ದಸರಾ ಜಂಬೂಸವಾರಿ ಯಶಸ್ವಿ: ರಿಲ್ಯಾಕ್ಸ್ ಮೂಡಿಗೆ ಜಾರಿದ ಗಜಪಡೆ
ಮೈಸೂರು, ಅಕ್ಟೋಬರ್ 25: ಕಳೆದ ಒಂದೂವರೆ ತಿಂಗಳಿನಿಂದ ನಾನಾ ತಾಲೀಮಿನಲ್ಲಿ ನಿರತವಾಗಿ ಜಂಬೂಸವಾರಿ ಯಶಸ್ವಿಗೊಳಿಸಿದ ಗಜಪಡೆ ಬುಧವಾರ ರಿಲ್ಯಾಕ್ಸ್ ಮೂಡಿಗೆ ಜಾರಿವೆ. ಅಭಿಮನ್ಯು ನಾಲ್ಕನೆ ಬಾರಿ ಅಂಬಾರಿ ಹೊತ್ತು ಯಶಸ್ವಿಯಾಗಿ ಬನ್ನಿಮಂಟಪ ತಲುಪಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಹಿಡಿದು ಮಾವುತರು ಹಾಗೂ ಕಾವಾಡಿಗರು ಸಂಭ್ರಮದಲ್ಲಿದ್ದಾರೆ.
ಅಭಿಮನ್ಯು ಮಾವುತ ವಸಂತ ಯುದ್ಧ ಗೆದ್ದ ಸಂಭ್ರಮದಲ್ಲಿದ್ದಾನೆ. ಅಲ್ಲದೆ, ಇತರೆ ಆನೆಗಳು ಯಾವುದೇ ಸಮಸ್ಯೆ ಇಲ್ಲದೆ ಮೆರವಣಿಯಲ್ಲಿ ಸಾಗಿಬಂದವು. ಈ ಹಿನ್ನೆಲೆಯಲ್ಲಿ ಆನೆಗಳಿಗೆ ಮೀಸಲಾದ ಅರಮನೆ ಆವರಣದಲ್ಲಿ ನಿರ್ಮಿಸಿರುವ ತೊಟ್ಟಿಯಲ್ಲಿ ಸ್ನಾನ ಮಾಡಿಸಲಾಯಿತು.

ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಂಡ ಆನೆಗಳಾದ ಅಭಿಮನ್ಯು, ಭೀಮ, ಅರ್ಜುನ, ಧನಂಜಯ, ಗೋಪಾಲ, ಪ್ರಶಾಂತ, ವಿಜಯ, ಲಕ್ಷ್ನಿ ಇದೀಗ ರಿಲ್ಯಾಕ್ಸ್ ಮೂಡಿನಲ್ಲಿವೆ. ಮಂಗಳವಾರ ದಸರಾ ಜಂಬೂ ಸವಾರಿ ಮೆರವಣಿಯಲ್ಲಿ ಪಾಲ್ಗೊಂಡಿದ್ದ ಅಭಿಮನ್ಯು ನೇತೃತ್ವದ ಗಜಪಡೆ ಇದೀಗ ಅರಮನೆ ಆವರಣದಲ್ಲಿ ದಣಿವಾರಿಸಿಕೊಳ್ಳುತ್ತಿವೆ.
ಬುಧವಾರ ಆನೆಗಳಿಗೆ ಯಾವುದೇ ತಾಲೀಮು, ಕಸರತ್ತು ಇರಲಿಲ್ಲ. ಹಾಗಾಗಿ ಆನೆಗಳು ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದವು. ಮಾವುತರು ಆನೆಗಳನ್ನು ತೊಳೆಯುತ್ತಿದ್ದರೆ, ನೀರಿನಲ್ಲಿ ಆಟವಾಡುತ್ತಾ ಆನೆಗಳು ನಿರಾಳವಾಗಿದ್ದು ಕಂಡುಬಂದಿತು. ಇದೆ ಮೊದಲ ಬಾರಿಗೆ ಆಗಮಿಸಿದ್ದ ಕಂಜನ್, ರೋಹಿತ, ಹಿರಣ್ಯ ಹಾಗೂ ಸುಗ್ರೀವ ಆನೆಗಳಿಗೆ ಜಂಬೂಸವಾರಿಯಲ್ಲಿ ಭಾಗವಹಿಸಲು ಅವಕಾಶ ಸಿಗಲಿಲ್ಲ.

ಸೆಲ್ಫಿಗೆ ಮುಗಿಬಿದ್ದ ಜನರು
ಜಂಬೂಸವಾರಿ ಮುಗಿದ ಹಿನ್ನೆಲೆಯಲ್ಲಿ ದಸರಾ ಆನೆಗಳು ಅರಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರೆ ಜನರು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ದಸರಾ ಸಂಭ್ರಮ ಮುಗಿದರೂ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಮಾತ್ರ ಏರುತ್ತಲೇ ಇದೆ. ಬುಧವಾರ ಸಾಕಷ್ಟು ಜನ ಆನೆಗಳೊಡನೆ ಫೋಟೋ ತೆಗೆಸಿಕೊಂಡು ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜಂಬೂಸವಾರಿ ಮುಗಿದ ಕಾರಣ ಮಾವುತರು ಹಾಗೂ ಕಾವಾಡಿಗರು ಯಾವುದೇ ಪ್ರತಿರೋಧ ತೋರದೆ ಫೋಟೋ ತೆಗೆಸಿಕೊಳ್ಳಲು ಅನುವು ಮಾಡಿಕೊಟ್ಟರು.
ಗಜಪಡೆ ಬೀಳ್ಕೊಡುಗೆ
ಸುಮಾರು 50 ದಿನ ಆನೆಗಳಿಗೆ ಉತ್ತಮ ತರಬೇತಿ, ತಾಲೀಮು ಕೊಟ್ಟು ಮಾವುತರು ಹಾಗೂ ಕಾವಾಡಿಗರು ಈ ಬಾರಿಯ ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ್ದಾರೆ. ಹಾಗಾಗಿ ಅಕ್ಟೋಬರ್ 26ರಂದು ಗಜಪಡೆಗೆ ಬೀಳ್ಕೊಡುಗೆ ನೀಡಲಾಗುತ್ತದೆ. ಇಷ್ಟು ದಿನ ಅರಮನೆಯಲ್ಲಿದ್ದ ಆನೆಗಳಿಗೆ ಸಂಪ್ರದಾಯದಂತೆ ಪೂಜೆ ನೆರವೇರಿಸಿ ಸ್ವ-ಸ್ಥಳಕ್ಕೆ ಕಳಿಸಿಕೊಡಲಾಗುತ್ತದೆ ಎಂದು ಡಿಸಿಎಫ್ ಸೌರಭ್ ಕುಮಾರ್ ತಿಳಿಸಿದ್ದಾರೆ.












Click it and Unblock the Notifications