ಮೈಸೂರು: ಗ್ರಾಮ ಪಂಚಾಯತಿ ಮೇಲ್ದರ್ಜೆಗೇರಿಸಿದ ಪರಿಣಾಮ ಕೈತಪ್ಪಿದ ಮತದಾನದ ಹಕ್ಕು
ಮೈಸೂರು, ಡಿಸೆಂಬರ್ 9: ಭಾರತದಲ್ಲಿ ಮತದಾನ ಪ್ರತಿಯೊಬ್ಬರ ಹಕ್ಕು. ದೇಶವನ್ನಾಳುವ ಜನಪ್ರತಿನಿಧಿನಗಳನ್ನು ಆಯ್ಕೆ ಮಾಡುವ ಅಧಿಕಾರ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇದೆ. ಆದರೆ ಈ ಬಾರಿಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಮೈಸೂರಿನ ಕೆಲವು ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಸಾಂವಿಧಾನಿಕವಾಗಿ ದೊರೆತಿರುವ ಮತದಾನದ ಹಕ್ಕು ಕೈತಪ್ಪಿದೆ.
ಇದೇ ಡಿ.10ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಮತದಾನಕ್ಕೆ ಮೈಸೂರು ಜಿಲ್ಲಾಡಳಿತದಿಂದ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೈಸೂರು- ಚಾಮರಾಜನಗರ ಜಿಲ್ಲೆಯಿಂದ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಜೊತೆಗೆ ಪಕ್ಷೇತರ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಾಗಿ ಕಣಕ್ಕಿಳಿದಿದ್ದಾರೆ.
ಎರಡು ಜಿಲ್ಲೆಗಳಿಂದ ಒಟ್ಟು 6396 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ, ಮೇಲ್ಮನೆಗೆ ಇಬ್ಬರು ಸದಸ್ಯರನ್ನು ಆಯ್ಕೆ ಮಾಡುವ ಅವಕಾಶ ಪಡೆದಿದ್ದಾರೆ.

ಈ ಪೈಕಿ ಮೈಸೂರು ಜಿಲ್ಲೆಯಲ್ಲಿ ಒಟ್ಟು 252 ಗ್ರಾಮ ಪಂಚಾಯಿತಿಗಳಿದ್ದು, ಮೈಸೂರಿನ 23, ಎಚ್.ಡಿ. ಕೋಟೆ 26, ಹುಣಸೂರು 41, ಕೆ.ಆರ್. ನಗರ 34, ನಂಜನಗೂಡು 45, ಪಿರಿಯಾಪಟ್ಟಣ 34, ಸರಗೂರು 13 ಹಾಗೂ ತಿ. ನರಸೀಪುರದ 36 ಗ್ರಾಮ ಪಂಚಾಯಿತಿಗಳನ್ನೊಳಗೊಂಡಿವೆ. ಇದರೊಂದಿಗೆ 9 ಪಟ್ಟಣ ಪಂಚಾಯಿತಿಗಳಿಂದ ಆಯ್ಕೆಯಾಗಿರುವ ಸದಸ್ಯರು ಸೇರಿದಂತೆ ಒಟ್ಟು 4226 ಸದಸ್ಯರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.
ಆದರೆ, ರಾಜಕೀಯ ಮೇಲಾಟದಿಂದ ಮೈಸೂರು ಜಿಲ್ಲೆಯ 9 ಗ್ರಾಮ ಪಂಚಾಯತಿಗಳ ಸದಸ್ಯರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಮೈಸೂರು ಜಿಲ್ಲೆಯ 5 ಗ್ರಾಮ ಪಂಚಾಯಿತಿಗಳಾದ ರಮ್ಮನಹಳ್ಳಿ, ಬೀರಿಹುಂಡಿ, ಹೂಟಗಳ್ಳಿ, ಹಿನಕಲ್, ಬೋಗಾದಿ, ಇಲವಾಲ, ಹಂಚ್ಯಾ, ಹೊಸಹುಂಡಿ, ಆಲನಹಳ್ಳಿ, ಗ್ರಾಮ ಪಂಚಾಯಿತಿಗಳನ್ನು ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಿರುವ ಹಿನ್ನೆಲೆ ಈ ಗ್ರಾಮ ಪಂಚಾಯಿತಿಗಳಿಂದ ಆಯ್ಕೆಯಾಗಿದ್ದ ಸದಸ್ಯರುಗಳು ಈ ಬಾರಿ ಮತದಾನದಿಂದ ವಂಚಿತರಾಗಿದ್ದಾರೆ.
ಚುನಾವಣೆಗೆ ಸಕಲ ಸಿದ್ಧತೆ:
ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಶುಕ್ರವಾರ ನಡೆಯಲಿರುವ ಮತದಾನಕ್ಕೆ ಮೈಸೂರು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತದಾನದ ಹಿನ್ನೆಲೆ ಮೈಸೂರು ಜಿಲ್ಲೆಯಲ್ಲಿ ಒಟ್ಟು 393 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದ್ದು, ಮೈಸೂರು ಜಿಲ್ಲೆಯಲ್ಲಿ 259 ಹಾಗೂ ಚಾಮರಾಜನಗರ- 134 ಮತ ಕೇಂದ್ರಗಳನ್ನು ತೆರೆಯಲಾಗಿದೆ.

ಇನ್ನು ಮತದಾನ ಕಾರ್ಯಕ್ಕೆ 1809 ಸಿಬ್ಬಂದಿ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ನಂಜನಗೂಡು, ಟಿ. ನರಸೀಪುರ, ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ. ಕೋಟೆ, ಸರಗೂರು, ಕೆ.ಆರ್. ನಗರ, ಮೈಸೂರು ಸೇರಿ ಆಯಾ ತಾಲೂಕು ಕಚೇರಿಗಳಲ್ಲಿ ಮಾಸ್ಟರಿಂಗ್ ಕಾರ್ಯ ನಡೆದಿದೆ.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಈಗಾಗಲೇ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಮದ್ಯ ಮಾರಾಟ, ಸಂತೆ- ಜಾತ್ರೆಗೆ ನಿರ್ಬಂಧ ವಿಧಿಸಲಾಗಿದೆ. ಮೈಸೂರಿನ ಪಡುವಾರಹಳ್ಳಿಯ ಮಹಾರಾಣಿ ಕಾಲೇಜಿನಲ್ಲಿ ಸ್ಟ್ರಾಂಗ್ ರೂಂ ನಿರ್ಮಾಣ ಮಾಡಲಾಗಿದೆ.












Click it and Unblock the Notifications