Chamundi Hill: ಚಾಮುಂಡೇಶ್ವರಿ ಭಕ್ತರಿಗಾಗಿ ಸಿದ್ಧವಾಗಿದೆ 25 ಸಾವಿರ ಮೈಸೂರು ಪಾಕ್
ಮೈಸೂರು: ಪ್ರತಿ ವರ್ಷದಂತೆ ಈ ಬಾರಿಯೂ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಜುಲೈ 12ರ ಮೊದಲ ಆಷಾಢ ಶುಕ್ರವಾರದಂದು ಭಕ್ತರಿಗೆ ವಿತರಿಸಲು 25 ಸಾವಿರ ಮೈಸೂರು ಪಾಕ್ ತಯಾರಿಸಲಾಗುತ್ತಿದೆ.
ಜುಲೈ 12ರ ಮೊದಲ ಆಷಾಢ ಶುಕ್ರವಾರದಂದು ಬೆಳಗ್ಗೆ 6 ರಿಂದ 10 ಗಂಟೆವರೆಗೆ ಉಪಾಹಾರ ಇರಲಿದ್ದು, ಪೊಂಗಲ್, ಇಡ್ಲಿ, ಚಟ್ನಿ ನೀಡಲಾಗುತ್ತದೆ. 11 ಗಂಟೆಗೆ ಊಟ ಬಡಿಸಲು ಆರಂಭಿಸಲಿದ್ದು, ಬಿಸಿ ಬೇಳೆ ಬಾತ್, ಅನ್ನ, ಸಾಂಬಾರ್, ಪಲ್ಯ, ಕೋಸಂಬರಿ, ಲಾಡು, ಮೈಸೂರು ಪಾಕ್ ನೀಡಲಾಗುವುದು ಎಂದು ಸಮಿತಿ ಮುಖ್ಯಸ್ಥ ನಾಗೇಶ್ ಮತ್ತು ಎನ್.ಅರುಣ್ ಕುಮಾರ್ ಜೈನ್ ತಿಳಿಸಿದ್ದಾರೆ.

ಸಮಿತಿ ವತಿಯಿಂದ 25 ಸಾವಿರ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿದೆ. ಅಲ್ಲದೆ, ಈ ಬಾರಿ ಊಟಕ್ಕೆ ಮೈಸೂರು ಪಾಕ್ ನೀಡಲಾಗುತ್ತಿದ್ದು, ನಗರದ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ತಯಾರಿ ಕಾರ್ಯ ನಡೆಯುತ್ತಿದೆ. 40 ಬಾಣಸಿಗರು 500 ಕೆ ಜಿ ಕಡ್ಲೆ ಹಿಟ್ಟು, 500 ಕೆಜಿ ಸಕ್ಕರೆ, ನಂದಿನಿ ತುಪ್ಪ, ಎಣ್ಣೆ ಇನ್ನಿತರ ಸಾಮಗ್ರಿ ಬಳಸಿ ಮೈಸೂರು ಪಾಕ್ ತಯಾರಿಯಲ್ಲಿ ತೊಡಗಿದ್ದಾರೆ.
ನಮ್ಮ ಸೇವಾ ಸಂಸ್ಥೆ ವತಿಯಿಂದ ಕಳೆದ 18 ವರ್ಷಗಳಿಂದ ಅನ್ನದಾಸೋಹ ಮಾಡಲಾಗುತ್ತಿದೆ. ಪ್ರತಿ ವರ್ಷ ಮೊದಲ ಆಷಾಢ ಶುಕ್ರವಾರ ಪ್ರಸಾದ ವಿನಿಮಯ ಮಾಡುತ್ತಿದ್ದೇವೆ. ನಮ್ಮ ಸೇವಾ ಸಮಿತಿಯಲ್ಲಿ 130 ಜನ ಇದ್ದೇವೆ. ನಾವೇ ಚಂದಾ ಹಾಕಿ ಹಣ ಸಂಗ್ರಹಿಸಿ ಪ್ರತಿ ವರ್ಷ ಪ್ರಸಾದ ವಿನಿಯೋಗ ಮಾಡುವ ಕೆಲಸ ಮಾಡುತ್ತಾ ಬಂದಿದ್ದೇವೆ. ತಾಯಿ ಚಾಮುಂಡೇಶ್ವರಿ ಮತ್ತಷ್ಟು ಶಕ್ತಿ ಕೊಟ್ಟರೆ ಆಷಾಢ ಮಾಸ ಮುಗಿಯುವವರೆಗೂ ಸೇವೆ ಮಾಡುವ ಹಂಬಲವಿದೆ ಎಂದು ತಿಳಿಸಿದ್ದಾರೆ.
ಪ್ಲಾಸ್ಟಿಕ್ ಮುಕ್ತ ಆಷಾಢ
ಈ ಬಾರಿ ಚಾಮುಂಡಿಬೆಟ್ಟದಲ್ಲಿ ಪ್ಲಾಸ್ಟಿಕ್ ಮುಕ್ತ ಆಷಾಢ ಆಚರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು, ಇದಕ್ಕಾಗಿ 200ಕ್ಕೂ ಹೆಚ್ಚು ಗ್ರೀನ್ ವಾರಿಯರ್ಸ್‌ಗಳನ್ನು ನೇಮಿಸಿದೆ. ಬೆಟ್ಟದ ಸುತ್ತಮುತ್ತ ಎಲ್ಲಿಯೂ ಪ್ಲಾಸ್ಟಿಕ್ ಬೀಳದಂತೆ ಈ ಗ್ರೀನ್ಸ್ ವಾರಿಯರ್ಸ್‌ಗಳು ನಿಗಾ ವಹಿಸಲಿದ್ದಾರೆ.
ರಾಜ್ಯದ ಪ್ರಮುಖ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕೇಂದ್ರವಾದ ಚಾಮುಂಡಿಬೆಟ್ಟಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅದರಲ್ಲೂ ಆಷಾಢ ಮಾಸದಲ್ಲಿ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಾರೆ.
ಆಗಮಿಸುವ ಭಕ್ತರು ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಕವರ್‌ಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದರು. ಇದರಿಂದ ಬೆಟ್ಟದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ರಾಶಿಯೇ ಸೃಷ್ಟಿಯಾಗುತ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಈ ಬಾರಿ ಗ್ರೀನ್ ವಾರಿಯರ್ಸ್‌ಗಳನ್ನು ಸ್ವಚ್ಛತೆಗೆ ನೇಮಿಸಿಕೊಂಡು ಪ್ಲಾಸ್ಟಿಕ್ ಮುಕ್ತ ಆಷಾಢ ಆಚರಿಸಲು ತೀರ್ಮಾನಿಸಿದೆ.
ಏನಿದು ಗ್ರೀನ್ ವಾರಿಯರ್ಸ್?
ಮೈಸೂರಿನಲ್ಲಿ ಸ್ವಚ್ಛತೆ ಪರ ಹಾಗೂ ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ಧ ಸಾಕಷ್ಟು ಸಂಘ, ಸಂಸ್ಥೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿವೆ. ಹಾಗಾಗಿ, ಜಿಲ್ಲಾಡಳಿತ ಇಂತಹ ಸಂಘ, ಸಂಸ್ಥೆಗಳ ಸದಸ್ಯರುಗಳನ್ನೇ ಬಳಸಿಕೊಂಡು ಪ್ಲಾಸ್ಟಿಕ್ ಮುಕ್ತ ಆಷಾಢ ನಡೆಸಲು ತೀರ್ಮಾನಿಸಿದೆ. ನಗರದ 200ಕ್ಕೂ ಹೆಚ್ಚು ಸ್ವಯಂಸೇವಕರನ್ನು 'ಗ್ರೀನ್ ವಾರಿಯರ್ಸ್' ಎಂದು ನೇಮಕ ಮಾಡಿಕೊಳ್ಳಲಾಗಿದೆ. ಇವರು ಭಕ್ತರು ಬಸ್ ಹತ್ತುವುದರಿಂದ ಹಿಡಿದು ಬೆಟ್ಟಕ್ಕೆ ಹೋಗಿ ವಾಪಸ್ ಬರುವವರೆಗೂ ಪ್ಲಾಸ್ಟಿಕ್ ಬೀಳದಂತೆ ಜಾಗೃತಿ ಉಂಟು ಮಾಡಲಿದ್ದಾರೆ. ಇವರಿಗೆ ಪೊಲೀಸರು ಕೂಡ ಜೊತೆ ನೀಡುತ್ತಾರೆ.












Click it and Unblock the Notifications