ಕೊನೆಯ ಆಷಾಢ ಶುಕ್ರವಾರ: ಮೈಸೂರಿನಲ್ಲಿ ಚಾಮುಂಡಿಗೆ ವಿಶೇಷ ಪೂಜೆ
ಮೈಸೂರು, ಜುಲೈ 21 : ಇಂದು(ಜು.21 )ಆಷಾಢ ಕಡೆ ಶುಕ್ರವಾರ ಹಿನ್ನೆಲೆ , ಮೈಸೂರಿನ ನಾಡ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಕೊನೆಯ ಆಷಾಢ ಶುಕ್ರವಾರವಾದ ಸಂಭ್ರಮ ಜೋರಾಗಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ತಾಯಿಯ ದರ್ಶನ ಪಡೆಯುತ್ತಿದ್ದಾರೆ. ತಾಯಿ ಚಾಮುಂಡೇಶ್ವರಿ ಸರ್ವಾಲಂಕಾರ ಭೂಷಿತೆಯಾಗಿ, ಭಕ್ತವರಪ್ರದಾಯಕಳಾಗಿ ಕಂಗೊಳಿಸುತ್ತಿದ್ದಾಳೆ.
ಇಂದು ಬೆಳಗಿನ ಜಾವದಿಂದಲೇ ತಾಯಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಪಂಚರತ್ನ ಎಂಟರ್ ಪ್ರೈಸಸ್ ವತಿಯಿಂದ ಅನ್ನದಾಸೋಹ ಮತ್ತು ದೇವಾಲಯಕ್ಕೆ ಹೂವಿನ ಅಲಂಕಾರ ಮಾಡಿಸಿದ್ದಾರೆ. ದೇವಾಲಯಕ್ಕೆ ಜಿಲ್ಲಾಧಿಕಾರಿ ಡಿ.ರಂದೀಪ್ ಕುಟುಂಬ ಸಮೇತರಾಗಿ ಭೇಟಿ ನೀಡಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಈ ಬಾರಿ ತುಂಬಾ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದಾರೆ. ಹೊರರಾಜ್ಯಗಳಿಂದಲೂ ಆಗಮಿಸಿದ್ದಾರೆ. ಸುಮಾರು ಒಂದು ಕೋಟಿ ದೇವಳಕ್ಕೆ ಸಂಗ್ರಹವಾಗುವ ನಿರೀಕ್ಷೆಯಿದೆ. ಬಂದ ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ಹೆಚ್ಚಿನ ಸೌಲಭ್ಯ ನೀಡಲು ಬಯಸುತ್ತಿದ್ದೇವೆ. ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಲಿ, ಎಲ್ಲರೂ ಕ್ಷೇಮದಿಂದಿರಲಿ ಎಂದು ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸುತ್ತೇನೆ. ಇವತ್ತು ನನ್ನ ಮಗಳ ಜನ್ಮದಿನವೂ ಆಗಿರುವುದರಿಂದ ತಾಯಿಯ ದರ್ಶನಕ್ಕೆ ಕುಟುಂಬ ಸಮೇತನಾಗಿ ಬಂದಿದ್ದೇನೆ' ಎಂದರು.

ಸುತ್ತೂರು ಮಠದಲ್ಲೂ ವಿಶೇಷ ಪೂಜೆ
ಮೈಸೂರು ಸುತ್ತೂರು ಮಠದಲ್ಲಿ ಕೊನೆಯ ಆಷಾಢ ಪ್ರಯುಕ್ತ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠದ ಚಾಮುಂಡಿಪಾದದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಾಲಯಕ್ಕೆ ಆಗಮಿಸಿ ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು. ಈ ಸಂದರ್ಭ ನೂರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿ, ದೇವಿಯ ಕೃಪೆಗೆ ಪಾತ್ರರಾದರು.












Click it and Unblock the Notifications