ಪ್ರತಾಪ್ ಸಿಂಹ ವಿರುದ್ಧ ಮೈಸೂರಲ್ಲಿ ದಾಖಲಾಯ್ತು ದೂರು
ಮೈಸೂರು, ಜನವರಿ 29 : ಹುಣಸೂರಿನಲ್ಲಿ ಕೆಲ ದಿನಗಳ ಹಿಂದೆ ನಡೆದ ಹನುಮಜಯಂತಿ ಮೆರವಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ದೂರು ದಾಖಲಿಸುವಂತೆ ಸೂಚನೆ ನೀಡಿರುವುದಾಗಿ ಜಿಲ್ಲಾಧಿಕಾರಿ ಡಿ.ರಂದೀಪ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆರವಣಿಗೆ ವೇಳೆ ಸಂಸದ ಪ್ರತಾಪ್ ಸಿಂಹ ವಿಶೇಷ ವಾಹನ ಬಳಸಿದ್ದರು. ಮೆರವಣಿಗೆ ಅನುಮತಿ ನೀಡುವ ವೇಳೆ ವಿಶೇಷ ವಾಹನ ಬಳಸುವಂತಿಲ್ಲ ಎಂದು ನಿಬಂಧನೆ ಹಾಕಲಾಗಿತ್ತು. ಆದರೆ ನಿಬಂಧನೆ ಉಲ್ಲಂಘಿಸಿ ತೆರೆದ ವಾಹನದಲ್ಲಿ ಮೆರವಣಿಗೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಕೇಸು ದಾಖಲಿಸಲು ಸೂಚಿಸಲಾಗಿದೆ
ಹನುಮಜಯಂತಿಯನ್ನ ವಿಶೇಷ ಪ್ರಕರಣವಾಗಿ ಪರಿಗಣಿಸಿಲಾಗಿತ್ತು. ಇನ್ಯಾವುದೇ ಧರ್ಮದ ಜಯಂತಿಗೆ ಈ ರೀತಿಯ ವ್ಯವಸ್ಥೆ ಇರೋದಿಲ್ಲ. ಸಮಸ್ಯೆಯಾಗಿದ್ದಕ್ಕೆ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿತ್ತು. ಇತರೆ ಜಯಂತಿಗಳು ಶಾಂತಿಯುತವಾಗಿ ನಡೆಯಲಿವೆ ಅಂತ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ಬಜೆಟ್ ನಲ್ಲಿ ಅನುದಾನ ಇಡಿ ಎಂದು ಮೈಸೂರು ಜಿಲ್ಲಾಧಿಕಾರಿ ರಂದೀಪ್ ಮುಖ್ಯಮಂತ್ರಿಗಳಿಗೆ ವಿಶೇಷ ಪ್ರಸ್ತಾವನೆ ನೀಡಿದ್ದಾರೆ.
ಪ್ರತಿ ವರ್ಷ ಅನುದಾನ ಬಿಡುಗಡೆ ವೇಳೆ ಗೊಂದಲ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸದರಿ ಅನುದಾನವನ್ನ ಬಜೆಟ್ ನಲ್ಲೆ ಮೀಸಲಿಡಿ. ಜೊತೆಗೆ ಕಳೆದ ವರ್ಷದ ಅನುದಾನದ ಬಾಕಿ ಸಹ ಬಿಡುಗಡೆ ಮಾಡಿ. ಕಳೆದ ಬಾರಿ ದಸರಾದ 10.45 ಕೋಟಿ ಅನುದಾನ ಬಾಕಿ ಇದೆ. ಕಳೆದ ಬಾರಿಯ ಬಾಕಿ ಹಣ ಹಾಗೂ ಈ ಬಾರಿಯ ಮುಂಗಡ ಅನುದಾನವನ್ನ ಬಜೆಟ್ ನಲ್ಲಿ ಮೀಸಲಿಡಿ ಎಂದು ಡಿ.ರಂದೀಪ್ ಸಿಎಂಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.












Click it and Unblock the Notifications