Mysuru Rain: ಮಳೆಯಿಲ್ಲದೆ ಕುಂಠಿತಗೊಂಡ ಕೃಷಿ ಚಟುವಟಿಕೆ; ಸಂಕಷ್ಟದಲ್ಲಿ ರೈತ ವರ್ಗ
ಮೈಸೂರು, ಮೇ 07 : ಪೂರ್ವ ಮುಂಗಾರು ಆಶಾದಾಯಕವಾಗಿದ್ದಿದ್ದರೆ ಇಷ್ಟರಲ್ಲೇ ರೈತಾಪಿ ವರ್ಗ ಹೊಲ ಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿರುತ್ತಿದ್ದರು. ಆದರೆ ಮಳೆ ಕೊರತೆ ಮೈಸೂರು ಜಿಲ್ಲೆಯ ರೈತರನ್ನು ಆತಂಕಕ್ಕೆ ನೂಕಿದೆ. ನೀರಿನ ಸೌಲಭ್ಯ ಹೊಂದಿದ ಕೆಲವು ಕೃಷಿಕರನ್ನು ಹೊರತು ಪಡಿಸಿದರೆ ಉಳಿದಂತೆ ಬಹುತೇಕ ರೈತರು ಮಳೆಗಾಗಿ ಮುಗಿಲತ್ತ ದೃಷ್ಟಿನೆಟ್ಟು ಕಾಯುತ್ತಿರುವುದು ಎದ್ದು ಕಾಣಿಸುತ್ತಿದೆ.
ವಾಡಿಕೆಯ ಮಳೆ ಸುರಿದಿದ್ದರೆ ಇಷ್ಟರಲ್ಲೇ ರೈತರು ತಂಬಾಕು, ಶುಂಠಿ ಸೇರಿದಂತೆ ಆಹಾರ ಬೆಳೆಗಳನ್ನು ಬೆಳೆಯುವ ಕಾರ್ಯದಲ್ಲಿ ರೈತರು ನಿರತರಾಗಿ ಬಿಡುತ್ತಿದ್ದರು. ಆದರೆ ಹೆಚ್ಚಿನ ಕಡೆಗಳಲ್ಲಿ ರೈತರು ಉಳುಮೆ ಮಾಡಿದ್ದು, ನೀರಿಲ್ಲದ ಕಾರಣ ತಂಬಾಕು ಗಿಡಗಳನ್ನು ನೆಡಲು ಮಳೆಗಾಗಿ ಕಾಯುತ್ತಿರುವುದು ಕಂಡು ಬಂದಿದೆ.

ಇದರಿಂದ ಮೈಸೂರು ಜಿಲ್ಲೆಯಲ್ಲಿ ಬರೋಬ್ಬರಿ 58 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಡೆಯಬೇಕಿದ್ದ ಬಿತ್ತನೆ ಕಾರ್ಯ ಸ್ಥಗಿತಗೊಂಡಿದೆ. ತೋಟಗಾರಿಕೆ ಬೆಳೆಗಳು ಮಾತ್ರವಲ್ಲದೆ ಕೃಷಿ ಚಟುವಟಿಕೆಯ ಬಿತ್ತನೆ ಕಾರ್ಯದ ಮೇಲೂ ಪರಿಣಾಮ ಬೀರಿದ್ದು, ತರಕಾರಿ ಮತ್ತು ಸೊಪ್ಪು ಬೆಳೆ ಬೆಳೆಯುವ ಪ್ರಮಾಣವೂ ಕುಸಿತಗೊಂಡಿರುವುದು ಕಂಡು ಬಂದಿದೆ.
ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿದ್ದು, ಬಿತ್ತನೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ವಾಡಿಕೆಯಷ್ಟು ಮಳೆಯಾಗದೇ ಶೇ.75ರಷ್ಟು ಮಳೆ ಕೊರತೆಯಾಗಿರುವುದು ಕಂಡು ಬಂದಿದೆ. ಸದ್ಯ ಮೇ ತಿಂಗಳಲ್ಲಿ ಮೂರ್ನಾಲ್ಕು ದಿನಗಳ ಅಂತರದಲ್ಲಿ ಎರಡು ಬಾರಿ ಭಾರೀ ಮಳೆ ಮೈಸೂರು ನಗರ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ಸುರಿದಿರುವುದು ಆತಂಕದಲ್ಲಿದ್ದ ರೈತರು ಮತ್ತು ಜನರಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ.
ಜಿಲ್ಲೆಯಲ್ಲಿ ಶೇ 75ರಷ್ಟು ಮಳೆ ಕೊರತೆ
ಬಿಸಿಲ ಬೇಗೆಯಲ್ಲಿ ಬೆಂದಿದ್ದ ಜನ ಇದೀಗ ಸ್ವಲ್ಪ ಮಟ್ಟಿಗೆ ನೆಮ್ಮದಿಯುಸಿರು ಬಿಡುವಂತಾಗಿದೆ. ಆದರೆ ಈ ಮಳೆ ಗ್ರಾಮೀಣ ಪ್ರದೇಶಗಳಲ್ಲಿ ಇಷ್ಟರಲ್ಲೇ ಸುರಿದಿದ್ದರೆ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತಿತ್ತು. ಸದ್ಯ ಈಗಲಾದರೂ ಮಳೆ ಸುರಿಯಿತಲ್ಲ ಎಂದು ಜನ ನೆಮ್ಮದಿಯುಸಿರು ಬಿಡುವಂತೆ ಮಾಡಿದೆ. ಮಳೆ ಬೀಳದೆ ಹೋದರೆ ಭೂಮಿ ತೇವಗೊಳ್ಳದೆ ಹುಲ್ಲು ಕೂಡ ಬೆಳೆಯದ ಸ್ಥಿತಿಯಿದ್ದು ಇದರಿಂದ ಜಾನುವಾರುಗಳಿಗೆ ತೊಂದರೆಯಾಗುತ್ತಿತ್ತು. ಇದೇ ರೀತಿ ಮುಂದಿನ ದಿನಗಳಲ್ಲಿ ಮಳೆ ಸುರಿದರೆ ರೈತರಿಗೆ ಸಹಕಾರಿ ಆಗಲಿದೆ.

ಮೈಸೂರು ಜಿಲ್ಲೆಯಲ್ಲಿ ಮಳೆಯ ಪ್ರಮಾಣವನ್ನು ನೋಡುವುದಾದರೆ ಜನವರಿಯಿಂದ ಇಲ್ಲಿಯವರೆಗೆ ವಾಡಿಕೆಯಂತೆ 85 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಈ ಬಾರಿ ಆಗಿರುವುದು ಕೇವಲ 21 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದ್ದು, ಶೇ 75ರಷ್ಟು ಮಳೆ ಕೊರತೆಯಾಗಿದೆ. ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ತಾಪಮಾನ, ಅಂತರ್ಜಲ ಮಟ್ಟ ಕುಸಿತದ ನಡುವೆ ಮಳೆಯ ಕೊರತೆಯು ಕೃಷಿಯ ಚಟುವಟಿಕೆಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಇದು ರೈತರನ್ನು ಕೃಷಿಯಿಂದ ವಿಮುಖರನ್ನಾಗಿಸಿದೆ.
ಖಾಲಿ ಬಿದ್ದ 58ಸಾವಿರ ಹೆಕ್ಟೇರ್ ಭೂಮಿ
ಇನ್ನು ತೋಟಗಾರಿಕೆ ಬೆಳೆಗಳನ್ನು ನಂಬಿಕೊಂಡಿದ್ದ ರೈತರು, ಕಣ್ಣೆದುರೇ ಬೆಳೆ ಒಣಗುತ್ತಿರುವುದನ್ನು ನೋಡುತ್ತಿದ್ದಾರೆ. ಮತ್ತೊಂದೆಡೆ ಕಳೆದ ಒಂದು ತಿಂಗಳಿಂದ ಬಿತ್ತನೆ ಕಾರ್ಯಕ್ಕೆ ಕಾಯುತ್ತಿದ್ದ ರೈತರಿಗೆ ಮಳೆರಾಯ ಕೃಪೆ ತೋರದ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ನಡೆಸದೆ ಸುಮ್ಮನಾಗಿದ್ದಾರೆ. ಈಗ ಮಳೆ ಸುರಿದಿರುವ ಕಾರಣ ಇನ್ನಷ್ಟೇ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಅಂತರ್ಜಲವನ್ನೇ ನಂಬಿಕೊಂಡು ತರಕಾರಿ ಬೆಳೆಯುತ್ತಿದ್ದ ರೈತರು, ಈಗ ಬೋರ್ ವೆಲ್ ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಕಡಿಮೆ ಪ್ರದೇಶದಲ್ಲಿ ತರಕಾರಿ ಬೆಳೆಯುತ್ತಿದ್ದು, ತರಕಾರಿ ಮತ್ತು ಸೊಪ್ಪಿನ ಬೆಲೆ ಗಗನಕ್ಕೆ ಏರುವಂತಾಗಿದೆ.
ಮೈಸೂರು ಜಿಲ್ಲೆಯಲ್ಲಿ 58 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆಯಬೇಕಿತ್ತು. ಮಳೆಯ ಕೊರತೆಯಿಂದಾಗಿ ಸ್ಥಗಿತಗೊಂಡಿದೆ. ಈ ಸಂದರ್ಭದಲ್ಲಿ ಹತ್ತಿ, ಹೊಗೆ ಸೊಪ್ಪು, ದ್ವಿದಳ ಧಾನ್ಯಗಳ ಬಿತ್ತನೆ ಕಾರ್ಯ ನಡೆಸಲು ರೈತರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಮಳೆಯಾಗದ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯದಲ್ಲಿ ವಿಳಂಬವಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ಹೇಳುತ್ತಿವೆ.

ನದಿಗಳಲ್ಲಿ ನೀರು ಹರಿದರೆ ಭತ್ತದ ಕೃಷಿ ಸಾಧ್ಯ
ಮಳೆಯ ಕೊರತೆಯು ತೋಟಗಾರಿಕೆ ಬೆಳೆಗಳ ಮೇಲೂ ಪರಿಣಾಮ ಬೀರಿದೆ. ಮಾವಿನ ಇಳುವರಿ ಕಡಿಮೆಯಾಗಲಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಾವು ಬೆಳೆ ಬರಲು ಸಾಧ್ಯವಾಗುವುದಿಲ್ಲ. ತೋಟಗಾರಿಕೆ ಬೆಳೆಗಳ ಇಳುವರಿ ಕಡಿಮೆಯಾಗಲಿದೆ ಎಂದು ತೋಟಗಾರಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಕೃಷಿ ಮೂಲಕ್ಕೆ ಸಂಕಷ್ಟ ಬಂದಿದ್ದರಿಂದ ತರಕಾರಿ ಮತ್ತು ಹಣ್ಣುಗಳ ಬೆಲೆ ಏರಿಕೆಯಾಗುವುದು ಸಾಮಾನ್ಯವಾಗಿದೆ. ಜಿಲ್ಲೆಯ ರೈತರು ಕಾವೇರಿ, ಲಕ್ಷ್ಮಣ ತೀರ್ಥ, ಕಬಿನಿ ನದಿ ನೀರನ್ನು ನಂಬಿಕೊಂಡು ಭತ್ತ ಸೇರಿದಂತೆ ಇನ್ನಿತರ ಬೆಳೆ ಬೆಳೆಯುತ್ತಿದ್ದು, ಮಳೆ ಉತ್ತಮವಾಗಿ ಸುರಿದು ಬತ್ತಿದ ನದಿಗಳಲ್ಲಿ ನೀರು ಹರಿದರೆ ಮಾತ್ರ ಭತ್ತ ಬೆಳೆಯಲು ಸಾಧ್ಯವಾಗಲಿದೆ.
ಎಲ್ಲವೂ ಅಂದುಕೊಂಡಂತೆ ಆಗಿ ಆಶಾದಾಯಕ ಮುಂಗಾರು ಮಳೆ ಆದರೆ ನದಿ ತುಂಬಿ ಹರಿದು, ಬತ್ತಿದ ಕೆರೆಗಳಲ್ಲಿ ಜೀವಜಲ ಕಾಣಿಸಿ, ಕುಸಿದ ಅಂತರ್ಜಲ ಮಟ್ಟ ವೃದ್ಧಿಯಾಗಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿದೆ. ಅಂತಹ ದಿನಗಳು ಆದಷ್ಟು ಬೇಗ ಬರಲಿ ಎಂದು ಈಗಾಗಲೇ ಬರದಿಂದ ತತ್ತರಿಸಿ ಬೆಳೆ ಬೆಳೆಯಲಾಗದೆ ಸಂಕಷ್ಟ ಅನುಭವಿಸಿದ ರೈತರು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ವರುಣ ಆದಷ್ಟು ಬೇಗ ಕೃಪೆ ತೋರಲಿ.












Click it and Unblock the Notifications