ಸಿನಿಮಾದವರ ಬಗ್ಗೆ ಮಾತನಾಡಬೇಡಿ; ಹರ್ಷಿಕಾ ಪೂಣಚ್ಚ
Recommended Video
ಮಡಿಕೇರಿ, ಜೂನ್ 17 : ಕೊಡಗು ಬಗ್ಗೆ ಮಾತನಾಡಲು ಸಿನಿಮಾದವರಾರು? ಅವರು ಏನು ಮಾಡಬಹುದು? ಎಂಬ ಸಚಿವ ಸಾ ರಾ ಮಹೇಶ್ ಹೇಳಿಕೆಗೆ ನಟಿ ಹರ್ಷಿಕಾ ಪೂಣಚ್ಚ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದನ್ನು ಹರಿಬಿಟ್ಟ ನಟಿ, ಸಚಿವರು ಇತ್ತೀಚೆಗೆ ನಡೆದ ಮಂಡ್ಯ ಲೋಕಸಭಾ ಚುನಾವಣೆಯನ್ನು ನೆನಪಿಸಿಕೊಳ್ಳಬೇಕು. ಚಿತ್ರರಂಗದವರ ಬಗ್ಗೆ ಮಾತನಾಡಬೇಡಿ ಎಂದಿದ್ದಾರೆ.
ಈ ಹಿಂದೆ ಕೊಡಗು ಸಂತ್ರಸ್ತರಿಗೆ ಸರ್ಕಾರ ನಿರ್ಮಿಸಿಕೊಟ್ಟಿರುವ ಮನೆಗಳ ಗುಣಮಟ್ಟದ ವಿಚಾರಕ್ಕೆ ಹರ್ಷಿಕಾ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸಚಿವ ಸಾ ರಾಮಹೇಶ್, 'ಹರ್ಷಿಕಾ ಸಿನಿಮಾಗಳ ಬಗ್ಗೆ ಮಾತನಾಡಲಿ. ಮನೆಗಳ ಗುಣಮಟ್ಟದ ಬಗ್ಗೆ ಏನು ಗೊತ್ತು ಅವರಿಗೆ' ಎಂದು ಪ್ರಶ್ನಿಸಿದ್ದರು.

ಅವರ ಮಾತಿಗೆ ಉತ್ತರಿಸಿರುವ ನಟಿ ಹರ್ಷಿಕಾ, ಉತ್ತಮ ಗುಣಮಟ್ಟದ ಮನೆಯನ್ನು ಸರ್ಕಾರ ನಿರ್ಮಿಸಿಕೊಡಲಿ ಎಂದು ಮನವಿ ಮಾಡಿದ್ದೇನೆಯೇ ಹೊರತು ನಾನು ಯಾರನ್ನೂ ದೂಷಿಸಿಲ್ಲ. ಇದ್ದದ್ದು ಇದ್ದಂತೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಂತಾಯಿತು ಎನ್ನುವ ಪರಿಸ್ಥಿತಿ ನನ್ನದಾಗಿದೆ ಎಂದರು.
ನಾನು ಕೆಲವು ಮಾದರಿ ಮನೆಗಳ ಫೋಟೊ ನೋಡಿದೆ. ಅದು ನನಗೆ ಇಷ್ಟವಾಗಿಲ್ಲ. ಏಕೆಂದರೆ ಮನೆಗಳನ್ನು ಶೀಟ್ ನಲ್ಲಿ ನಿರ್ಮಿಸಲಾಗಿದೆ. ಗಾಳಿ ಬೆಳಕಿಲ್ಲದೆ ಕೆಟ್ಟದಾಗಿ ಇತ್ತು. ಹೀಗಾಗಿ ಕೊಡಗಿನ ಸಂತ್ರಸ್ತರ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತದೆ ಎಂದು, ಒಳ್ಳೆಯ ಮನೆಗಳನ್ನು ಕಟ್ಟಿ ಕೊಡಿ ಎಂದು ಮನವಿ ಮಾಡಿದ್ದೆ. ಈ ಸಂಬಂಧ ಯಾರನ್ನೂ ದೂರಿಲ್ಲ ಎಂದು ತಿಳಿಸಿದ್ದಾರೆ.
ನಾನು ಬಿಇ ಪದವೀಧರೆ. ಕೊಡಗಿನ ಮನೆ ಮಗಳು. ಭಾರತದ ಪ್ರಜೆ. ನನಗೆ ಈ ಬಗ್ಗೆ ಹೇಳುವ ಎಲ್ಲಾ ಹಕ್ಕೂ ಇದೆ. ನಮ್ಮ ದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಕೂಡ ಸಿನಿಮಾದವರು. ತಮಿಳುನಾಡಿನ ಸಾಕಷ್ಟು ಮಂತ್ರಿಗಳು ಸಿನಿಮಾದವರು. ಅಷ್ಟೇ ಅಲ್ಲದೆ ಸಿನಿಮಾದವರು ಏನು ಮಾಡಬಹುದು ಅನ್ನೋದು ಇತ್ತೀಚೆಗೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿಯೇ ಗೊತ್ತಾಗಿದೆ. ಸಿನಿಮಾದವರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಸಚಿವರ ಹೇಳಿಕೆಗೆ ಹರ್ಷಿಕಾ ಪೂಣಚ್ಚ ಮತ್ತೊಂದು ಚಾಟಿ ಬೀಸಿದ್ದಾರೆ.












Click it and Unblock the Notifications