ಚಾಮುಂಡಿ ಬೆಟ್ಟದ ನಂದಿ ಮೂರ್ತಿಗೆ ಮಹಾಮಸ್ತಕಾಭಿಷೇಕ : ವೈಭವ ಕಣ್ತುಂಬಿಕೊಂಡ ಭಕ್ತರು
ಮೈಸೂರು, ನವೆಂಬರ್. 13:ಕಾರ್ತಿಕ ಮಾಸದ ಮೊದಲನೇ ಸೋಮವಾರದ ಪ್ರಯುಕ್ತ ಮೆಟ್ಟಿಲು ಹತ್ತುವ ಬಳಗದ ವತಿಯಿಂದ ನಂದಿ ವಿಗ್ರಹಕ್ಕೆ 8ನೇ ವರ್ಷದ ಮಹಾಮಸ್ತಕಾಭಿಷೇಕ ವಿಜೃಂಭಣೆಯಿಂದ ನೆರವೇರಿತು.
ಚಾಮುಂಡಿಬೆಟ್ಟದಲ್ಲಿರುವ 15 ಅಡಿ ಎತ್ತರದ ನಂದಿ ವಿಗ್ರಹಕ್ಕೆ ಕುಂಕುಮ, ಗಂಧ, ಅರಿಶಿನ, ಬಿಲ್ವಪತ್ರೆ, ಹಾಲು, ಮೊಸರು, ಎಳನೀರು ಹಾಗೂ ನಿಂಬೆ ರಸ ಸೇರಿದಂತೆ 47 ಬಗೆಯ ವಿವಿಧ ದ್ರವ್ಯಗಳಿಂದ ಹಾಗೂ 500 ಲೀ. ಹಾಲು, 200 ಲೀ. ಮೊಸರು, 100 ಲೀ. ಜೇನು ತುಪ್ಪಗಳಿಂದ ಅಭಿಷೇಕ ಮಾಡಲಾಯಿತು.

ಹಳದಿ, ಕೆಂಪು, ಬಿಳಿ ಸೇರಿದಂತೆ ವಿವಿಧ ಬಣ್ಣಗಳಲ್ಲಿ ನಂದಿ ವಿಗ್ರಹ ಕಂಗೊಳಿಸಿತು. ನೂರಾರು ಪ್ರವಾಸಿಗರು ಹಾಗೂ ಭಕ್ತರು ನಂದಿ ಮೂರ್ತಿಗೆ ನೆರವೇರಿಸಲಾಗುತ್ತಿದ್ದ ಮಸ್ತಕಾಭಿಷೇಕವನ್ನು ಕಣ್ತುಂಬಿಕೊಂಡರು. ಆರು ಮಂದಿ ಅರ್ಚಕರು ಮಂತ್ರಘೋಷ ಪಠಿಸುವುದರೊಂದಿಗೆ, ಅವರು ನೀಡಿದ ಸೂಚನೆಯ ಮೇರೆಗೆ ಬೆಟ್ಟ ಹತ್ತುವ ಬಳಗದ ಸುಮಾರು 50 ಸದಸ್ಯರು ನಂದಿ ಮೂರ್ತಿಗೆ ಅಭಿಷೇಕ ನೆರವೇರಿಸಿದರು.

ಬೆಟ್ಟ ಹತ್ತುವ ಬಳಗದ ಸದಸ್ಯ ಮಹದೇವು ಈ ಸಂದರ್ಭದಲ್ಲಿ ಮಾತನಾಡಿ, ಪ್ರತಿ ಶುಕ್ರವಾರ ಚಾಮುಂಡಿ ಬೆಟ್ಟ ಹತ್ತುವ ಭಕ್ತರು ಬೆಟ್ಟ ಹತ್ತುವ ಬಳಗ' ರಚಿಸಿಕೊಂಡಿದ್ದೇವೆ. ಕಳೆದ 8 ವರ್ಷಗಳಿಂದ ನಂದಿ ಮೂರ್ತಿಗೆ ಮಸ್ತಕಾಭಿಷೇಕ ನೆರವೇರಿಸಿ ಕೊಂಡು ಬಂದಿದ್ದೇವೆ. ಯಾರಿಂದಲೂ ದೇಣಿಗೆ ಸಂಗ್ರಹಿಸದೆ ಬಳಗದ ಸದಸ್ಯರೇ ಹಣವನ್ನು ಸಂಗ್ರಹಿಸಿ ಈ ಧಾರ್ಮಿಕ ಕಾರ್ಯ ನೆರವೇರಿಸಿಕೊಂಡು ಬರುತ್ತಿದ್ದೇವೆ ಎಂದರು.

ಅರ್ಚಕ ಮಲ್ಲಿಕಾರ್ಜುನ ಮಾತನಾಡಿ, ಲೋಕ ಕಲ್ಯಾಣಕ್ಕಾಗಿ ನಂದಿ ಮೂರ್ತಿಗೆ ಕಾರ್ತಿಕ ಮಾಸದಲ್ಲಿ ಮಸ್ತಕಾಭಿಷೇಕ ನೆರವೇರಿಸಲಾಗುತ್ತಿದೆ. ಬೆಟ್ಟ ಹತ್ತುವ ಬಳಗ ಸದಸ್ಯರು ನಡೆಸುತ್ತಿರುವ ಈ ಮಸ್ತಕಾಭಿಷೇಕ ಸ್ತುತ್ಯಾರ್ಹ ಕಾರ್ಯವಾಗಿದೆ ಎಂದು ತಿಳಿಸಿದರು.












Click it and Unblock the Notifications