ಕೆಎಎಸ್ ಪರೀಕ್ಷೆ : ಮೈಸೂರಿನ ಐಶ್ವರ್ಯಾಗೆ ಪ್ರಥಮ ಸ್ಥಾನ
ಬೆಂಗಳೂರಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಸಿಸೆಂಸ್ಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮೈಸೂರು ಮೂಲದ ಐಶ್ವರ್ಯಾ ಆರ್. ಕೆಎಎಸ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಮೈಸೂರು , ಏಪ್ರಿಲ್ 24 : ಕರ್ನಾಟಕ ಲೋಕಸೇವಾ ಆಯೋಗವು 464 ಗೆಜೆಟೆಡ್ ಪ್ರೊಬೇಷನರಿ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ ಮೈಸೂರಿನ ಐಶ್ವರ್ಯಾ ಆರ್. ಮೊದಲ ಸ್ಥಾನ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಸಿಸೆಂಸ್ಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಐಶ್ವರ್ಯಾ ಆರ್. ಅವರಿಗೆ ಕೆಎಎಸ್ ಮಾಡಿ ಜನರ ಸೇವೆ ಮಾಡಬೇಕೆಂದು ದೊಡ್ಡ ಕನಸಾಗಿತ್ತು. ಈಗ ಆ ಕನಸು ನನಸಾಗುತ್ತಿದೆ.[ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಆರ್ ಮೂರ್ತಿ ಆಯ್ಕೆ]

ಮೊದಲ ರ್ಯಾಂಕ್ ಗಳಿಸಿರುವ ಐಶ್ವರ್ಯ, ತಮ್ಮ ಸಾಧನೆಗೆ ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ. 'ಕೆಎಎಸ್ ಅಧಿಕಾರಿಯಾಗಿ ಜನರ ಸೇವೆ ಮಾಡಬೇಕೆಂದು ಕನಸು ಕಂಡಿದ್ದೆ. ಆ ಕನಸು ಇಂದು ಸಾಕಾರಗೊಂಡಿದೆ. ಇದಕ್ಕೆ ನನ್ನ ಪಾಲಕರು, ಪತಿಯ ಪ್ರೋತ್ಸಾಹವೇ ಕಾರಣ. ಕೆಎಎಸ್ ಪರೀಕ್ಷೆ ಎದುರಿಸಲು ಸತತ 3 ವರ್ಷ ಶ್ರಮಿಸಿದ್ದೇನೆ' ಎಂದು ತಮ್ಮ ಪರೀಕ್ಷಾ ತಯಾರಿ ಕುರಿತು ಮಾಹಿತಿ ಹಂಚಿಕೊಂಡರು.
ಸಾಕಷ್ಟು ವಿವಾದ ಹಾಗೂ ಸುಧಾರಣೆಯ ನಂತರ ಕೆಪಿಎಸ್ಸಿ ನಡೆಸಿದ್ದ ಮೊದಲ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆ ಇದಾಗಿದ್ದು, ಅಭ್ಯರ್ಥಿಗಳ ಸತತ ಹೋರಾಟದ ಬಳಿಕ ಮುಖ್ಯ ಪರೀಕ್ಷೆ ಫಲಿತಾಂಶದ 11 ತಿಂಗಳ ನಂತರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕೆಪಿಎಸ್ಸಿ ಪ್ರಕಟಿಸಿದೆ. ಬಾಗಲಕೋಟೆಯ ರಮೇಶ್ ಕೋಲಾರ್ 2ನೇ ಸ್ಥಾನ ಹಾಗೂ ಬೆಳಗಾವಿಯ ಸಂತೋಷ್ ಕಾಮಗೌಡ 3ನೇ rank ಗಳಿಸಿದ್ದಾರೆ.
ನಾನಾ ಇಲಾಖೆಗಳ 14 ಸ್ಥರದ 464 ಹುದ್ದೆಗಳಿಗೆ 2014ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. 2015ರಲ್ಲಿ ಮುಖ್ಯ ಪರೀಕ್ಷೆ ನಡೆಸಿ, 2016ರ ಮೇನಲ್ಲಿ ಸಂದರ್ಶನಕ್ಕೆ ಅರ್ಹರಾದ ಪಟ್ಟಿಯನ್ನು 1:3 ಅನುಪಾತದಲ್ಲಿ ಅಂತಿಮಗೊಳಿಸಿ ದಾಖಲಾತಿ ಪರಿಶೀಲನೆ ನಡೆಸಲಾಗಿತ್ತು. ಸುಮಾರು 9 ತಿಂಗಳ ವಿಳಂಬದ ಬಳಿಕ ಫೆಬ್ರವರಿಯಲ್ಲಿ ಸಂದರ್ಶನ ನಡೆಸಿ, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.












Click it and Unblock the Notifications