ಲೈಂಗಿಕ ಕಿರುಕುಳ ನೀಡುತ್ತಿದ್ದ ಮಗನ ಹತ್ಯೆಗೆ ತಾಯಿ ಸುಪಾರಿ
ಮುಂಬೈ, ಸೆಪ್ಟೆಂಬರ್ 19: ತಾಯಿಯೇ ಮಗನನ್ನು ಸುಪಾರಿ ಕೊಟ್ಟು ಕೊಲ್ಲಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಈ ಕೊಲೆ ಪ್ರಕರಣದ ಸಂಬಂಧ ಮಹಿಳೆ, ಆಕೆಯ ಮಗ ಮತ್ತು ಸಹಚರರನ್ನು ಬಂಧಿಸಲಾಗಿದೆ. ಕೊಲೆಯಾದ ಇಪ್ಪತ್ತೆರಡು ವರ್ಷದ ಮಗ, ಹತ್ತಿರದ ಸಂಬಂಧಿ ಹೆಣ್ಣುಮಕ್ಕಳಿಗೆ ಮತ್ತು ತನ್ನ ವಿರುದ್ಧವೇ ಲೈಂಗಿಕ ದೌರ್ಜನ್ಯಕ್ಕೆ ಮುಂದಾದಾಗ ಆಕೆ ಈ ನಿರ್ಧಾರಕ್ಕೆ ಬಂದಿದ್ದಾರೆ.
ರಜನಿ ಎಂಬ ಮಹಿಳೆ ಆರು ತಿಂಗಳಿನಿಂದ ಹಿಂಸೆ ಅನುಭವಿಸಿ, ಕೊನೆಗೆ ತಮ್ಮ ಮೊದಲ ಮದುವೆಯಿಂದ ಜನಿಸಿದ್ದ ಮಗ ಸೀತಾರಾಮ್ ಗೆ ಐವತ್ತು ಸಾವಿರ ರುಪಾಯಿಗೆ ಸುಪಾರಿ ಕೊಟ್ಟು, ಮಲ ಸಹೋದರ ರಾಮಚರಣ್ ದ್ವಿವೇದಿಯನ್ನು ಕೊಲ್ಲಿಸಿದ್ದಾರೆ.

ಕಳೆದ ತಿಂಗಳು ವಲಿವ್ ಪೊಲೀಸರಿಗೆ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಆತನ ಭುಜದ ಮೇಲೆ ರಾಮಚರಣ್ ಮತ್ತು ರಜನಿ ಎಂಬ ಹಚ್ಚೆ ಇತ್ತು. ಈ ಬಗ್ಗೆ ಪೊಲೀಸರು ಜಾಹೀರಾತು ನೀಡಿದ ಹತ್ತಿರಹತ್ತಿರ ತಿಂಗಳ ಬಳಿಕ ಸುನೀತಾ ಶರ್ಮಾ ಎಂಬಾಕೆ ಭಾಯಂದೇರ್ ಪೊಲೀಸ್ ಠಾಣೆಗೆ ಬಂದು ಮೃತನನ್ನು ಗುರುತಿಸಿದ್ದರು.
ಆ ನಂತರ ಆತನ ಮನೆಗೆ ತನಿಖಾಧಿಕಾರಿಗಳು ಭೇಟಿ ನೀಡಿದಾಗ ರಜನಿ ಗುರುತು ಪತ್ತೆ ಹಚ್ಚಿದ್ದಾರೆ. ಅದಕ್ಕೂ ಮುನ್ನ ರಜನಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರೂ ತಮ್ಮ ಮಗನ ಶವವನ್ನು ಗುರುತಿಸಿಲ್ಲ ಎಂಬುದು ಗೊತ್ತಾಗುತ್ತದೆ. ಯಾವಾಗ ವಿಚಾರಣೆ ತೀವ್ರ ಆಗುತ್ತದೋ ಆಗ ಸುಪಾರಿ ನೀಡಿ, ಮಗನನ್ನು ಕೊಲ್ಲಿಸಿದ ಸಂಗತಿ ಆಕೆ ಬಾಯಿ ಬಿಟ್ಟಿದ್ದಾರೆ.
ರಾಮಚರಣ್ ಲೈಂಗಿಕ ವ್ಯಸನಿಯಾಗಿದ್ದ. ಈ ಬಗ್ಗೆ ತಂದೆಗೆ ಹೇಳದಂತೆ ಬೆದರಿಸುತ್ತಿದ್ದ. ಎರಡು ವರ್ಷಗಳ ಹಿಂದೆ ತನ್ನ ಗ್ರಾಮದಿಂದ ಬಂದಿದ್ದ ಮಲತಾಯಿ ಮೇಲೂ ರಾಮಚರಣ್ ಲೈಂಗಿಕ ದೌರ್ಜನ್ಯ ನಡೆಸಿದ್ದ. ಮತ್ತೊಬ್ಬ ಮಹಿಳಾ ಸಂಬಂಧಿ ಮೇಲೂ ಆತ ದಾಳಿ ನಡೆಸಿದ್ದು, ಆಕೆ ಪೊಲೀಸ್ ದೂರು ನೀಡುವುದಾಗಿ ಬೆದರಿಸಿದ್ದರು.
ಆದರೆ, ಯಾವಾಗ ಆತ ರಜನಿ ಅವರ ಮೇಲೇ ಲೈಂಗಿಕ ದೌರ್ಜನ್ಯ ನಡೆಸಲು ಅರಂಭಿಸಿದನೋ ಆಗ ಆಕೆ ರೋಸತ್ತಿದ್ದಾರೆ. ಕೊನೆಗೆ ಸುಪಾರಿ ನೀಡಿ ಮಗನನ್ನೇ ಕೊಲ್ಲಿಸಿದ್ದಾರೆ.












Click it and Unblock the Notifications