ಮೈಸೂರು: ಈ ಬಂಡಿಯಲ್ಲಿ ನೀವು ಪ್ರಯಾಣ ಬೆಳೆಸಿದರೆ ರಾಜಮರ್ಯಾದೆ..! ಇಲ್ಲಿದೆ ವಿಶೇಷತೆ
ಮೈಸೂರು, ಅಕ್ಟೋಬರ್ 18: ಮೈಸೂರು ನಗರದಲ್ಲಿ ಟಕ..ಟಕ..ಸದ್ದು ಮಾಡುತ್ತಾ ಟಾಂಗಾ ಗಾಡಿಗಳು ಓಡಾಡುತ್ತವೆ. ಅವುಗಳ ನಡುವೆ ರಾಜಕುಮಾರಿಯಂತೆ ಸಾರೋಟುಗಳು ಅಲ್ಲಲ್ಲಿ ಕಾಣಸಿಗುತ್ತವೆ. ಅವು ಬರೀ ಆಕರ್ಷಣೆ ಅಲ್ಲ ಪ್ರವಾಸಿಗರನ್ನು ಕರೆದೊಯ್ಯುವ ಬರೀ ಗಾಡಿಯೂ ಅಲ್ಲ. ಅದು ಮೈಸೂರಿನ ಗತಕಾಲದ ರಾಜವೈಭವದ ಪ್ರತೀಕ. ಹೀಗಾಗಿ ಸಾರೋಟಿನಲ್ಲಿ ಕುಳಿತು ರಾಜಠೀವಿಯಲ್ಲಿ ನಗರ ಪ್ರದಕ್ಷಿಣೆ ಮಾಡುವುದೇ ಒಂಥರಾ ಮಜಾ.
ಮೈಸೂರಿನಲ್ಲಿ ಮಹಾರಾಜರ ಕಾಲದಲ್ಲಿ ಟಾಂಗಾ ಗಾಡಿಗಳೇ ಸಂಚಾರ ಸಾಧನಗಳಾಗಿದ್ದವು. ಸಾಮಾನ್ಯ ಜನರು ಟಾಂಗಾ ಗಾಡಿಗಳಲ್ಲಿ ತೆರಳುತ್ತಿದ್ದರೆ, ಮಹಾರಾಜರು ಸಾರೋಟಿನಲ್ಲಿ ರಾಜಗಾಂಭೀರ್ಯದಿಂದ ಪ್ರಯಾಣಿಸುತ್ತಿದ್ದರು ಅವತ್ತಿನ ಕಾಲದಲ್ಲಿ ರಾಜಮಹಾರಾಜರು ಸಾರೋಟಿನಲ್ಲಿ ಪ್ರಯಾಣಿಸಿದರೆ ಸಾಮಾನ್ಯ ಜನರು ಟಾಂಗಾ ಗಾಡಿಗಳಲ್ಲಿ ಓಡಾಡುತ್ತಿದ್ದರು.

ಮೈಸೂರಿನಲ್ಲಿ ವಾಹನ ಸೌಲಭ್ಯವಿಲ್ಲದ ದಿನಗಳಲ್ಲಿ ಎತ್ತಿನ ಬಂಡಿಯಲ್ಲಿಯೇ ಜನರು ಸಾಗುತ್ತಿದ್ದರಾದರೂ ಟಾಂಗಾ ಗಾಡಿಗಳು ಬಂದಿದ್ದು ಮಹಾರಾಜರ ಕಾಲದಲ್ಲಿ. ಅಂದರೆ 1897 ಎಂದು ಹೇಳಲಾಗಿದೆ. ಅಂದಿನ ದಿನಗಳಲ್ಲಿ ಟಾಂಗಾ ಗಾಡಿಗಳು ಹೆಚ್ಚಿನ ಜನಪ್ರಿಯತೆ ಪಡೆದಿದ್ದವಲ್ಲದೆ, ಟಾಂಗಾ ಗಾಡಿಗಳಲ್ಲಿ ತೆರಳುವುದೆಂದರೆ ಅದೊಂದು ಪ್ರತಿಷ್ಠೆಯ ಸಂಕೇತವಾಗಿತ್ತು. ಆಗ ಇದರ ಉಸ್ತುವಾರಿಯನ್ನು ಮುನ್ಸಿಪಾಲಿಟಿ ವಹಿಸಿಕೊಂಡಿತ್ತು. ದೂರದ ಊರುಗಳಿಗೆ ತೆರಳುವವರು ಮುನ್ಸಿಪಾಲಿಟಿಗೆ ಬಾಡಿಗೆ ನೀಡಿ ಟಾಂಗಾ ಗಾಡಿಯಲ್ಲಿ ಹೋಗಬೇಕಾಗಿತ್ತು.
ಆ ಕಾಲದ ಸಂಪರ್ಕ ಸಾಧನ
ಆಗ ಮೈಸೂರು ನಗರದಲ್ಲಿ ಸುಮಾರು ಆರುನೂರಕ್ಕೂ ಹೆಚ್ಚಿನ ಟಾಂಗಾ ಗಾಡಿಗಳು ಓಡಾಡುತ್ತಿದ್ದವಲ್ಲದೆ ಕೊಳ್ಳೇಗಾಲ, ಚಾಮರಾಜನಗರ, ನಂಜನಗೂಡು, ಕೆ.ಆರ್.ನಗರಗಳಲ್ಲಿಯೂ ಜನಪ್ರಿಯತೆಯನ್ನು ಗಳಿಸಿದ್ದವು. ಮುಂಬಯಿಯ ವಿಕ್ಟೋರಿಯ, ಮೈಸೂರಿನ ಮಹಾರಾಜರ ಷಾ ಪಂಸದ್ ಟಾಂಗಾಗಳು ಖ್ಯಾತಿ ಪಡೆದಿದ್ದವು. ಈ ಟಾಂಗಾ ಗಾಡಿಗಳಲ್ಲಿ ದೀಪದ ವ್ಯವಸ್ಥೆಯೂ ಇತ್ತು ಎನ್ನಲಾಗಿದೆ.
ದಸರಾ ಸಂದರ್ಭದಲ್ಲಿ ಟಾಂಗಾಗಾಡಿಗಳಿಗೂ ಗೌರವ ಸ್ಥಾನ ನೀಡಲಾಗುತ್ತಿತ್ತಲ್ಲದೆ, ದಸರಾ ಮೆರವಣಿಗೆಯಲ್ಲಿಯೂ ತಮ್ಮದೇ ಪೋಷಾಕು ಧರಿಸಿ ಮುನ್ನಡೆಯುತ್ತಿದ್ದರು. ಆದರೆ ವಾಹನಗಳ ಭರಾಟೆ ಹೆಚ್ಚಾಗುತ್ತಿದ್ದಂತೆಯೇ ಟಾಂಗಾ ಗಾಡಿಗಳಲ್ಲಿ ತೆರಳುವವರ ಸಂಖ್ಯೆ ಸಂಪೂರ್ಣ ಇಳಿಮುಖವಾಯಿತು. ಹೀಗಾಗಿ ಟಾಂಗಾಗಳು ಪ್ರವಾಸಿಗರನ್ನು ಹೊತ್ತು ಅರಮನೆಗೆ ಪ್ರದಕ್ಷಿಣೆ ಹಾಕಲಷ್ಟೆ ಸೀಮಿತವಾಗಿ ಬಿಟ್ಟವು.
ಇವರಿಗೆ ಪ್ರವಾಸಿಗರೇ ಅನ್ನದಾತರು
ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದ ಪರಿಣಾಮ ಎಲ್ಲರೂ ವಾಹನಗಳಲ್ಲಿಯೇ ಓಡಾಡತೊಡಗಿದರಿಂದ ಬೆಳಿಗ್ಗೆಯಿಂದ ಸಂಜೆ ತನಕ ಕಾದರೂ ಯಾರೊಬ್ಬ ಪ್ರಯಾಣಿಕನೂ ಬಾರದೆ ಬರಿಗೈಯಲ್ಲಿ ಮನೆಗೆ ತೆರಳುವ ಸ್ಥಿತಿ ನಿರ್ಮಾಣವಾಗತೊಡಗಿತು. ಇಂತಹ ಪರಿಸ್ಥಿತಿಯಲ್ಲಿ ಟಾಂಗಾ ಗಾಡಿ ಓಡಿಸಿ ಬದುಕಿನ ಬಂಡಿ ಉರುಳಿಸುವುದು ಅಸಾಧ್ಯವಾಗಿತ್ತು. ಇನ್ನೂ ಸಾರೋಟುಗಳನ್ನಿಟ್ಟುಕೊಂಡು ಜೀವನ ನಿರ್ವಹಿಸುವುದು ಸುಲಭದ ಮಾತಾಗಿರಲಿಲ್ಲ ಹಾಗಾಗಿ ಸಾರೊಟು ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ.

ಟಾಂಗಾ ಗಾಡಿ ಓಡಿಸಿ ಬದುಕು ಸಾಗಿಸುವುದು ಕಷ್ಟ ಎಂದರಿತ ಕೆಲವರು ಆಟೋ ಸೇರಿದಂತೆ ಇತರ ವಾಹನಗಳ ಚಾಲಕರಾದರೆ, ಮತ್ತೆ ಕೆಲವರು ಜೀವನೋಪಾಯಕ್ಕಾಗಿ ಪರ್ಯಾಯ ಉದ್ಯೋಗ ಕಂಡುಕೊಂಡರು. ಇದರಿಂದಾಗಿ ನಗರದಲ್ಲಿ ಟಾಂಗಾ ಗಾಡಿಗಳ ಸಂಖ್ಯೆ ಗಣನೀಯವಾಗಿ ಇಳಿಯತೊಡಗಿತು. ಇಂದು ಕೇವಲ ಪ್ರವಾಸಿಗರನ್ನು ಕರೆದೊಯ್ಯಲಷ್ಟೆ ಬಳಕೆಯಾಗುತ್ತಿರುವುದರಿಂದ ಅರಮನೆ, ಮೃಗಾಲಯ ಮುಂತಾದ ಕಡೆ ನಿಂತು ಪ್ರವಾಸಿಗರನ್ನು ಬಲತ್ಕಾರವಾಗಿ ತಮ್ಮ ಬಳಿಗೆ ಕರೆದು ನಗರಪ್ರದಕ್ಷಿಣೆ ನಡೆಸಬೇಕಾದ ಅನಿವಾರ್ಯತೆ ಟಾಂಗಾವಾಲಾಗಳದ್ದಾಗಿದೆ.
ಮೈಸೂರು ರಾಜವೈಭವದ ಸಂಕೇತ
ಇದೆಲ್ಲದರ ನಡುವೆ ಟಾಂಗಾ ಗಾಡಿಗಳು ಹಾಗೂ ಸಾರೋಟುಗಳು ರಾಜವೈಭವದ ಸಂಕೇತವಾಗಿರುವುದರಿಂದ ಮೈಸೂರಿನ ಪಾರಂಪರಿಕತೆಯನ್ನು ಹಾಗೆಯೇ ಉಳಿಸಿ ಬೆಳೆಸುವ ಉದ್ದೇಶದಿಂದ ಟಾಂಗಾಗಳನ್ನು ಹಾಗೆಯೇ ಉಳಿಸಿಕೊಳ್ಳುವ ಹಾಗೂ ಸಾರೋಟುಗಳನ್ನು ಪರಿಚಯಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. 2010ರ ದಸರಾ ಸಂದರ್ಭ ಮೈಸೂರಿಗೆ ಸಾರೋಟುಗಳು ಬಂದಿಳಿದಿದ್ದು, ಈಗ ನಗರದಲ್ಲಿ ಸುಮಾರು ಐದು ಸಾರೋಟುಗಳು ಓಡಾಡುತ್ತಿವೆ.
ಟಾಂಗಾಗಳಿಗೆ ಹೋಲಿಸಿದರೆ ಸಾರೋಟುಗಳು ಆಕರ್ಷಣೀಯವಾಗಿದೆ ಹಾಗೂ ಹೆಚ್ಚು ಜನರು ಕುಳಿತು ನೆಮ್ಮದಿಯಾಗಿ ಪ್ರಯಾಣಿಸಬಹುದು. ಇದರಿಂದಾಗಿ ಪ್ರವಾಸಿಗರು ಇದರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಸಾರೋಟುಗಳಿಗೆ ನಗರಪಾಲಿಕೆಯಿಂದ ಶೇಕಡ 50ರಷ್ಟು ಸಾಲ ಹಾಗೂ ಶೇಕಡ 50ರಷ್ಟು ಅನುದಾನ ನೀಡಲು 2010ರ ಪಾಲಿಕೆ ಬಜೆಟ್‌ನಲ್ಲಿ ಘೋಷಿಸಿತ್ತು.
ಸಾರೋಟುಗಳ ನಿರ್ವಹಣೆ ಸುಲಭವಲ್ಲ
ಈ ಯೋಜನೆಯಲ್ಲಿ 22 ಸಾರೋಟುಗಳನ್ನು ಕೊಡುವ ಬಗ್ಗೆಯೂ ಘೋಷಣೆ ಮಾಡಲಾಗಿತ್ತು ಆದರೆ ಒಂದು ಸಾರೋಟಿಗೆ ಸುಮಾರು ಒಂದೂವರೆ ಲಕ್ಷ ರೂ ತಗಲುವುದರಿಂದ ಮತ್ತು ಕುದುರೆಯೊಂದಕ್ಕೆ ದಿನಕ್ಕೆ 300 ರಿಂದ 500 ರೂಪಾಯಿ ಖರ್ಚು ತಗಲುವುದರಿಂದ ಈ ಸಾರೋಟುಗಳ ನಿರ್ವಹಣೆ ಅಷ್ಟು ಸುಲಭವಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಆದರೆ ಮೈಸೂರು ಪ್ರವಾಸೋದ್ಯಮ ಕೇಂದ್ರವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದರಿಂದ ಸಾರೋಟಿನಲ್ಲಿ ಕುಳಿತು ನಗರ ಪ್ರದಕ್ಷಿಣೆ ಮಾಡುತ್ತಾರೆ.
ಅದರಲ್ಲೂ ದಸರಾದ ಈ ಸಂದರ್ಭದಲ್ಲಿ ಸಾರೋಟಿನಲ್ಲಿ ಕುಳಿತು ರಾತ್ರಿವೇಳೆ ಬೆಳಗುವ ವಿದ್ಯುದ್ದೀಪವನ್ನು ವೀಕ್ಷಿಸುವುದು ಮರೆಯಲಾರದ ಅನುಭವವಾಗಿದೆ. ಅರಮನೆ ಮುಂಭಾಗದ ರಸ್ತೆಯಲ್ಲಿ ಅರಮನೆಗೊಂದು ಸುತ್ತು ಹೊಡೆಸುವ ಕಾಯಕವನ್ನು ಪ್ರತಿನಿತ್ಯ ಸಾರೋಟು ವಾಲಾಗಳು ಮಾಡುತ್ತಾ ಬರುತ್ತಿದ್ದಾರೆ. ಸಾರೋಟು ನಗರದಲ್ಲಿ ಅಡ್ಡಾಡುವಾಗಲೆಲ್ಲ ಮೈಸೂರಿನ ರಾಜವೈಭವ ಮರುಕಳಿಸಿದ ಅನುಭವವಾಗುತ್ತದೆ.












Click it and Unblock the Notifications