'ಬಿಜೆಪಿ ಹಾಗೂ ಆಪ್ ನನ್ನನ್ನು ಬಳಸಿಕೊಂಡು ಅಧಿಕಾರಕ್ಕೆ ಏರಿದವರು'
ಅಹ್ಮದ್ ನಗರ್ (ಮಹಾರಾಷ್ಟ್ರ), ಫೆಬ್ರವರಿ 4: 2014ರ ಲೋಕಸಭೆ ಚುನಾವಣೆ ಗೆಲ್ಲಲು ಭಾರತೀಯ ಜನತಾ ಪಕ್ಷ ನನ್ನನ್ನು ಬಳಸಿಕೊಂಡಿತು ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ. ಹೌದು. 2014ರಲ್ಲಿ ಬಿಜೆಪಿ ನನ್ನನ್ನು ಬಳಸಿಕೊಂಡಿತು. ಲೋಕಪಾಲ ಜಾರಿಗೆ ಆಗ್ರಹಿಸಿ ನಾನು ಆರಂಭಿಸಿದ ಹೋರಾಟವನ್ನು ಬಳಸಿಕೊಂಡು, ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಿತು ಎಂದಿದ್ದಾರೆ.
ಅವರ ಬಗ್ಗೆ ಈಗ ಎಲ್ಲ ವಿಶ್ವಾಸವನ್ನೂ ನಾನು ಕಳೆದುಕೊಂಡಿದ್ದೇನೆ ಎಂದು ರಾಲೇಗಣ್ ಸಿದ್ಧಿಯಲ್ಲಿ ಹೇಳಿದ ಅಣ್ಣಾ ಹಜಾರೆ, ನರೇಂದ್ರ ಮೋದಿ ನೇತೃತ್ವದ ಸರಕಾರ ದೇಶದ ಜನರನ್ನು ಹಾದಿ ತಪ್ಪಿಸುತ್ತಿದೆ. ದೇಶವನ್ನು ಸರ್ವಾಧಿಕಾರದ ಬಗ್ಗೆ ಕರೆದೊಯ್ಯುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಕಳೆದ ನಾಲ್ಕು ವರ್ಷದಿಂದ ಮಹಾರಾಷ್ಟ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ 'ಸುಳ್ಳು' ಹೇಳುತ್ತಲೇ ಇದೆ. ಎಷ್ಟು ಕಾಲ ಈ ಸುಳ್ಳು ಮುಂದುವರಿಯುತ್ತದೆ? ದೇಶದ ಜನರು ಈಗಾಗಲೇ ಸರಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ನಾನು ಇಟ್ಟ ಬೇಡಿಕೆಗಳ ಪೈಕಿ ಶೇಕಡಾ ತೊಂಬತ್ತರಷ್ಟನ್ನು ಪರಿಗಣಿಸಲಾಗಿದೆ ಎಂದು ಸರಕಾರ ಹೇಳಿದೆ. ಆದರೆ ಅದು ಕೂಡ ಸುಳ್ಳು ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

ಅವರ ಮೇಲೆ ನನಗೆ ಈಗ ನಂಬಿಕೆ ಹೋಗಿದೆ
ಕೇಂದ್ರ ಹಾಗೂ ಮಹಾರಾಷ್ಟ್ರ ಸರಕಾರದ ಸಚಿವರು ಬಂದು ನನ್ನ ಜತೆ ಚರ್ಚಿಸುತ್ತಾರೆ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ನಾನೇ ಅವರಿಗೆ ಬೇಡ ಅಂದೆ. ಏಕೆಂದರೆ ಇದರಿಂದ ಜನ ಗೊಂದಲಕ್ಕೆ ಈಡಾಗುತ್ತಾರೆ. ಅವರೇ ದೃಢ ನಿರ್ಧಾರ ತೆಗೆದುಕೊಳ್ಳಲಿ. ಪ್ರತಿಯೊಂದನ್ನೂ ಬರವಣಿಗೆಯಲ್ಲಿ ನೀಡಲಿ. ಏಕೆಂದರೆ ನಾನೀಗಾಗಲೇ ಅವರಲ್ಲಿ ನಂಬಿಕೆ ಕಳೆದುಕೊಂಡಿದ್ದಾರೆ ಎಂದಿದ್ದಾರೆ.

ಅರವಿಂದ್ ಕೇಜ್ರಿವಾಲ್ ಜತೆ ವೇದಿಕೆ ಹಂಚಿಕೊಳ್ಳಲ್ಲ
ಕೇಜ್ರಿವಾಲ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಣ್ಣಾ ಹಜಾರೆ, ಈ ಪ್ರತಿಭಟನೆಯಲ್ಲಿ ಅರವಿಂದ್ ಕೇಜ್ರಿವಾಲ್ ಪಾಲ್ಗೊಳ್ಳಲಿ. ಆದರೆ ನನ್ನ ಜೊತೆ ವೇದಿಕೆ ಹಂಚಿಕೊಳ್ಳುವುದಕ್ಕೆ ಅನುಮತಿ ನೀಡುವುದಿಲ್ಲ ಎಂದಿದ್ದಾರೆ. ಅಣ್ಣಾ ಹಜಾರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸೋಮವಾರ ಆರನೇ ದಿನಕ್ಕೆ ಕಾಲಿಟ್ಟಿದೆ. ಐದನೇ ದಿನದಂದು, ನನ್ನ ಬೇಡಿಕೆಗಳನ್ನು ಕೇಂದ್ರ ಸರಕಾರವು ಶೀಘ್ರವೇ ಈಡೇರಿಸದಿದ್ದರೆ ಪದ್ಮ ಭೂಷಣ ಪ್ರಶಸ್ತಿ ಹಿಂತಿರುಗಿಸುತ್ತೇನೆ ಎಂದು ಅವರು ಹೇಳಿದ್ದರು.

ಆರೆಸ್ಸೆಸ್-ಸಂಘ್ ಪರಿವಾರ್ ಏಜೆಂಟ್ ಹಜಾರೆ ಎಂದಿದ್ದ ಎನ್ ಸಿಪಿ ನಾಯಕ
ಕಳೆದ ವಾರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ವಕ್ತಾರ ನವಾಬ್ ಮಲ್ಲಿಕ್ ಅವರು, ಅಣ್ಣಾ ಹಜಾರೆ ಆರೆಸ್ಸೆಸ್ ಹಾಗೂ ಸಂಘ್ ಪರಿವಾರ್ ಏಜೆಂಟ್ ಎಂದಿದ್ದರು. ಆ ನಂತರ ಎನ್ ಸಿಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಆ ಹೇಳಿಕೆಗೆ ಕ್ಷಮೆ ಕೋರಿದ್ದರು.

ಇನ್ನೂ ಐದು ದಿನ ನನಗೇನೂ ತೊಂದರೆ ಇಲ್ಲ
ಆರನೇ ದಿನಕ್ಕೆ ಉಪವಾಸ ಸತ್ಯಾಗ್ರಹವು ಕಾಲಿಟ್ಟಿದೆ. ಎಂಬತ್ತೊಂದು ವರ್ಷದ ಅಣ್ಣಾ ಹಜಾರೆ ಆರೋಗ್ಯ ಕ್ಷೀಣಿಸುತ್ತಿದೆ. ಈ ಮಧ್ಯೆ ಅವರು ಮಾತನಾಡಿ, ಏನೂ ಯೋಚಿಸಬೇಡಿ. ನಾನು ಚೆನ್ನಾಗಿದ್ದೇನೆ. ಆ ದೇವರು ನನ್ನ ಜತೆಗೆ ಇದ್ದಾನೆ. ಇನ್ನೂ ಐದು ದಿನ ನನಗೇನೂ ಆಗುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications