ಮೈಸೂರು: ನ.24ರಿಂದ 26 ರವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಮೈಸೂರು, ಸೆಪ್ಟೆಂಬರ್ 12: ಕನ್ನಡ ಸಾಹಿತ್ಯ ಪರಿಷತ್ತಿನಿಂದ ನ.24 ರಿಂದ 26ರವರೆಗೆ ಮೈಸೂರಿನಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ತಿಳಿಸಿದರು.
ಇಂದು (ಸೆ.12) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಅವರೊಂದಿಗೆ ಚರ್ಚಿಸಿ ನವೆಂಬರ್ ತಿಂಗಳಿನಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ. ಡಿಸೆಂಬರ್ ನಲ್ಲಿ ವಿಶ್ವ ಕನ್ನಡ ಸಮ್ಮೇಳನ ಜರುಗುವುದರಿಂದ ಅದಕ್ಕೂ ಮುನ್ನವೇ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬಹುತೇಕ ಸದಸ್ಯರು ನವೆಂಬರ್ ಮೂರನೇ ವಾರದಲ್ಲಿ ಸಮ್ಮೇಳನ ಆಯೋಜಿಸಲು ಸಹಮತ ವ್ಯಕ್ತಪಡಿಸಿದ ನಂತರ ದಿನಾಂಕ ನಿಗದಿಪಡಿಸಲಾಗಿದೆ. 2018 ರಲ್ಲಿ ವಿಧಾನಸಭಾ ಚುನಾವಣೆಯೂ ಇರುವುದರಿಂದ ಸಾಹಿತ್ಯ ಸಮ್ಮೇಳನವನ್ನು ಜನವರಿಯವರೆಗೆ ಎಳೆಯುವುದು ಬೇಡ ಎಂದು ಸಾಹಿತ್ಯ ಪರಿಷತ್ತು ತೀರ್ಮಾನಿಸಿದೆ.
ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದುನೋಡಬೇಕು. ಹಾಗೆಯೇ ಈ ಬಾರಿ ಪ್ರತ್ಯೇಕ ನಾಡಧ್ವಜ, ಕೇಂದ್ರದ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಅದರಲ್ಲೂ ಮುಖ್ಯವಾಗಿ ಬ್ಯಾಂಕಿಂಗ್ ಉದ್ಯೋಗ ಕ್ಷೇತ್ರದಲ್ಲಿ ಕನ್ನಡಿಗರಿಗೆ ಮೀಸಲಾತಿ ಹಾಗೂ ಮಾತೃಭಾಷಾ ಶಿಕ್ಷಣ ಈ ಕುರಿತು ಸಮ್ಮೇಳನದಲ್ಲಿ ಚರ್ಚೆಯಾಗುವ ಸಂಭವವಿದೆ.












Click it and Unblock the Notifications