ಸರಳ ದಸರಾ; ಮೃಗಾಲಯದ ಆದಾಯ ಭಾರಿ ಕುಸಿತ!
ಮೈಸೂರು, ಅಕ್ಟೋಬರ್ 30 : ಕೋವಿಡ್ ಕಾರಣದಿಂದಾಗಿ ಈ ಬಾರಿಯ ಮೈಸೂರು ದಸರಾವನ್ನು ಸರಳವಾಗಿ ಆಚರಣೆ ಮಾಡಲಾಯಿತು. ಪ್ರವಾಸಿಗರು ಕಡಿಮೆ ಸಂಖ್ಯೆಯಲ್ಲಿ ನಗರಕ್ಕೆ ಭೇಟಿ ನೀಡಿದರು. ಇದರಿಂದಾಗಿ ಮೃಗಾಲಯದ ಆದಾಯವೂ ಕುಸಿತವಾಗಿದೆ.
ದಸರಾ ಸಮಯದಲ್ಲಿ ಮೈಸೂರಿನಲ್ಲಿ ಜನಜಂಗುಳಿ ಕಂಡು ಬರುತ್ತಿತ್ತು. ಆದರೆ, ಈ ಬಾರಿ ದಸರಾ ಸಮಯದಲ್ಲಿ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ್ದು 20 ಸಾವಿರಕ್ಕೂ ಅಧಿಕ ಪ್ರವಾಸಿಗರು ಮಾತ್ರ.
10 ದಿನಗಳ ಅವಧಿಯಲ್ಲಿ 20 ಸಾವಿರಕ್ಕೂ ಅಧಿಕ ಪ್ರವಾಸಿಗರು ಮೃಗಾಲಯಕ್ಕೆ ಆಗಮಿಸಿದ್ದು, 19.56 ಲಕ್ಷ ಆದಾಯ ಬಂದಿದೆ. ಕಳೆದ ಬಾರಿಯ ದಸರಾ ಸಂದರ್ಭಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ.

ಮೃಗಾಲಯಕ್ಕೆ 2017ರಲ್ಲಿ 1.23 ಲಕ್ಷ, 2018ರಲ್ಲಿ 1.53 ಲಕ್ಷ ಮತ್ತು 2019ರಲ್ಲಿ 1.65 ಲಕ್ಷ ಜನರು ಭೇಟಿ ನೀಡಿದ್ದರು. ಮೃಗಾಲಯ ಮಾತ್ರವಲ್ಲ ಅರಮನೆಗೆ ಸಹ ಭೇಟಿ ನೀಡಿದ ಜನರ ಸಂಖ್ಯೆ ಕಡಿಮೆ ಇದೆ. ಖಾಸಗಿ ದರ್ಬಾರ್ ವೀಕ್ಷಣೆಗೆ ಈ ಬಾರಿ ಅವಕಾಶವನ್ನು ನೀಡಿರಲಿಲ್ಲ.
ಅರಮನೆಗೆ ಭೇಟಿ : ಅಕ್ಟೋಬರ್ 17ರಿಂದ 25ರ ತನಕ ಮೈಸೂರು ಅರಮನೆಗೆ 9,516 ಪ್ರವಾಸಿಗರು ಭೇಟಿ ನೀಡಿದ್ದಾರೆ. ಅಕ್ಟೋಬರ್ 27ರಂದು 2,758 ಜನ, ಅ. 28ರಂದು 2606 ಜನರು ಭೇಟಿ ಕೊಟ್ಟಿದ್ದಾರೆ.
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಸರಳವಾಗಿ ದಸರಾ ಆಚರಣೆ ಮಾಡಲಾಗಿತ್ತು. ಜಂಬೂ ಸವಾರಿ ಸಹ ಅರಮನೆ ಆವರಣಕ್ಕೆ ಸೀಮಿತವಾಗಿತ್ತು. ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ನೋಡಲು ಈ ಬಾರಿ ಜನರಿಗೆ ಅವಕಾಶವನ್ನು ನೀಡಿರಲಿಲ್ಲ.











Click it and Unblock the Notifications