ದಸರಾ: ಕೆಎಸ್ ಆರ್ಟಿಸಿಯಿಂದ 175 ಹೆಚ್ಚುವರಿ ಬಸ್ ಸಂಚಾರ
ಮೈಸೂರು, ಸೆಪ್ಟೆಂಬರ್ 2: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದ್ದು, ಪ್ರವಾಸಿಗರಿಗೆ ಅನುಕೂಲವಾಗುವಂತೆ ಈ ಬಾರಿ ದಸರೆಗೆ ನಗರ ಹಾಗೂ ಗ್ರಾಮಾಂತರ ಘಟಕದಿಂದ 175 ಬಸ್ ಗಳನ್ನು ಹೆಚ್ಚುವರಿಯಾಗಿ ಬಿಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮುಂದಾಗಿದೆ.
ದಸರಾ ಮಹೋತ್ಸವ ಆರಂಭವಾಗುವ ಸೆಪ್ಟೆಂಬರ್ 21 ರಿಂದ 30 ರವರೆಗೆ ಗ್ರಾಮಾಂತರ ಘಟಕದಿಂದ 125 ಹಾಗೂ ನಗರದ ಘಟಕದಿಂದ 50 ಬಸ್ ಗಳನ್ನು ಹೆಚ್ಚುವರಿಯಾಗಿ ಕೆಎಸ್ಆರ್ ಟಿಸಿ ಬಿಡಲಿದೆ. ಅಕ್ಟೋಬರ್ 5 ರವರೆಗೆ ನಿರಂತರ ರಜಾ ಇರುವುದರಿಂದ ಹೆಚ್ಚುವರಿ ಬಸ್ ಸಂಚಾರವನ್ನು ವಿಸ್ತರಿಸಲು ಸಹ ನಿರ್ಧರಿಸಿದೆ. ನಗರದಲ್ಲಿ ಈಗಾಗಲೇ 428 ಸಿಟಿ ಬಸ್ ಗಳು ಸಂಚರಿಸುತ್ತಿದ್ದು, ದಸರಾ ವಿಶೇಷವಾಗಿ 50 ಬಸ್ ಗಳು ಹೆಚ್ಚುವರಿಯಾಗಿ ಸಂಚರಿಸಲಿವೆ.

ಮೈಸೂರಿನಿಂದ ಹಾಸನ, ಬೆಂಗಳೂರು, ಮಂಗಳೂರು, ಧರ್ಮಸ್ಥಳ, ತುಮಕೂರು, ಚಿತ್ರದುರ್ಗ, ಚಾಮರಾಜನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಇದರ ಜತೆಗೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ ದೇವದರ್ಶಿನಿ, ಗಿರಿದರ್ಶಿನಿ, ಹಾಗೂ ಜಲದರ್ಶಿನಿ ಬಸ್ ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲು ಮುಂದಾಗಿದೆ.












Click it and Unblock the Notifications