ಮೈಸೂರಿನ ಕೆ ಆರ್ ನಗರದಲ್ಲಿ ಸಿಡಿಲಿಗೆ ಮತ್ತೊಬ್ಬ ಬಲಿ
ಮೈಸೂರು, ಮೇ 10 : ಜಿಲ್ಲೆಯ ಕೆ.ಆರ್.ನಗರದಲ್ಲಿ ಮಂಗಳವಾರ ಮಹಿಳೆಯೊಬ್ಬರು ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದರು. ಈ ಘಟನೆ ಇನ್ನೂ ಹಸಿಯಾಗಿರುವಾಗಲೇ ಬುಧವಾರ ಯುವಕನೊಬ್ಬ ಸಿಡಿಲಿಗೆ ಬಲಿಯಾಗಿದ್ದಾನೆ.
ಕೆ.ಆರ್.ನಗರ ತಾಲೂಕಿನ ಗುಳುವಿನ ಅತ್ತಿಗುಪ್ಪೆ ಗ್ರಾಮದ ನಿವಾಸಿ ಶಿವರಾಮೇಗೌಡರ ಪುತ್ರ ಸಂದೀಪ್ (19) ಸಿಡಿಲಿಗೆ ಬಲಿಯಾದ ದುರ್ದೈವಿ. [ಮೈಸೂರು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಸಿಡಿಲಿಗೆ ಬಲಿ]

ಈತ ತಮ್ಮ ಜಮೀನಿನಲ್ಲಿ ಬಿತ್ತನೆ ಕೆಲಸ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಮಳೆಯೊಂದಿಗೆ ಸಿಡಿಲು ಅಪ್ಪಳಿಸಿದ್ದರಿಂದ ಸಂದೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ವಿಷಯ ತಿಳಿದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಸೂತಕದ ವಾತಾವರಣ ಸೃಷ್ಟಿಯಾಗಿದೆ. ಮೇಲಿಂದ ಮೇಲೆ ಸಿಡಿಲು ಬಡಿದು ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.
ಇದುವರೆಗೆ ಇಷ್ಟೊಂದು ಮಂದಿ ಸಿಡಿಲು ಬಡಿದು ಸಾವನ್ನಪ್ಪಿರಲಿಲ್ಲ. ಅಪರೂಪಕ್ಕೊಮ್ಮೆ ಘಟನೆ ನಡೆಯುತ್ತಿತ್ತು. ಆದರೆ, ಕಳೆದೊಂದು ತಿಂಗಳ ಅವಧಿಯಲ್ಲಿ ಸಿಡಿಲು ಬಡಿದು ಹಲವರು ಸಾವನ್ನಪ್ಪಿದ್ದಾರೆ. ಇದರಿಂದ ಜಮೀನಿಗೆ ತೆರಳಲು ಭಯವಾಗುತ್ತಿದೆ ಎಂದು ರೈತರು ಆತಂಕ ಪಡುತ್ತಿದ್ದಾರೆ.












Click it and Unblock the Notifications