ಮೈಸೂರು; ಗರಿಬಿಚ್ಚಿದ ವಿಮಾನ ಸೇವೆ, 1 ತಿಂಗಳಲ್ಲಿ 4 ಸಾವಿರ ಜನರ ಹಾರಾಟ
ಮೈಸೂರು, ಅಕ್ಟೋಬರ್ 09; ಮೈಸೂರು ನಗರದಲ್ಲಿ ಕೊರೊನಾ ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ವಿಮಾನ ಹಾರಾಟ ಇದೀಗ ಮತ್ತೆ ಗರಿಬಿಚ್ಚಿದ್ದು, ಕಳೆದ 1 ತಿಂಗಳಲ್ಲಿ ಮೈಸೂರಿನಿಂದ 4 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ದೂರದೂರಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಮೂಲಕ ಪ್ರವಾಸಿ ತಾಣವಾದ ಮೈಸೂರಿನಲ್ಲಿ ವಿಮಾನ ಸೇವೆಗೆ ಬೇಡಿಕೆ ಹೆಚ್ಚುತ್ತಿದೆ.
ಆಗಸದಲ್ಲಿ ಹಾರಾಟ ನಡೆಸಬೇಕೆಂಬುದು ಎಲ್ಲರ ಕನಸು. ಸದ್ಯ ವಿಮಾನಯಾನ ಸೇವೆ ಈ ಮೊದಲಿನಂತೆ ಇಲ್ಲ. ಕೈಗೆಟುಕುವ ದರಲ್ಲಿ ಟಿಕೆಟ್ ದರ ನಿಗದಿಯಾಗಿರುವುದರಿಂದ ಉದ್ಯಮಿಗಳಿಂದ ಹಿಡಿದು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಇಂದು ವಿಮಾನದಲ್ಲಿ ಹಾರಾಟ ನಡೆಸುತ್ತಿದ್ದಾರೆ.
ಕೊರೊನಾ ಕಾರಣದಿಂದಾಗಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆ ಸ್ಥಗಿತಗೊಂಡಿತ್ತು. ಆದರೆ ಅನ್‌ಲಾಕ್ ನಂತರ ಇದೀಗ ನಿಧಾನವಾಗಿ ವಿಮಾನ ಕ್ಷೇತ್ರ ಚೇತರಿಕೆ ಹಾದಿಯತ್ತ ಸಾಗುತ್ತಿದೆ. ಪ್ರತಿದಿನ ನೂರಾರು ಜನರು ಸಂಚಾರಕ್ಕೆ ವಿಮಾನವನ್ನು ಬಳಕೆ ಮಾಡುತ್ತಿದ್ದಾರೆ.
ಮೈಸೂರಿನ ಮಂಡಕಳ್ಳಿಯಲ್ಲಿರುವ ವಿಮಾನ ನಿಲ್ದಾಣದ ಕಾರ್ಯ 2009ರಲ್ಲಿ ಪೂರ್ಣಗೊಂಡಿತು. 2010ರಲ್ಲಿ ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದರು. ಸದ್ಯ ರನ್ ವೇ ಉದ್ದ 1740 ಮೀ. ಆಗಿದೆ. ಇದನ್ನು 2750 ಮೀ. ಗೆ ವಿಸ್ತರಣೆ ಮಾಡಬೇಕಿದೆ. ವಿಮಾನ ನಿಲ್ದಾಣದ ಅಭಿವೃದ್ಧಿ, ರನ್ ವೇ ವಿಸ್ತರಣೆಗೆ ಯೋಜನೆ ತಯಾರಾಗಿದ್ದು, ಭೂ ಸ್ವಾಧೀನ ಕಾರ್ಯ ನಡೆಯುತ್ತಿದೆ.

ದಸರಾ ಸಮಯದಲ್ಲಿ ಹೆಚ್ಚಿನ ಜನರು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವ ಆರಂಭಗೊಂಡಿರುವ ಕಾರಣ ಹೆಚ್ಚೆಚ್ಚು ಮಂದಿ ವಿಮಾನಯಾನ ಸೇವೆ ಬಳಸುತ್ತಿದ್ದಾರೆ. ಸದ್ಯ ಮೈಸೂರಿನಿಂದ ಹೈದರಾಬಾದ್, ಕೊಚ್ಚಿ, ಚೆನ್ನೈ, ಬೆಂಗಳೂರು, ಗೋವಾ ನಗರಗಳಿಗೆ ವಿಮಾನ ಸೇವೆ ಕಲ್ಪಿಸಲಾಗಿದೆ. ಕೊರೊನಾ ಕ್ಷೀಣಿಸಿದ್ದರೂ ಎಂದಿನಂತೆ ಪ್ರಯಾಣಿಕರ ತಪಾಸಣೆ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಒದಗಿಸುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ.

ಹೈದರಾಬಾದ್, ಚೆನ್ನೈಗೆ ಡಿಮ್ಯಾಂಡ್
ಕೊರೊನಾದಿಂದ ಭಣಗುಡುತ್ತಿದ್ದ ವಿಮಾನ ನಿಲ್ದಾಣ ಇದೀಗ ಪ್ರಯಾಣಿಕರ ಓಡಾಟದಿಂದ ಕಂಗೊಳಿಸುತ್ತಿದೆ. ಸದ್ಯ ಹೈದರಾಬಾದ್‌ಗೆ ಎರಡು ವಿಮಾನ ಸೇವೆ ಇದ್ದು, ಪ್ರಯಾಣಿಕರಿಂದ ಹೆಚ್ಚಿನ ಡಿಮ್ಯಾಂಡ್ ಇದೆ. ಹೈದರಾಬಾದ್‌ಗೆ ಹೋಗಿ ಬರುವವರ ಸಂಖ್ಯೆಯೂ ದ್ವಿಗುಣಗೊಳ್ಳುತ್ತಿದೆ. ಅದೇ ರೀತಿ ಚೆನ್ನೈ, ಕೊಚ್ಚಿ ಹಾಗೂ ಗೋವಾಗೆ ಹೋಗುವವರ ಸಂಖ್ಯೆಯೂ ದ್ವಿಗುಣಗೊಂಡಿದೆ. ಬೆಂಗಳೂರಿಗೆ ಹೋಗುವವರ ಸಂಖ್ಯೆಯೂ ಕಡಿಮೆಯಾಗಿಲ್ಲ. ಮಂಗಳೂರು, ಹುಬ್ಬಳಿಗೆ ಸದ್ಯ ವಿಮಾನ ಹಾರಾಟ ಇಲ್ಲ. ಮುಂದಿನ ವಾರ ಬೆಳಗಾವಿಗೆ ಸೇವೆ ಮತ್ತೆ ಆರಂಭವಾಗಲಿದೆ.

ಎಲ್ಲೆಲ್ಲಿಗೆ ಹಾರಾಟ ನಡೆಸಲಿದೆ?
ಸದ್ಯ ಮೈಸೂರು ವಿಮಾನ ನಿಲ್ದಾಣದಿಂದ ಇಂಡಿಗೋ, ಅಲಯನ್ಸ್ ಏರ್, ಟ್ರೂಜೆಟ್ ವಿಮಾನ ಸೇವೆಯನ್ನು ನೀಡುತ್ತಿದೆ. ರಾಜ್ಯದ ವಿಮಾನ ನಿಲ್ದಾಣಗಳನ್ನು ಬಳಕೆ ಮಾಡಿಕೊಂಡ ಪ್ರಯಾಣಿಕ ಸಂಖ್ಯೆಯನ್ನು ಗಮನಿಸಿದಾಗ ಮೈಸೂರು ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು, ಬೆಳಗಾವಿ ಹಾಗೂ ಮಂಗಳೂರು ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ಅಲ್ಲದೆ, ಹೊರ ರಾಜ್ಯದಿಂದ ಪ್ರಯಾಣಿಕರು ದಸರಾ ರಜೆಗೆ ಮೈಸೂರಿಗೆ ಬರುತ್ತಿದ್ದಾರೆ ಜೊತೆಗೆ ಉದ್ಯಮಿಗಳು ಹೆಚ್ಚು ಓಡಾಟ ನಡೆಸುತ್ತಿದ್ದಾರೆ.

ಅಗತ್ಯ ಸುರಕ್ಷತಾ ಕ್ರಮಗಳು
"ಕೊರೊನಾದಿಂದ ಬದುಕು ನಿಂತ ನೀರಾಗಿತ್ತು. ಆದರೆ, ಇದೀಗ ಅನ್‌ಲಾಕ್‌ನಿಂದ ಹೊಸ ಆಶಾವಾದ ಸೃಷ್ಟಿಯಾಗಿದೆ. ಜನರು ನಿಧಾನವಾಗಿ ಸಹಜ ಜೀವನಕ್ಕೆ ವಾಲುತ್ತಿದ್ದಾರೆ. ಕಳೆದ ಒಂದು ತಿಂಗಳಿನಲ್ಲಿ ವಿಮಾನದಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಇದು ನಿಜಕ್ಕೂ ಸಂತಸದ ವಿಷಯ. ಕೊರೊನಾ ಕಡಿಮೆ ಆಗಿದ್ದರೂ ಮಾರ್ಗಸೂಚಿ ಅನ್ವಯ ನಿಲ್ದಾಣದಲ್ಲಿ ಅಗತ್ಯ ಸುರಕ್ಷತ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದು ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕರಾದ ಮಂಜುನಾಥ್ ತಿಳಿಸಿದ್ದಾರೆ.

ಬೆಳಗಾವಿಗೆ ಮತ್ತೆ ಸೇವೆ
"ಮೈಸೂರು-ಬೆಳಗಾವಿಗೂ ಈ ಹಿಂದೆಯೇ ವಿಮಾನ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ, ಕೋವಿಡ್ ಕಾರಣದಿಂದ ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿರುವ ಕಾರಣ ಹಾಗೂ ಈ ಮಾರ್ಗಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಮುಂದಿನ ವಾರದಿಂದ ಮೈಸೂರು -ಬೆಳಗಾವಿ ವಿಮಾನ ಸೇವೆಗೆ ಮತ್ತೆ ಚಾಲನೆ ನೀಡಲಾಗುತ್ತದೆ" ಎಂದು ಮಂಜುನಾಥ್ ತಿಳಿಸಿದ್ದಾರೆ.












Click it and Unblock the Notifications