ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ಸಿಎಂ ಭಾಗಿ
ಇಂದು ಮೈಸೂರು ಅರಮನೆ ಸೇರಿದಂತೆ ನಾಡಿನೆಲ್ಲೆಡೆ ಆಯುಧಪೂಜೆಯ ಸಂಭ್ರಮ ಮುಗಿಲುಮುಟ್ಟಿದೆ. ಬೆಳಿಗ್ಗೆ 5.30ಕ್ಕೆ ಚಂಡಿಹೋಮದೊಂದಿಗೆ ಮೈಸೂರು ಅರಮನೆಯಲ್ಲಿ ಪೂಜೆಗಳು ಆರಂಭಗೊಂಡಿವೆ. 9.30ಕ್ಕೆ ಚಂಡಿಹೋಮಪೂರ್ಣಾಹುತಿ ಕಾರ್ಯಕ್ರಮ ಮುಕ್ತಾಯವಾಗಲಿದೆ. ಇದನ್ನು ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ಹರಿದು ಬರಲಿದೆ.
ಬೆಳಿಗ್ಗೆ 11.45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟಣದ ಆನೆ, ಕುದುರೆ, ಪಟ್ಟದ ಹಸು ಆಗಮಿಸಲಿದೆ. ಮಧ್ಯಾಹ್ನ 12.20 ನಿಮಿಷದಿಂದ ಮಧ್ಯಾಹ್ನ 12.45 ನಿಮಿಷದವರೆಗೆ ಆಯುಧ ಪೂಜೆ ನಡೆಯಲಿದೆ. ಆಯುಧ ಪೂಜೆ ನವರಾತ್ರಿ ಹಬ್ಬದ ಒಂದು ಭಾಗವಾಗಿದೆ. ಇದೊಂದು ಹಿಂದೂ ಹಬ್ಬವಾಗಿದ್ದು, ಇದನ್ನು ಸಾಂಪ್ರದಾಯಿಕವಾಗಿ ಭಾರತದಲ್ಲಿ ಆಚರಿಸಲಾಗುತ್ತದೆ.

ಇದನ್ನು 'ಅಸ್ತ್ರ ಪೂಜಾ' ಎಂದೂ ಕರೆಯಲಾಗುತ್ತದೆ. ದಸರಾ ಹಬ್ಬದ ಒಂಬತ್ತನೇ ದಿನ ಶಸ್ತ್ರಾಸ್ತ್ರ ಮತ್ತು ಸಾಧನಗಳನ್ನು ಪೂಜಿಸಲಾಗುತ್ತದೆ. ಅಶ್ವಿನಿ ಮಾಸದ ಶುಕ್ಲಪಕ್ಷದ ನವಮಿ ದಿನ ಶಸ್ತ್ರಾಸ್ತ್ರ, ವಾಹನ ಹಾಗೂ ಯಂತ್ರಗಳ ಪೂಜೆಯನ್ನು ಮಾಡಿದರೆ ಶುಭವಾಗಲಿದೆ ಎಂದು ನಂಬಲಾಗುತ್ತದೆ.
ಇಂದು ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧಪೂಜೆ ನೆರವೇರಿಸಲಿದ್ದಾರೆ. ಯದುವೀರ ಅವರು ಶುಭ್ರವಸ್ತ್ರಧಾರಿಯಾಗಿ ಅರಮನೆಯಲ್ಲಿನ ಆಯುಧಗಳಿಗೆ ಪೂಜೆ ನೆರವೇರಿಸಿ, ಖಾಸಗಿ ದರ್ಬಾರ್ ನಡೆಸಲಿದ್ದಾರೆ.
ಯದುವೀರ ಅವರು ಶುಭ್ರವಸ್ತ್ರಧಾರಿಯಾಗಿ ಅರಮನೆಯಲ್ಲಿನ ಆಯುಧಗಳಿಗೆ ಪೂಜೆ ನೆರವೇರಿಸಿ, ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಈ ಮಧ್ಯೆ, ಮಂಗಳವಾರ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ನಡೆಯಲಿದ್ದು, ಇದರೊಂದಿಗೆ ಕಳೆದ ಹತ್ತು ದಿನಗಳಿಂದ ಸಾಂಪ್ರದಾಯಿಕವಾಗಿ ನಡೆಯುತ್ತಿರುವ ನಾಡಹಬ್ಬಕ್ಕೆ ತೆರೆ ಬೀಳಲಿದೆ.
ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು, ಚಿನ್ನದ ಅಂಬಾರಿಯಲ್ಲಿ ಸಾಗುವ ನಾಡದೇವತೆ ಚಾಮುಂಡೇಶ್ವರಿಗೆ ಭಕ್ತಿಭಾವದಿಂದ ನಮಿಸಲು ದೇಶ-ವಿದೇಶಗಳಿಂದ ಸಹಸ್ರಾರು ಪ್ರವಾಸಿಗರು ಸಾಂಸ್ಕೃತಿಕ ನಗರಿಯತ್ತ ಧಾವಿಸಲಿದ್ದಾರೆ. ಇದಕ್ಕಾಗಿ ಅರಮನೆ ನಗರಿ ರಂಗೇರುತ್ತಿದೆ.
ಸಿಎಂ ಭಾಗಿ
ಮೈಸೂರು ದಸರಾ ಸಂಭ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಮೈಸೂರು ಪ್ರವಾಸ ಕೈಗೊಳ್ಳಲಿರುವ ಸಿಎಂ ಇಂದು ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ನಗರದ ಬನ್ನಿಮಂಟಪದಲ್ಲಿ ನಡೆಸಲಿರುವ ವೈಮಾನಿಕ ಪ್ರದರ್ಶನ ವೀಕ್ಷಿಸಲಿದ್ದಾರೆ. ಇನ್ನು ನಾಳೆ ಬೆಳಗ್ಗೆ ಎಂಟು ಗಂಟೆಗೆ ಸಿದ್ದರಾಮಯ್ಯ, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಲಿದ್ದಾರೆ.
ಇಂದು ಏರ್ ಶೋ
ಜೊತೆಗೆ ಇಂದು ಮೈಸೂರಿನಲ್ಲಿ ಏರ್‌ಶೋ ನಡೆಯಲಿದ್ದು, ಸಿಎಂ ಇದಕ್ಕೆ ಸಾಕ್ಷಿಯಾಗಲಿದ್ದಾರೆ. ಭಾರತೀಯ ವಾಯುಪಡೆ ವತಿಯಿಂದ ಏರ್ ಶೋ ನಡೆಯುತ್ತಿದ್ದು, ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬನ್ನಿ ಮಂಟಪದಲ್ಲಿ ಯುದ್ಧ ವಿಮಾನಗಳು ಪ್ರದರ್ಶನ ನಡೆಯಲಿದೆ. ಜಂಬೂಸವಾರಿ ವೀಕ್ಷಣೆಗೆ ಆಗಮಿಸುವ ಅತಿ ಗಣ್ಯರು, ಗಣ್ಯರು, ಆಹ್ವಾನಿತರು, ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಹೊಂದಿರುವವರಿಗೆ ಅರಮನೆ ಆವರಣದಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications