100 ಅಡಿ ಗಡಿ ಸಮೀಪಿಸಿದ ಕೆಆರ್‌ಎಸ್ ಜಲಾಶಯ: ರೈತರಲ್ಲಿ ಸಂತಸ
ಮೈಸೂರು, ಜುಲೈ 24: ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಗರಿಷ್ಠ ಮಟ್ಟ 124.80 ಅಡಿ ಇರುವ ಜಲಾಶಯದ ಮಟ್ಟ ಸೋಮವಾರ 97 ಅಡಿಗೆ ಏರಿಕೆಯಾಗಿದೆ.
ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಾರಂಗಿ ಜಲಾಶಯ ಭರ್ತಿಯಾಗಿದ್ದು, ನದಿಗೆ ನೀರು ಹರಿಸಲಾಗಿದೆ. 2859 ಅಡಿ ಗರಿಷ್ಠ ಮಟ್ಟದ ಹಾರಂಗಿಯಲ್ಲಿ 2855.01 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಭಾನುವಾರ ರಾತ್ರಿ ವೇಳೆಗೆ ಜಲಾಶಯಕ್ಕೆ 23,720 ಕ್ಯೂಸೆಕ್‌ನಷ್ಟು ಒಳಹರಿವಿದ್ದು, 35,000 ಕ್ಯೂಸೆಕ್ ಹೊರಬಿಡಲಾಗಿದೆ. ಇದರಿಂದ ಮಂಡ್ಯ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯಲ್ಲಿ ಒಣಗುತ್ತಿರುವ ಬೆಳೆಗೆ ನೀರು ಸಿಗಲಿದ್ದು, ರೈತರು ಸಂತಸಗೊಂಡಿದ್ದಾರೆ.

ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆಯ ಅಬ್ಬರ
ಕಾವೇರಿ ಉಗಮಸ್ಥಾನ ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಭಾಗಮಂಡಲ ತ್ರಿವೇಣಿ ಸಂಗಮ ಭರ್ತಿಯಾಗಿದೆ. ತ್ರಿವೇಣಿ ಸಂಗಮದ ಸ್ನಾನಘಟ್ಟ ಮುಳುಗಡೆಯಾಗಿದ್ದು, ಮಡಿಕೇರಿ-ಭಾಗಮಂಡಲ, ನಾಪೋಕ್ಲು -ಭಾಗಮಂಡಲ ರಸ್ತೆಯ ಮೇಲೆ ಪ್ರವಾಹ ಹರಿಯುತ್ತಿದೆ. ಈ ಭಾಗದ ಗದ್ದೆಗಳೆಲ್ಲಾ ಜಲಾವೃತವಾಗಿವೆ.
2,279 ಅಡಿ ತಲುಪಿದ ಕಬಿನಿ
ಕಬಿನಿ ಜಲಾಶಯಕ್ಕೆ ಒಳ ಹರಿವು 20,640 ಕ್ಯೂಸೆಕ್‌ಗೆ ಏರಿದ್ದು, ಜಲಾಶಯದ ಮಟ್ಟ 2279.25 ಅಡಿ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿ ಆಗಿದ್ದು, ಜಲಾಶಯ ಸಂಪೂರ್ಣ ಭರ್ತಿಯಾಗಲು ಇನ್ನು ಕೇವಲ 4.5 ಅಡಿ ನೀರು ಬರಬೇಕಿದೆ. ಕಬಿನಿ ಜಲಾಶಯ ವ್ಯಾಪ್ತಿಯ ಕೇರಳ ರಾಜ್ಯದ ವಯನಾಡು ಜಿಲ್ಲೆ ಮತ್ತು ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹಾಗೂ ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಲಾಶಯ ಭರ್ತಿಯಾಗುತ್ತಿದೆ.
ಸೋಮವಾರ ಬೆಳಿಗ್ಗೆ 10 ಗಂಟೆಗೆ ಜಲಾಶಯದ 4 ಕ್ರಸ್ಟಗೇಟ್ ಮುಖಾಂತರ 5 ಸಾವಿರ ಕ್ಯೂಸೆಕ್‌ನ್ನು ನದಿಗೆ ಬಿಡಲಾಗಿದೆ. ಜಲಾಶಯದ ಸಂಗ್ರಹಣಾ ಸಾಮರ್ಥ್ಯ 19.52 ಟಿ.ಎಂ.ಸಿ. ಆಗಿದ್ದು, ಸದ್ಯಕ್ಕೆ ಜಲಾಶಯದಲ್ಲಿ 15 ಟಿ.ಎಂ.ಸಿ. ನೀರು ಇದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 2283.50 ಅಡಿ ನೀರಿದ್ದು, ಜಲಾಶಯಕ್ಕೆ 11,125 ಕ್ಯೂಸೆಕ್ ಒಳ ಹರಿವು ಇತ್ತು. ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿತ್ತು.
ಭೋರ್ಗರೆದ ಧನುಷ್ಕೋಟಿ ಜಲಪಾತ
ಕೊಡಗು ಜಿಲ್ಲೆಯಲ್ಲಿ ಮಳೆಯಾಗುತ್ತಿರುವು ದರಿಂದ ಧನುಷ್ಕೋಟಿಯ ಜಲಪಾತದಲ್ಲಿ ನೀರಿನ ಭೋರ್ಗರೆತ ಜೋರಾಗಿದೆ. ಮಡಿಕೇರಿಯ ಕಾವೇರಿ ಕಣಿವೆಯಲ್ಲಿ ನದಿಯ ನೀರಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಧನುಷ್ಕೋಟಿ ಜಲಪಾತಕ್ಕೆ ಜೀವ ಕಳೆ ಬಂದಿದೆ. ರಾಜ್ಯದ ಪ್ರಮುಖ 11 ಜಲಪಾತಗಳಲ್ಲೊಂದಾಗಿರುವ ಈ ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತ ಜಿಲ್ಲೆಗೆ ಮೆರುಗು. ಜಿಲ್ಲೆಯ ಏಕೈಕ ಜಲಪಾತವಾಗಿರುವುದು ಹೆಗ್ಗಳಿಕೆ. ಬಂಡೆಗಳ ಕೊರೆದು ಕಲಾಕೃತಿ ನಿರ್ಮಿಸಿಕೊಂಡು ಸುಮಾರು 27 ಮೀಟರ್ ಎತ್ತರದ ಬಂಡೆಗಳ ಮೇಲಿಂದ ಧುಮ್ಮಿಕ್ಕಿ ಭೋರ್ಗರೆಯುತ್ತ ಹಾಲ್ನೊರೆಯಂತೆ ಹರಿಯುವ ಕಾವೇರಿ ನದಿಯ ನಯನ ಮನಮೋಹಕ ಜಲಧಾರೆ ಪ್ರವಾಸಿಗರನ್ನು ಸೆಳೆಯುತ್ತಿದೆ.












Click it and Unblock the Notifications