ಕೆನ್ನೆಗೆ ಬಾರಿಸಿದ್ದಕ್ಕೆ ಹಾರಿಹೋಯ್ತು ಗೃಹಿಣಿಯ ಪ್ರಾಣಪಕ್ಷಿ
ಮೈಸೂರು, ಜೂನ್ 27 : ವ್ಯಕ್ತಿಯೋರ್ವ ಸೈಟ್ ತೋರಿಸಲು ಮಹಿಳೆಯನ್ನು ಕರೆದೊಯ್ದ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು, ವ್ಯಕ್ತಿ ಮಹಿಳೆಯ ಕಪಾಳಕ್ಕೆ ಬಾರಿಸಿದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.
ಘಟನೆ ಸಂಬಂಧ ಕೀರ್ತಿರಾಜ್ ಅಲಿಯಾಸ್ ರವಿ ಎಂಬಾತನನ್ನು ಬಂಧಿಸಲಾಗಿದೆ. ಸಿದ್ದಾರ್ಥ್ ಲೇ ಔಟ್ ನಿವಾಸಿ, ಬೆಂಗಳೂರಿನ ಬಿಬಿಎಂಪಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಉಮೇಶ ಎಂಬುವರ ಪತ್ನಿ ಮಹಾಲಕ್ಷ್ಮಿ(54) ಎಂಬಾಕೆಯೇ ಮೃತ ದುರ್ದೈವಿ.
ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರು ಮೇ ತಿಂಗಳಿನಲ್ಲಿ ಮನೆಯಿಂದ ಹೋದವರು ವಾಪಸ್ ಬಂದಿಲ್ಲ ಎಂದು ನಜರ್ ಬಾದ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಗೃಹಿಣಿ ಮಹಾಲಕ್ಷ್ಮಿ ಅವರಿಗೆ ಕೆ.ಆರ್.ನಗರ ನಿವಾಸಿ ಕೀರ್ತಿರಾಜ್ ಹಲವು ದಿನಗಳ ಹಿಂದೆ ಪರಿಚಯವಾಗಿದ್ದ. ಆತ ವಿಚ್ಛೇದಿತನಾಗಿದ್ದು, ರಿಯಲ್ ಎಸ್ಟೇಟ್ ನಡೆಸುತ್ತೇನೆ ಎಂದು ಹೇಳಿಕೊಂಡಿದ್ದ.
ವಿದ್ಯಾರಣ್ಯಪುರಂ ಬಳಿ ಜಾಗವೊಂದನ್ನು ತೋರಿಸಲು ಕರೆದೊಯ್ದ ಆತ ನನಗೆ ಏತಕ್ಕೆ ಕಮಿಶನ್ ನೀಡುತ್ತಿಲ್ಲ ಎಂದು ಖ್ಯಾತೆ ತೆಗೆದಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆ ವೇಳೆ ಆತ ಮಹಾಲಕ್ಷ್ಮಿಯ ಕಪಾಳಕ್ಕೆ ಬಾರಿಸಿದ್ದು, ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಬಳಿಕ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಬಳಿಯ ಪೊದೆಯೊಂದರಲ್ಲಿ ಬಿಸಾಡಿ ಹೋಗಿದ್ದ. ನಿನ್ನೆ ಆ ಸ್ಥಳದಲ್ಲಿ ಓಡಾಡುವಾಗ ದುರ್ವಾಸನೆ ಬರುತ್ತಿದ್ದು, ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಮೃತದೇಹ ಕಂಡು ಬಂದಿದೆ.
ಅಲ್ಲಿಯೇ ಅನುಮಾನಾಸ್ಪದವಾಗಿ ಓಡಾಡಿಕೊಂಡಿದ್ದ ಕೀರ್ತಿರಾಜ್ ನನ್ನು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಇದೀಗ ಕೀರ್ತಿರಾಜ್ ಪೊಲೀಸರ ವಶದಲ್ಲಿದ್ದು, ನಜರ್ ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications