Santro Ravi : ಸ್ಯಾಂಟ್ರೊ ರವಿಗೆ 14 ದಿನ ನ್ಯಾಯಾಂಗ ಬಂಧನ, ಜೈಲಿಗೆ ಶಿಫ್ಟ್
ಮೈಸೂರು, ಜನವರಿ 15; ಕೆ. ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಆತನನ್ನು ಜೈಲಿಗೆ ಕಳಿಸಿದರು.
ಗುಜರಾತ್‌ಮೈಸೂನಲ್ಲಿ ಬಂಧಿತರಾದ ಸ್ಯಾಂಟ್ರೊ ರವಿ, ಪ್ರೇಮ್‌ಜಿ ಮತ್ತು ಶ್ರುತೇಶ್‌ನನ್ನು ಶನಿವಾರ ಮುಂಜಾನೆ ಮೈಸೂರು ನಗರಕ್ಕೆ ಕರೆತಂದು ವಿಚಾರಣೆ ನಡೆಸಲಾಯಿತು. ಎಲ್ಲಾ ಆರೋಪಿಗಳನ್ನು 6ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಎರಡನೇ ಶನಿವಾರ ನ್ಯಾಯಾಲಯದ ಕಲಾಪ ಇಲ್ಲದ ಕಾರಣ ನ್ಯಾಯಾಧೀಶರ ನಿವಾಸಕ್ಕೆ ಕರೆದುಕೊಂಡು ಹೋಗಲಾಯಿತು.
ಬಿಗಿ ಭದ್ರತೆಯಲ್ಲಿ ಪೊಲೀಸರು ವಾಲ್ಮೀಕಿ ನಗರದ ರಸ್ತೆಯಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಆರೋಪಿಗಳನ್ನು ಕರೆದುಕೊಂಡು ಬಂದರು. ನ್ಯಾಯಾಧೀಶರು ಎಲ್ಲಾ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಈ ಹಿನ್ನಲೆಯಲ್ಲಿ ಪ್ರಕರಣದ ತನಿಖಾಧಿಕಾರಿ ಬಿ. ಎಸ್. ರವಿಶಂಕರ್ ನೇತೃತ್ವದಲ್ಲಿ ಆರೋಪಿಗಳನ್ನು ಜೈಲಿಗೆ ಕಳಿಸಲಾಯಿತು. ಗುಜರಾತ್‌ನಿಂದ ಆರೋಪಿಗಳನ್ನು ಕರೆತಂದ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು.
ಬಳಿಕ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ವಿಜಯನಗರ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಸಲಾಗಿದೆ. ಬಳಿಕ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.
ಯಾವ ಕೇಸ್ ದಾಖಲಾಗಿದೆ?; ಸ್ಯಾಂಟ್ರೊ ರವಿ ವಿರುದ್ಧ ಮೈಸೂರಿನ ವಿಜಯನಗರ ಠಾಣೆಯಲ್ಲಿ ಪರಿಶಿಷ್ಟ ಮಹಿಳೆ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಗೂಂಡಾಗಿರಿ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಸ್ಯಾಂಟ್ರೊ ರವಿ 11 ದಿನಗಳ ಬಳಿಕ ಗುಜರಾತ್‌ನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.

ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಿಕ್ಕಿಬಿದ್ದಿದ್ದ ಸ್ಯಾಂಟ್ರೊ ರವಿಯನ್ನು ಮೈಸೂರಿಗೆ ಕರೆತಂದ ಪೊಲೀಸರು ವಿಚಾರಣೆ ನಡೆಸಿದ್ದರು. ಬಂಧನದಿಂದ ತಪ್ಪಿಸಿಕೊಳ್ಳಲು ಸ್ಯಾಂಟ್ರೊ ರವಿ ನಿರೀಕ್ಷಣಾ ಜಾಮೀನು ಕೋರಿ ಸಹ ಅರ್ಜಿ ಸಲ್ಲಿಕೆ ಮಾಡಿದ್ದ, ಗುರುವಾರ ಮೈಸೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಜನವರಿ 17ಕ್ಕೆ ಮುಂದೂಡಿತ್ತು.
ಠಾಣೆಯಲ್ಲೇ ವಿಚಾರಣೆ; ಸ್ಯಾಂಟ್ರೊ ರವಿಯನ್ನು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ಶನಿವಾರ ಮುಂಜಾನೆ ಕರೆತರಲಾಯಿತು. ಠಾಣೆಯಲ್ಲೇ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ವಿಚಾರಣೆ ನಡೆಸಿದರು. ಆರಂಭಿಕ ವಿಚಾರಣೆ ನಂತರ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು.
ಮಾಧ್ಯಮಗಳ ಜೊತೆ ಮಾತನಾಡಿದ ಪೊಲೀಸ್ ಆಯುಕ್ತರು, "ಬಂಧನವಾದ 24 ಗಂಟೆ ಒಳಗೆ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಿದೆ. ಹಾಗಾಗಿ ಸ್ಯಾಂಟ್ರೊ ರವಿಯಿಂದ ಪ್ರಾಥಮಿಕ ಮಾಹಿತಿ ಪಡೆಯುತ್ತಿದ್ದೇವೆ. ಸದ್ಯ ಈ ವೇಳೆ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ" ಎಂದರು.
"ಸ್ಯಾಂಟ್ರೊ ರವಿ 11 ದಿನಗಳ ಕಾಲ ಎಲ್ಲೆಲ್ಲಿ ಓಡಾಡಿಕೊಂಡಿದ್ದ, ಆತನಿಗೆ ಯಾರು ಸಹಾಯ ಮಾಡಿದ್ದರು ಎಂಬುದರ ಬಗ್ಗೆ ಆರಂಭಿಕ ಮಾಹಿತಿ ಪಡೆಯುತ್ತಿದ್ದೇವೆ. ವಿಚಾರಣೆಗೆ ಸ್ಪಂದಿಸುತ್ತಿದ್ದಾನೆ. ಆತ ಡಯಾಬಿಟಿಕ್ ಇದ್ದು, ಗಂಟೆಗೊಮ್ಮೆ ಇನ್ಸುಲಿನ್ ಪಡೆದುಕೊಳ್ಳುತ್ತಿದ್ದಾನೆ. ಡಯಾಬಿಟಿಸ್ ಬಿಟ್ಟರೆ ಅಂತಹ ಆರೋಗ್ಯ ಸಮಸ್ಯೆ ಇದ್ಧಂತೆ ಕಾಣುತ್ತಿಲ್ಲ" ಎಂದು ಹೇಳಿದರು.
ಪೊಲೀಸ್ ವಶಕ್ಕೆ ಸಾಧ್ಯತೆ; ಸ್ಯಾಂಟ್ರೊ ರವಿ ಮತ್ತು ಇತರ ಆರೋಪಿಗಳ ಹೆಚ್ಚಿನ ವಿಚಾರಣೆಯನ್ನು ಮೈಸೂರಿನ ಪೊಲೀಸರು ನಡೆಸಬೇಕಿದೆ. ಆದ್ದರಿಂದ ಸೋಮವಾರ ಪೊಲೀಸರು ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿ ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡುವ ಸಾಧ್ಯತೆ ಇದೆ.
ಸ್ಯಾಂಟ್ರೊ ರವಿ ಪ್ರಭಾವಿಯಾಗಿದ್ದು, ಪೊಲೀಸ್ ಇಲಾಖೆಯ ವರ್ಗಾವಣೆಯಲ್ಲಿಯೂ ತೊಡಗಿದ್ದ. ಉನ್ನತ ಅಧಿಕಾರಿಗಳ ಜೊತೆ ಸಂಪರ್ಕ ಹೊಂದಿದ್ದ. ಸ್ಯಾಂಟ್ರೊ ರವಿ ವಿಚಾರ ಕರ್ನಾಟಕ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.












Click it and Unblock the Notifications