ಮೈಸೂರಿನಲ್ಲಿ ತಂಗಿದ್ದ ಜರ್ಮನ್ನರು ದೇಶಕ್ಕೆ ವಾಪಸ್...
ಮೈಸೂರು, ಮಾರ್ಚ್ 27: ನಗರದಲ್ಲಿ ಕೊರೊನಾ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ತಂಗಿದ್ದ ಜರ್ಮನ್ ಪ್ರಜೆಗಳನ್ನು ವಾಪಸ್ ಕಳುಹಿಸಲಾಗುತ್ತಿದೆ.
ಯೋಗ ಕಲಿಕೆ ಸೇರಿದಂತೆ ಹಲವು ಕಾರಣಗಳಿಗೆ ಮೈಸೂರಿನಲ್ಲಿ ಹದಿನೆಂಟು ಮಂದಿ ಜರ್ಮನ್ ಪ್ರಜೆಗಳು ನೆಲೆಸಿದ್ದರು. ಇದೀಗ ಜರ್ಮನ್ ದೇಶದ ರಾಯಭಾರ ಕಚೇರಿಯಿಂದ ಮನವಿ ಬಂದ ಮೇರೆಗೆ ಇವರನ್ನು ವಾಪಸ್ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ.
ಕೇಂದ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಜರ್ಮನಿ ಸರ್ಕಾರ ಮನವಿ ಮಾಡಿಕೊಂಡಿದ್ದು, ಅವರನ್ನು ವಾಪಸ್ ಕಳುಹಿಸಲಾಗುತ್ತಿದೆ. ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ಜರ್ಮನ್ ಪ್ರಜೆಗಳ ಆರೋಗ್ಯ ತಪಾಸಣೆ ನಡೆಯುತ್ತಿದ್ದು, ಪ್ರಯಾಣ ಮಾಡಲು ಯೋಗ್ಯ ಇರುವವರು ಮಾತ್ರ ವಿದೇಶಕ್ಕೆ ವಾಪಸ್ ಹೋಗಲಿದ್ದಾರೆ.

ಆರೋಗ್ಯ ತಪಾಸಣೆ ನಂತರ ಪ್ರವಾಸೋದ್ಯಮ ಇಲಾಖೆ ವಿಶೇಷ ಬಸ್ ನಲ್ಲಿ ಇವರನ್ನು ಬೆಂಗಳೂರಿಗೆ ಕಳುಹಿಸಿಕೊಡಲಿದೆ. ನಾಳೆ ವಿಶೇಷ ವಿಮಾನದ ಮೂಲಕ ಜರ್ಮನ್‌ಗೆ ತೆರಳಲಿದ್ದಾರೆ.












Click it and Unblock the Notifications