ಮೈಸೂರು ಡಿಸಿಯಾಗಿದ್ದ ಶಿಖಾ ನಿಂದನೆ ಪ್ರಕರಣ: ಆ.13ಕ್ಕೆ ವಿಚಾರಣೆ
ಮೈಸೂರು, ಜೂನ್ 15: ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಶಿಖಾ ಅವರನ್ನು ಕಾಂಗ್ರೆಸ್ ಮುಖಂಡ ಮರೀಗೌಡ ಸಾರ್ವಜನಿಕವಾಗಿ ನಿಂದಿಸಿದ್ದ ಪ್ರಕರಣದ ವಿಚಾರಣೆಯನ್ನು ಮೂರನೇ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆಗಸ್ಟ್ 13ಕ್ಕೆ ಮುಂದೂಡಿದೆ. ಅಲ್ಲದೇ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಹಿರಿಯ ವಕೀಲರಾದ ಜಿ.ವಿ. ರಾಮಮೂರ್ತಿ ಹಾಗೂ ಆರ್ ಗಿರಿಜೇಶ್ ಅವರನ್ನು ನ್ಯಾಯಾಲಯ ನೇಮಕ ಮಾಡಿದೆ.
ಘಟನೆಗೆ ಸಂಬಂಧಿಸಿದ ಸಿಡಿ ಮತ್ತಿತರ ದಾಖಲೆಗಳನ್ನು ಹಾಜರಿಪಡಿಸುವಂತೆ ಪೊಲೀಸರಿಗೆ ನ್ಯಾಯಾಲಯ ನಿರ್ದೇಶಿಸಿದೆ. ಪ್ರಸ್ತುತ ಬೆಂಗಳೂರಿನ ಬೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಖಾ ಅವರು ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ 2016ರ ಜುಲೈ 3ರಂದು ಮರೀಗೌಡ ಅವರ ಬೆಂಬಲಿಗ ಮಂಜುನಾಥ್ ಸೇರಿದಂತೆ ಕೆಲವರು ನಗರದ ಸರ್ಕಾರಿ ಅತಿಥಿ ಗೃಹದ ಬಳಿ ಶಿಖಾ ಅವರನ್ನು ಕರ್ತವ್ಯದ ವೇಳೆ ನಿಂದಿಸಿದ್ದರು ಎನ್ನಲಾಗಿದೆ.
ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವೊಂದರ ನಿಮಿತ್ತ ಸರ್ಕಾರಿ ಅತಿಥಿಗೃಹಕ್ಕೆ ಆಗಮಿಸಿದ್ದರು. ಈ ವೇಳೆ ಮರಿಗೌಡ ಮತ್ತು ಅವರ ಬೆಂಬಲಿಗರು ಕೂಡ ಅತಿಥಿಗೃಹ ಪ್ರವೇಶಿಸಲು ಪ್ರಯತ್ನಿಸಿದ್ದ ಸಂದರ್ಭ ಕರ್ತವ್ಯದಲ್ಲಿದ್ದ ಶಿಖಾ ಮರೀಗೌಡರನ್ನು ತಡೆದಿದ್ದಾರೆ. ನಂತರ ಮರೀಗೌಡ ಮತ್ತಿತರರು ಮುನ್ನುಗ್ಗಲು ಯತ್ನಿಸಿದ್ದಲ್ಲದೆ ಶಿಖಾ ಅವರನ್ನು ಏಕವಚನದಿಂದ ನಿಂದಿಸಿದ್ದರು ಎಂದು ಹೇಳಲಾಗಿದೆ. ಈ ಘಟನೆಯ ಹಿನ್ನೆಲೆ ಶಿಖಾ ಅವರು ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಮರೀಗೌಡ ಮತ್ತವರ ಬೆಂಬಲಿಗರ ವಿರುದ್ಧ ದೂರು ದಾಖಲಿಸಿದ್ದರು. ದೇವರಾಜ ವಿಭಾಗದ ಎಸಿಪಿ ರಾಜಶೇಖರ್ ಅವರ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸಿ ಮರಿಗೌಡ ಸೇರಿದಂತೆ ಮತ್ತೆ ಮೂವರ ವಿರುದ್ಧ 45 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತ್ತು.

ಬಂಧನ ಭೀತಿಯಿಂದ ನಾಪತ್ತೆಯಾಗಿದ್ದ ಮರೀಗೌಡ, 2016ರ ಆಗಸ್ಟ್ 3ರಂದು ನಜರ್ ಬಾದ್ ಪೊಲೀಸರಿಗೆ ಶರಣಾಗಿದ್ದರು. ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು. ಹಾಗಾಗಿ 22 ದಿನಗಳ ಕಾಲ ನ್ಯಾಯಾಂಗ ಕಸ್ಟಡಿಯಲ್ಲಿದ್ದರು. ನಂತರ ಅವರಿಗೆ ಜಾಮೀನು ಲಭಿಸಿತ್ತು.











Click it and Unblock the Notifications