KSRTC Employees: ಬಾಕಿ ಉಳಿದಿರುವ ವೇತನ ಹೆಚ್ಚಳದ ಹಣ ಪಾವತಿಗೆ ನೌಕರರ ಆಗ್ರಹ
ಮೈಸೂರು, ಜುಲೈ 24: ಕರ್ನಾಟಕ ಸಾರಿಗೆ ಇಲಾಖೆ ಕಳೆದೊಂದು ವರ್ಷದಿಂದ ವಿವಿಧ ಪ್ರಶಸ್ತಿಗಳಿಗೆ ಭಾಜನವಾಗಿದೆ. ಹೊಸ ಬಸ್‌ಗಳನ್ನು ಖರೀದಿ ಮಾಡಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತಹ ಉಪಕ್ರಮ ಪರಿಚಯಿಸುತ್ತಿದೆ. ಈ ಮಧ್ಯೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ನೌಕರರ ವೇತನವನ್ನು ಬಾಕಿ ಉಳಿಸಿಕೊಂಡಿದೆ. ಇದನ್ನು ಕೂಡಲೇ ನೀಡಬೇಕು ಹಾಗೂ ಇತರ ಬೇಡಿಕೆ ಈಡೇರಿಸಬೇಕು ಎಂಬ ಆಗ್ರಹ ಹೆಚ್ಚಾಗಿದೆ.
ವೇತನ ಹೆಚ್ಚಳ, ಬಾಕಿ ವೇತನ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಮೈಸೂರಿನಲ್ಲಿ KSRTC ನೌಕರರ ಸಂಘದ ಗೌರವಾಧ್ಯಕ್ಷ ಡಿ.ಎಸ್.ಸುರೇಶ್ ಮನವಿ ಮಾಡಿಕೊಂಡರು.

ಮೈಸೂರು ನಗರದಲ್ಲಿ ಇತ್ತೀಚೆಗೆ ನಡೆದ ಕೆಎಸ್‌ಆರ್‌ಟಿಸಿ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಹಿಂದಿದ್ದ ಬಿಜೆಪಿ ಸರ್ಕಾರವು 2020 ಜನವರಿಯಲ್ಲಿ ನೌಕರರ ಮನವಿಗೆ ಸ್ಪಂದಿಸಿತ್ತು. ಅದು ನೌಕರರ ಶೇ. 15 ರಷ್ಟು ಸಂಬಳವನ್ನು ಹೆಚ್ಚಿಸಿತಲ್ಲದೇ ಒಂದು ವರ್ಷದ ಬಾಕಿ ವೇತನ ನೀಡಿತ್ತು ಎಂದರು.
39 ತಿಂಗಳ ವೇತನ ಪಾವತಿ ಆಗಿಲ್ಲ
ಸದ್ಯ ಕೆಎಸ್‌ಆರ್‌ಟಿಸಿ ನೌಕರರ ಬಾಕಿ ಉಳಿದಿರುವ 39 ತಿಂಗಳ ಹೆಚ್ಚಿಸಿದ ವೇತನ ಇನ್ನೂ ಪಾವತಿ ಆಗಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಮ್ಮ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಬೇಕು ಎಂದು ಸುರೇಶ್ ಹೇಳಿದರು.
ಇದೇ ವರ್ಷ 2024ರ ಜನವರಿ 1ರಿಂದ ಜಾರಿಯಾಗುವ ಒಪ್ಪಂದದಡಿ ನಮ್ಮ ವೇತನ ಹೆಚ್ಚಳ ಮಾಡುವ ಬದಲಾಗಿ ಕೆಎಸ್‌ಆರ್‌ಟಿಸಿ ನೌಕರರು ಸರ್ಕಾರಿ ನೌಕರರಂತೆ ಸಮಾನ ವೇತನದ ಪ್ರಯೋಜನವನ್ನು ಪಡೆಯಬೇಕು. ಈ ನಿಟ್ಟಿನಲ್ಲಿ ಏಳನೇ ವೇತನ ಆಯೋಗದದ ಶಿಫಾರಸುಗಳನ್ನು (7th Pay Commission) ಸರ್ಕಾರದ ತನ್ನ ಘೋಷಣೆ, ಭರವಸೆಯನ್ನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.

ವೇತನ ತಾರತಮ್ಯಕ್ಕೆ ಬೇಸರ
ಇನ್ನು ಮುಖ್ಯವಾಗಿ ರಾಜ್ಯ ಸರ್ಕಾರವು ನೌಕರರು ಮತ್ತು ಅಧಿಕಾರಿಗಳ ನಡುವಿನ ಅಂತರ ತಗ್ಗಿಸಲು KSRTC ನೌಕರರ ಸಂಘಗಳಿಗೆ ಚುನಾವಣೆ ನಡೆಸಲು ಅನುಮೋದನೆ ನೀಡಬೇಕು. ಕೆಲವು ವಿಚಾರಗಳಲ್ಲಿ ಅಧಿಕಾರಿಗಳು ಮನಸ್ಸಿಗೆ ಬಂದಂಗೆ ನಿರ್ಧಾರ ಕೈಗೊಳ್ಳುತ್ತಿದ್ದು, ವೇತನ ತಾರತಮ್ಯಕ್ಕೆ ಕಾರಣವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಅಂದಿನ KSRTC ನೌಕರರ ಸಂಘದ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಮೋಹನ್, ಕಾರ್ಯಾಧ್ಯಕ್ಷ ಸಿ.ಡಿ. ವಿಶ್ವನಾಥ್, ಕಾರ್ಮಿಕ ಸಂಘದ ಮುಖಂಡರಾದ ಪ್ರವೀಣ್ ಕುಮಾರ್, ಮಂಜೇಗೌಡ, ಸಿದ್ದೇಶ್, ನಾಗರಾಜು, ರವಿಕುಮಾರ್, ಜಗದೀಶ್ ಗುಳೇದ, ಎಲ್.ಎಸ್. ವಿಜಯ್ ಮತ್ತಿತರರು ಪಾಲ್ಗೊಂಡಿದ್ದರು.
ರಾಜ್ಯ ಸಾರಿಗೆ ಇಲಾಖೆ ಹಾಗೂ ಸಾರಿಗೆ ಸಚಿವರು ಕಳೆದೊಂದು ವರ್ಷದಲ್ಲಿ ಸಾರಿಗೆ ಇಲಾಖೆ ಮಾಡಿದ ಸಾಧನೆಗಳ ಪೈಕಿ ಮಾತನಾಡುತ್ತಿದೆ. ಈ ಮಧ್ಯೆ ನಿಗಮಗಳಲ್ಲಿ ದುಡಿಯುತ್ತಿರುವ ನೌಕರರ ಬೇಡಿಕೆಗಳನ್ನು ಸಹ ಈಡೇರಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.












Click it and Unblock the Notifications