ಮೈಸೂರು: 'ನೀರುಣಿಸಿ- ಜೀವವನ್ನುಳಿಸಿ' ಅಭಿಯಾನಕ್ಕೆ ಪ್ರಜ್ವಲ್ ದೇವರಾಜ್ ಸಾಥ್
ಮೈಸೂರು, ಮಾರ್ಚ್ 06: ಬಿಸಿಲ ಪ್ರಖರತೆ ಹೆಚ್ಚಾಗುತ್ತಿದ್ದಂತೆಯೇ ಮೂಕಪ್ರಾಣಿಗಳು ನಗರದಲ್ಲಿ ನೀರಿಗಾಗಿ ಹಾತೊರೆಯುವುದು ಎಲ್ಲೆಂದರಲ್ಲಿ ಕಂಡು ಬರುತ್ತದೆ. ಜತೆಗೆ ಪಕ್ಷಿಗಳು ಕೂಡ ನೀರಿಗಾಗಿ ಹುಡುಕಾಟ ನಡೆಸುತ್ತವೆ. ಹೀಗಾಗಿ ಪ್ರತಿವರ್ಷವೂ ಮೈಸೂರು ನಗರದಲ್ಲಿ ಬೇಸಿಗೆ ಬರುತ್ತಿದ್ದಂತೆಯೇ ಪ್ರಾಣಿ ಪ್ರಿಯರು ತಮ್ಮದೇ ಆದ ರೀತಿಯಲ್ಲಿ ನೀರು ಮತ್ತು ಆಹಾರ ನೀಡಿ ಪ್ರಾಣಿ ಮತ್ತು ಪಕ್ಷಿಗಳ ದಾಹವನ್ನು ನೀಗಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಕಂಡು ಬರುತ್ತದೆ.
ಈ ನಡುವೆ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಪ್ರತಿವರ್ಷವೂ ಮೂಕ ಪ್ರಾಣಿಗಳಿಗೆ ನೀರುಣಿಸುವ ಕಾರ್ಯವನ್ನು ಮಾಡುತ್ತಾ ಬರುವುದಲ್ಲದೆ, ನಗರದ ಜನರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ. ಈ ಬಾರಿ 2ತಿಂಗಳ ಕಾಲ ಮೂಕ ಸ್ಪಂದನೆ ಎಂಬ 'ನೀರುಣಿಸಿ-ಜೀವವನ್ನುಳಿಸಿ, ಅಭಿಯೋಜನೆಯನ್ನು ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದು ಈ ಸಂಬಂಧ ನಗರದ ಚಾಮುಂಡಿಪುರಂನಲ್ಲಿರುವ ಟ್ರಸ್ಟ್ ಕಚೇರಿಯಲ್ಲಿ ಮೂಕ ಸ್ಪಂದನ ಅಭಿಯಾನದ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿದ್ದಾರೆ.

ಈ ವೇಳೆ ನಡೆದ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಪ್ರಜ್ವಲ್ ದೇವರಾಜ್ ಪಾಲ್ಗೊಂಡು ಮಾತನಾಡಿ, ಮನುಷ್ಯನ ಒಡನಾಡಿಯಾಗಿರುವ ಪ್ರಾಣಿ ಪಕ್ಷಿಗಳು ಸೇರಿದಂತೆ ಜೀವ ಸಂಕುಲವನ್ನುಳಿಸಲು ಸಮಾಜದಲ್ಲಿರುವ ಸಹೃದಯಿ ನಾಗರಿಕರು ಮುಂದಾಗಬೇಕೆಂದು ಹೇಳಿದ್ದಾರೆ. ಬೇಸಿಗೆಯ ರಣಬಿಸಿಲಿನ ತಾಪಮಾನದ ತೀವ್ರತೆಯಿಂದಾಗಿ ಪ್ರಾಣಿ ಪಕ್ಷಿಸಂಕುಲ ಬಳಲುತ್ತವೆ. ಕುಡಿಯುವ ನೀರು ಆಹಾರಕ್ಕಾಗಿ ಪರಿತಪಿಸುತ್ತವೆ. ಆದ್ದರಿಂದ ಪರಿಸರ ರಕ್ಷತಿ ರಕ್ಷಿತಃ ಪರಿಸರ ಸ್ನೇಹಿ ತಂಡ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ 2ತಿಂಗಳ ಕಾಲ ಮೂಕ ಸ್ಪಂದನೆ ಎಂಬ 'ನೀರುಣಿಸಿ-ಜೀವವನ್ನುಳಿಸಿ, ಅಭಿಯೋಜನೆಯನ್ನು ಮೈಸೂರು ನಗರದ ಸುತ್ತಮುತ್ತ ಪ್ರದೇಶಗಳಲ್ಲಿ ರೂಪಿಸುತ್ತಿರುವುದು ಅತ್ಯುತ್ತಮವಾದ ಕೆಲಸ ಎಂದು ಶ್ಲಾಘಿಸಿದ್ದಾರೆ.
ಕುಡಿಯುವ ನೀರಿಗೆ ಪ್ರಾಣಿಪಕ್ಷಿಗಳು ಪರಿತಪಿಸುವ ಕಾಲ
ಬೇಸಿಗೆಯ ದಿನ ಇನ್ನೇನು ಆರಂಭಗೊಂಡಿದ್ದು ಪ್ರಾಣಿ ಪಕ್ಷಿಗಳು ತಮ್ಮ ಅಸ್ಥಿತ್ವಕ್ಕಾಗಿ ಹೋರಾಟ ನಡೆಸುವ ಹಾದಿಯಲ್ಲಿರುತ್ತವೆ. ಜನವಸತಿ ಮತ್ತು ಜನಸಂಖ್ಯೆಗನುಗುಣವಾಗಿ ಮೊಬೈಲ್ ಮತ್ತು ಇತರೆ ತರಂಗದಿಂದಾಗಿ ಹಾಗೂ ಅಗತ್ಯ ನಾಗರೀಕ ಸವಲತ್ತುಗಳ ನೆರಳಿನಡಿಯಲ್ಲಿ ಈಗಾಗಲೇ ಹಲವು ಪಕ್ಷಿಗಳ ಸಂತತಿ ನಶಿಸಿ ಹೋಗುತ್ತಿವೆ. ಅಳಿದು ಉಳಿದಿರುವ ಪಕ್ಷಿಗಳು ಜನತೆಯ ಮಧ್ಯೆಯೇ ಬದುಕಿ ಬೆರೆತು ಜೀವಿಸುತ್ತಿದ್ದು, ಇವುಗಳನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ. ಹೀಗಾಗಿ ತಿನ್ನಲು ಆಹಾರ ಮತ್ತು ಕುಡಿಯಲು ನೀರಿಗಾಗಿ ಅವು ಪರಿತಪಿಸುವ ಕಾಲ ಇದಾಗಿದೆ ಎಂದಿದ್ದಾರೆ.
ಈ ಭೂಮಂಡಲದಲ್ಲಿ ಸರ್ವಜೀವಿಗಳಿಗೂ ಸಮಬಾಳು ಸ್ವಾತಂತ್ರ್ಯ ಇರಬೇಕು. ಹೀಗಾಗಿ ಮಾನವೀಯ ದೃಷ್ಟಿಯಿಂದ ಅವುಗಳ ಬಗ್ಗೆ ಕಾಳಜಿವಹಿಸಬೇಕೆಂದು ಅವರು ಕಳಕಳಿ ವ್ಯಕ್ತಪಡಿಸಿದರಲ್ಲದೆ, ಸಮಾಜಮುಖಿ ಟ್ರಸ್ಟ್ ನ ಈ ಸೇವಾ ಕಾರ್ಯ ನಿಜಕ್ಕೂ ಶ್ಲಾಘನೀಯ. ಇವರ ಈ ಕೆಲಸ ಯಶಸ್ವಿಗೊಳ್ಳಲಿ ಸಾರ್ವಜನಿಕರ ಪಾತ್ರ ಸೇವಾ ಕಾರ್ಯಕ್ಕೆ ಕೈ ಜೋಡಿಸಲಿ ಎಂದು ಹೇಳಿದರು

ಆಹಾರ ನೀರು ನೀಡುವ ಕಾರ್ಯಕ್ಕೆ ಕೈಜೋಡಿಸಿ
ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ ಮಾತನಾಡಿ, ನಮ್ಮ ಈ ಅಭಿಯಾನಕ್ಕೆ ಸಾರ್ವಜನಿಕರು ಸಹ ಕೈಜೋಡಿಸಬೇಕಿದೆ. ಮೈಸೂರು ನಗರದ ಪ್ರತಿಯೊಂದು ವಾರ್ಡ್ ನಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ನೀರಿನ ತೊಟ್ಟಿ ಹಾಗೂ ಮರಗಳಿಗೆ ನೀರಿನ ತಟ್ಟೆ ಹಾಗೂ ಆಹಾರದ ತಟ್ಟೆ ನೆಡಲಾಗುವುದು ಹಾಗೆಯೇ ಸುತ್ತಮುತ್ತ ಇರುವವರಿಗೆ ಪ್ರತಿನಿತ್ಯ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವಂತೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭ ಎಲ್ಲರೂ ಅವರವರ ಮನೆಗಳ ಮೇಲಿನ ತಾರಸಿಯಲ್ಲಿ, ಮರಗಳ ಕೆಳಗೆ, ಮನೆಯ ಮುಂದಿನ ರಸ್ತೆಯ ಇಕ್ಕೆಲಗಳಲ್ಲಿ ಪ್ರಾಣಿ, ಪಕ್ಷಿಗಳ ಬಾಯಿಗೆ ಎಟುಕುವಂತೆ ಮಣ್ಣಿನ ಬಟ್ಟಲು ಅಥವಾ ಸಣ್ಣ ಸಿಮೆಂಟ್ ತೊಟ್ಟಿಗಳನ್ನಿಟ್ಟು ಅದರಲ್ಲಿ ಶುದ್ಧ ನೀರನ್ನು ತುಂಬಿಡಬೇಕು. ಆಹಾರ ಧಾನ್ಯ ಮಿತವಾಗಿಟ್ಟು ಅವುಗಳನ್ನು ಸಲಹಬೇಕಿದೆ ಎಂದರಲ್ಲದೆ, ಪ್ರಾಣಿ ಪಕ್ಷಿ ಸಂಕುಲವನ್ನುಳಿಸಿಕೊಳ್ಳುವುದು ನಾಗರಿಕ ಸಮಾಜದಲ್ಲಿರುವ ನಮ್ಮಗಳ ಆದ್ಯ ಕರ್ತವ್ಯವೆಂದು ಭಾವಿಸಬೇಕು. ನಮ್ಮೊಟ್ಟಿಗಿರುವ ಜೀವರಾಶಿಗಳನ್ನೂ ರಕ್ಷಿಸಿ ಅವುಗಳ ಬಗೆಗೆ ಅನುಕಂಪ ತೋರಬೇಕಾಗಿರುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಬೇಕಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಪ್ರದೀಪ್ ಗೌಡ, ಅಮಿತ್ ಕುಮಾರ್, ಮಹಾನ್ ಶ್ರೇಯಸ್, ಸಚಿನ್ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.












Click it and Unblock the Notifications