ಪೊಲೀಸ್ ಠಾಣೆ ಮೆಟ್ಟಿಲೇರಿದ 'ಬಹುರೂಪಿ' ವಿವಾದ!
ಮೈಸೂರು, ಡಿಸೆಂಬರ್ 16; ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಅತಿಥಿಗಳನ್ನು ಕರೆಸುವ ವಿಚಾರದಲ್ಲಿ ಎದ್ದಿರುವ ವಿವಾದ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಹಾಗೂ ಪ್ರಗತಿಪರ ಚಿಂತಕರ ನಡುವೆ ಶೀತಲ ಸಮರ ಶುರುವಾಗಿದೆ.
ಪ್ರತಿವರ್ಷದಂತೆ ಈ ವರ್ಷವೂ ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಆಯೋಜನೆ ಮಾಡಲಾಗಿದೆ. ಆದರೆ ಉತ್ಸವಕ್ಕೆ ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಹಾಗೂ ನಟಿ ಕಮ್ ಬಿಜೆಪಿ ಮುಖಂಡೆ ಮಾಳವಿಕಾ ಅವಿನಾಶ್ ಕರೆಸಲಾಗುತ್ತಿದೆ. ಇದಕ್ಕೆ ಹವ್ಯಾಸಿ ರಂಗಕರ್ಮಿಗಳು, ಪ್ರಗತಿಪರ ಚಿಂತಕರು ಹಾಗೂ ರಂಗಾಯಣ ಮಾಜಿ ನಿರ್ದೇಶಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚಕ್ರವತಿ ಸೂಲಿಬೆಲೆ ಸುಳ್ಳಿನ ಸರಮಾಲೆಯನ್ನೇ ಪೋಣಿಸಿ ಟೀಕೆಗೆ ಒಳಗಾಗಿದ್ದಾರೆ. ಇತ್ತ ಮಾಳವಿಕಾ ಅವಿನಾಶ್ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಇವರಿಬ್ಬರು ರಂಗಭೂಮಿಗೆ ಏನು ಕೊಡುಗೆ ನೀಡಿದ್ದಾರೆ?, ಏತಕ್ಕಾಗಿ ಕರೆಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಆದರೆ ರಂಗ ಸಮಾಜ ಹಾಗೂ ಹಿರಿಯ ಕಲಾವಿದರೊಂದಿಗೆ ಚರ್ಚಿಸಿಯೇ ಅತಿಥಿಗಳನ್ನು ಕರೆಸಲಾಗುತ್ತಿದೆ ಎಂದು ಅಡ್ಡಂಡ ಕಾರ್ಯಪ್ಪ ಸ್ಪಷ್ಟನೆ ನೀಡಿದ್ದಾರೆ.

ಕಾರ್ಯಪ್ಪ ವಜಾಗೆ ಆಗ್ರಹ; ಮಾಳವಿಕಾ ಅವಿನಾಶ್ ಹಾಗೂ ಚಕ್ರವರ್ತಿ ಸೂಲಿಬೆಲೆಯನ್ನು ಕರೆಸಿಯೇ ಸಿದ್ಧ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿಕೆ ನೀಡಿದ್ದಾರೆ. ಇದು ಪ್ರಗತಿಪರರ ಆಕ್ರೋಶಕ್ಕೆ ಕಾರಣವಾಗಿದ್ದು, ಕಾರ್ಯಪ್ಪ ಅವರನ್ನು ವಜಾಗೊಳಿಸಿ ಎಂದು ಪ್ರತಿಭಟನೆ ನಡೆಸಿದ್ದಾರೆ.
ರಂಗಾಯಣದಲ್ಲಿ ಯಾವುದೇ ಇಸಂ ಇರಬಾರದು. ಕಾರ್ಯಪ್ಪ ಅವರು ಬಲಪಂಥೀಯ ಧೋರಣೆಯನ್ನು ಹೇರುತ್ತಿದ್ದಾರೆ. ಒಂದು ಪಕ್ಷದ ಜೊತೆ ಗುರುತಿಸಿಕೊಂಡಿರುವವರನ್ನು ಅತಿಥಿಯಾಗಿ ಆಹ್ವಾನಿಸಲಾಗುತ್ತಿದೆ. ಆ ಕಾರಣದಿಂದ ಬಹುರೂಪಿಯಲ್ಲಿ ಚಕ್ರವರ್ತಿ ಸೂಲಿಬೆಲೆ ಹಾಗೂ ಮಾಳವಿಕಾ ಅವಿನಾಶ್ ಬರಲು ಬಿಡುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಠಾಣೆ ಮೆಟ್ಟಿಲೇರಿದ ವಿವಾದ; ಬಹುರೂಪಿ ನಾಟಕೋತ್ಸವಕ್ಕೆ ಕೆಲವು ಪ್ರಗತಿಪರರು ಅಡ್ಡಿಪಡಿಸುತ್ತಿದ್ದಾರೆ. ರಂಗಾಯಣದಲ್ಲಿ ನಿರ್ಭೀತಿಯಿಂದ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
"ಡಿ.17ರಂದು ರಂಗಾಯಣದ ಆವರಣದಲ್ಲಿ ಪ್ರತಿಭಟನೆ ನಡೆಸುವ ಬೆದರಿಕೆಯನ್ನು ಕೆಲವರು ಹಾಕಿದ್ದಾರೆ. ರಂಗಾಯಣದಲ್ಲಿ ವಿದ್ಯಾರ್ಥಿಗಳು ರಂಗ ಶಿಕ್ಷಣ ಕಲಿಯುತ್ತಿದ್ದಾರೆ. ಇವರು ಪ್ರತಿಭಟನೆ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ನಾಟಕ ತರಬೇತಿ ಪಡೆಯುವ ಕಲಾವಿದರಿಗೂ ಸಮಸ್ಯೆ ಆಗುತ್ತದೆ. ಹಾಗಾಗಿ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ'' ಎಂದು ಕಾರ್ಯಪ್ಪ ಹೇಳಿದ್ದಾರೆ.
ನಾವೇ ರಕ್ಷಣೆ ಕೊಡುತ್ತೇವೆ; ಸದ್ಯ ಅಡ್ಡಂಡ ಕಾರ್ಯಪ್ಪರನ್ನು ಕೋಮುವಾದಿ ಎಂದು ಪ್ರಗತಿಪರರು ಟೀಕಿಸಿದ್ದಾರೆ. ಆದರೆ ಕಾರ್ಯಪ್ಪ ಪ್ರಗತಿಪರರನ್ನು ಮಾವೋವಾದಿಗಳು ಎಂದು ತಿರುಗೇಟು ನೀಡುತ್ತಿದ್ದಾರೆ. ಕಾರ್ಯಪ್ಪ ದೂರು ನೀಡಿರುವುದನ್ನು ಖಂಡಿಸಿರುವ ಹಿನ್ನೆಲೆ ಸಂಸ್ಥೆಯು, ಯಾರಿಂದ ಬೆದರಿಕೆ ಇದೆ ಎಂದು ಹೇಳಿದರೆ ನಾವೇ ರಕ್ಷಣೆ ಕೊಡುತ್ತೇವೆ ಎಂದು ಚಾಟಿ ಬೀಸಿದೆ. ಕಾರ್ಯಪ್ಪ ಪ್ರಶ್ನಿಸುವ ಗುಣವನ್ನೇ ಸಹಿಸದೆ ಈ ರೀತಿ ದೂರು ನೀಡುವ ಕೆಳಮಟ್ಟಕ್ಕೆ ಇಳಿದಿದ್ದಾರೆ. ಎಲ್ಲದ್ದಕ್ಕೂ ಉಡಾಫೆ, ಭಾವಾವೇಶದ ಉತ್ತರ ನೀಡುತ್ತಾರೆ. ಅವರು ತಮ್ಮ ಸ್ಥಾನವನ್ನು ಅರಿತು ಕೆಲಸ ಮಾಡಬೇಕೆಂಬ ಸಲಹೆಯನ್ನೂ ನೀಡಿದ್ದಾರೆ.
"ನಾನು ಆರ್‌ಎಸ್‌ಎಸ್ ಹಿನ್ನೆಲೆಯವನೇ ಆಗಿದ್ದರೂ ರಂಗಾಯಣದ ನಿರ್ದೇಶಕನಾಗಿ ರಂಗಾಯಣದ ಚಟುವಟಿಕೆಯಲ್ಲಿ ಬಲಪಂಥೀಯ ಧೋರಣೆಯನ್ನು ಹೇರಿಲ್ಲ. ಇದುವರೆಗೆ 11 ಪ್ರೊಡಕ್ಷನ್ ಮಾಡಿದ್ದೇನೆ. ಇದರಲ್ಲಿ ಯಾವುದೂ ಬಲಪಂಥೀಯ ಧೋರಣೆಯನ್ನು ಹೊಂದಿಲ್ಲ'' ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದ್ದಾರೆ.












Click it and Unblock the Notifications