ಮೈಸೂರು-ಕೊಡಗು ಕ್ಷೇತ್ರದಿಂದ 25 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ
ಮೈಸೂರು, ಮಾರ್ಚ್ 28:ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಬಿಎಸ್ಪಿ ಸೇರಿದಂತೆ 25 ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತಗೊಂಡಿವೆ. ಜಿಲ್ಲಾ ಚುನಾವಣಾಧಿಕಾರಿ ಅಭಿರಾಂ ಜಿ.ಶಂಕರ್ ನೇತೃತ್ವದಲ್ಲಿ ನಾಮಪತ್ರಗಳನ್ನು ಪರಿಶೀಲಿಸಲಾಯಿತು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನೋಂದಾಯಿತ ಕೆಲ ಪಕ್ಷಗಳು ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು ಐವರ ಉಮೇದುವಾರಿಕೆಯನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ. ಕ್ಷೇತ್ರದಲ್ಲಿ ಸ್ಪರ್ಧೆ ಕೋರಿ ಒಟ್ಟು 30 ಅಭ್ಯರ್ಥಿಗಳು 50 ಸೆಟ್‌ಗಳಲ್ಲಿ ಉಮೇದುವಾರಿಕೆ ಸಲ್ಲಿಸಿದ್ದರು.
ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ, ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ತಲಾ ನಾಲ್ಕು ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಿದ್ದರು. ಅವರ ನಾಮಪತ್ರಗಳು ಪುರಸ್ಕೃತಗೊಂಡಿವೆ. ಜೆ.ಜೆ.ಆನಂದ್ ಎಂಬುವವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ, ಬಿ ಫಾರಂ ಸಲ್ಲಿಸಿರಲಿಲ್ಲ. ಅವರು ಪಕ್ಷೇತರ ಅಭ್ಯರ್ಥಿಯಾಗಿಯೂ ನಾಮಪತ್ರ ನೀಡಿದ್ದರು.

ಬಿಎಸ್ಪಿ ಪಕ್ಷದಿಂದ ಡಾ.ಬಿ.ಚಂದ್ರು ಹಾಗೂ ಎಂ.ಸಿದ್ದರಾಜು ಉಮೇದುವಾರಿಕೆ ಸಲ್ಲಿಸಿದ್ದರು. ಚಂದ್ರು ಅವರಿಗೆ 'ಬಿ' ಫಾರಂ ಲಭಿಸಿದ್ದರಿಂದ ಸಿಂಧುವಾಗಿದೆ. ಇವರಲ್ಲಿ ಒಟ್ಟು 7 ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರ 18 ಅಭ್ಯರ್ಥಿಗಳು ಇದ್ದಾರೆ. ಮೂವರು ಮಹಿಳೆಯರು ಇದರಲ್ಲಿ ಸೇರಿದ್ದಾರೆ.
ಪರಿಶೀಲನೆ ವೇಳೆ ಅಭ್ಯರ್ಥಿಗಳು ಹಾಗೂ ಅವರ ಕಡೆಯ ಏಜೆಂಟರು ಹಾಜರಿದ್ದರು. ಈ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಯಿತು. ನಾಮಪತ್ರ ಹಿಂಡೆಯಲು ಮಾರ್ಚ್ 29 ಕೊನೆಯ ದಿನವಾಗಿದೆ. ಏ. 18ರಂದು ಮತದಾನ ನಡೆಯಲಿದೆ. 2014ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಒಟ್ಟು 22 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ ಏಳು ಮಂದಿ ಪಕ್ಷೇತರ ಅಭ್ಯರ್ಥಿಗಳು ವಾಪಸ್ ಪಡೆದಿದ್ದರು.
ಮೈಸೂರು -ಕೊಡಗು ಲೋಕಸಭಾ ಕ್ಷೇತ್ರಕ್ಕೆ ಐಐಎಸ್ ಅಧಿಕಾರಿ ಕುಲದೀಪ್ ನಾರಾಯಣ ಅವರನ್ನು ಪ್ರಧಾನ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರನ್ನು ಅಕ್ಸೆಸಿಬಿಲಿಟಿ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.
ವೀಕ್ಷಕರು ಮಾರ್ಚ್ 28 ಹಾಗೂ 29 ರಂದು ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.











Click it and Unblock the Notifications