿದ್ದೇವೆ ಎಂದು ವ್ಯಾಕ್ಸ್ ಮ್ಯೂಸಿಯಂ ಮ್ಯಾನೇಜರ್ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications