ಮೈಸೂರು ಅರಮನೆ ರತ್ನಖಚಿತ ಸಿಂಹಾಸನ ವೀಕ್ಷಣೆಗೆ 2 ವರ್ಷಗಳ ನಂತರ ಅವಕಾಶ
ಮೈಸೂರು, ಸೆಪ್ಟೆಂಬರ್ 25 : ಯದುವಂಶದ ಅರಸರಿಗೆ ಬಳುವಳಿಯಾಗಿ ಬಂದ ವಿಜಯನಗರ ಅರಸರ ಕಾಲದ ರತ್ನ ಖಚಿತ ಸಿಂಹಾಸನ ಮೈಸೂರು ಅರಮನೆಯಲ್ಲಿ 2 ವರ್ಷಗಳ ನಂತರ ಮತ್ತೆ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಿದೆ.
ಒಡೆಯರ್ ಮನೆತನದ ಸುಪರ್ದಿಯಲ್ಲಿರುವ ವಜ್ರ- ವೈಡೂರ್ಯಗಳಿಂದ ಕೂಡಿದ ಸಿಂಹಾಸನ ಕಳೆದ ವರ್ಷ ದಸರಾ ಸಮಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರಲಿಲ್ಲ. ಆದರೆ ಈ ಬಾರಿ ರಾಜವಂಶಸ್ಥರು ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಿದ್ದಾರೆ.

ಸೆಪ್ಟೆಂಬರ್ 30ರವರೆಗೆ ಇದು ವೀಕ್ಷಣೆಗೆ ಲಭಿಸಲಿದೆ. ಅಧಿಕಾರ, ಘನತೆ, ಗಾಂಭೀರ್ಯ, ಪ್ರತಿಷ್ಠೆಯ ಸಂಕೇತವಾದ ಸಿಂಹಾಸನವನ್ನು ಸೆಪ್ಟೆಂಬರ್ 15ರಂದು ಜೋಡಣೆ ಮಾಡಿದ ನಂತರ ಬಿಳಿ ಬಟ್ಟೆಯನ್ನು ಹೊದಿಸಿ ಮುಚ್ಚಿಡಲಾಗಿತ್ತು. ದಸರಾ ಪ್ರಾರಂಭದ ದಿನ ಅದಕ್ಕೆ ಅಕ್ಷಿ, ಛತ್ರಿ ಹಾಗೂ ಕಳಶವನ್ನು ಜೋಡಣೆ ಮಾಡಿ ಒಡೆಯರ್ ಅವರು ಖಾಸಗಿ ದರ್ಬಾರ್ ಗೆ ಸಿಂಹಾಸನಾರೋಹಣ ಮಾಡಿದ ನಂತರ ವೀಕ್ಷಣೆಗೆ ತೆರೆಯಲಾಯಿತು.
ದಸರಾ ವೈಭವ 2017: ಸರಳ ದಸರಾದ ಅಪರೂಪದ ಚಿತ್ರಗಳು
ಅರಮನೆ ಮತ್ತು ರಾಜ್ಯ ಸರಕಾರದ ನಡುವಿನ ವಿವಾದದಿಂದಾಗಿ 2 ವರ್ಷಗಳಿಂದ ಸಿಂಹಾಸನವನ್ನು ಪ್ರವಾಸಿಗರು ಹಾಗೂ ಸಾರ್ವಜನಿಕರು ವೀಕ್ಷಿಸಲು ರಾಜಮನೆತನದವರು ಅವಕಾಶ ನೀಡಿರಲಿಲ್ಲ. ಕಳೆದ ವರ್ಷ ಅರಮನೆ ಆಡಳಿತ ಮಂಡಳಿ ನಿರ್ದೇಶಕರಾಗಿದ್ದ ಬಿ.ಜಿ.ಇಂದ್ರಮ್ಮ ಅವರು ಸಿಂಹಾಸನದ ಮೇಲೆ ಹೊದಿಸಿದ್ದ ಬಿಳಿ ಬಟ್ಟೆಯನ್ನು ತೆಗೆಯಲು ಹೋಗಿ ವಿವಾದಕ್ಕೀಡಾಗಿದ್ದರು.
ಸಿಂಹಾಸನ ವೀಕ್ಷಣೆಗೆ ಭಾನುವಾರದಿಂದಲೇ ಅವಕಾಶ ನೀಡಲಾಗಿದ್ದು, ಪ್ರವಾಸಿಗರು ಆಕರ್ಷಿತರಾಗಿದ್ದಾರೆ. ಅರಮನೆ ವೀಕ್ಷಣೆಗೆ ಪವೇಶ ದರ 50 ರುಪಾಯಿ ಇದ್ದು, ಸಿಂಹಾಸನ ವೀಕ್ಷಣೆಗೆ ಪ್ರತ್ಯೇಕವಾಗಿ 50 ರುಪಾಯಿ ಟಿಕೆಟ್ ಖರೀದಿಸಬೇಕಿದೆ. ಪ್ರತ್ಯೇಕ ಟಿಕೆಟ್ ಖರೀದಿಸಿದವರಿಗೆ ಬಲಗೈಗೆ ಕೆಂಪು ಪಟ್ಟಿ (ರೆಡ್ ಬ್ಯಾಂಡ್) ಒಂದನ್ನು ಕಟ್ಟಲಾಗುತ್ತದೆ.
ಇದನ್ನು ತೋರಿಸಿದರೆ ಭದ್ರತಾ ಸಿಬ್ಬಂದಿ ಒಳಗೆ ಬಿಡುತ್ತಾರೆ. 2000ಕ್ಕೂ ಹೆಚ್ಚು ಮಂದಿ ಭಾನುವಾರ ಸಿಂಹಾಸನ ವೀಕ್ಷಣೆ ಮಾಡಿದ್ದಾರೆ.











Click it and Unblock the Notifications