ಗಂಡ ಸತ್ತರೆ ಎರಡನೇ ಹೆಂಡತಿಗೂ ಸಿಗುತ್ತಾ ಪಿಂಚಣಿ?
ಮುಂಬೈ, ಫೆಬ್ರವರಿ 16: ಭಾರತದಲ್ಲಿ ಗಂಡನ ಆಸ್ತಿಗಾಗಿ ಕೋರ್ಟ್ ಮೆಟ್ಟಿಲು ಏರುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಗಂಡನ ಆಸ್ತಿ ಬೇಕು, ಪತಿಯ ಸಾವಿನ ನಂತರದಲ್ಲಿ ಪಿಂಚಣಿ ಬೇಕು ಎಂದು ಕೋರ್ಟ್ ಮೆಟ್ಟಿಲೇರಿದ ಹಲವು ಪ್ರಕರಣಗಳಿವೆ. ಅಂಥದ್ದೇ ಒಂದು ವಿಶೇಷ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಆದೇಶವೊಂದನ್ನು ಹೊರಡಿಸಿದೆ.
ಒಂದನೇ ಹೆಂಡತಿ ಓಕೆ, ಒಂದು ವೇಳೆ ವ್ಯಕ್ತಿಯು ಎರಡು ಮದುವೆಗಳನ್ನು ಆಗಿದ್ದು, ಆತನ ಸಾವಿನ ನಂತರದಲ್ಲಿ ಎರಡನೇ ಹೆಂಡತಿಗೆ ಪಿಂಚಣಿ ಸಿಗುತ್ತದೆಯೇ ಇಲ್ಲವೇ ಎಂಬುದಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶದಲ್ಲಿ ಸ್ಪಷ್ಟವಾಗಿದೆ ಹೇಳಿದೆ.
ಮೊದಲ ಹೆಂಡತಿ ಜೊತೆಗೆ ವಿಚ್ಛೇದನ ಪಡೆಯದೇ ಎರಡನೇ ಮದುವೆಯಾದರೆ ಅದು ಮಾನ್ಯವಾಗಿರುವುದಿಲ್ಲ. ಇಂಥ ಪ್ರಕರಣಗಳಲ್ಲಿ ಎರಡನೇ ಪತ್ನಿಯು ಗಂಡನ ಮರಣಾನಂತರದಲ್ಲಿ ಪಿಂಚಣಿ ಪಡೆದುಕೊಳ್ಳಲು ಅರ್ಹರಾಗಿರುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಬುಧವಾರ ಹೇಳಿದೆ.

ಎರಡನೇ ಪತ್ನಿ ಸಲ್ಲಿಸಿದ ಅರ್ಜಿ ವಜಾ
ಪಿಂಚಣಿ ಸೌಲಭ್ಯಗಳನ್ನು ನಿರಾಕರಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸೊಲ್ಲಾಪುರ ನಿವಾಸಿ ಶ್ಯಾಮಲ್ ಟೇಟ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಜೆ ಕಥವಲ್ಲಾ ಮತ್ತು ಮಿಲಿಂದ್ ಜಾಧವ್ ವಿಭಾಗೀಯ ಪೀಠ ವಜಾಗೊಳಿಸಿದೆ. ಹೈಕೋರ್ಟ್ ಆದೇಶದಂತೆ, ಸೋಲಾಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ಯೂನ್ ಆಗಿದ್ದ ಮಹದೇವು ಟೇಟ್ 1996ರಲ್ಲಿ ನಿಧನರಾಗಿದ್ದರು. ಅರ್ಜಿದಾರರಾದ ಶ್ಯಾಮಲಾ ಟೇಟ್ ಮಹದೇವು ಜೊತೆ ಮದುವೆ ಆಗುವುದಕ್ಕೂ ಮೊದಲೇ ಅವರಿಗೆ ಇನ್ನೊಬ್ಬ ಮಹಿಳೆಯ ಜೊತೆ ವಿವಾಹವಾಗಿತ್ತು.

ಮಹದೇವು ಮರಣಾನಂತರ ಮೊದಲ ಪತ್ನಿಗೆ ಎಲ್ಲ ಸವಲತ್ತು
ಮಹದೇವು ಟೇಟ್ ಮರಣದ ನಂತರ, ಅವರ ಮೊದಲ ಪತ್ನಿಗೆ ಮೃತ ವ್ಯಕ್ತಿಯ ನಿವೃತ್ತಿ ಪ್ರಯೋಜನಗಳಲ್ಲಿ ಸುಮಾರು ಶೇ.90ರರಷ್ಟು ಪಡೆಯುತ್ತಾರೆ. ಎರಡನೆ ಪತ್ನಿಯು ಮಾಸಿಕ ಪಿಂಚಣಿಯನ್ನು ಪಡೆಯುತ್ತಾರೆ ಎಂಬ ಒಪ್ಪಂದಕ್ಕೆ ಬಂದಿದ್ದರು. ಆದರೆ, ಮಹದೇವು ಅವರ ಮೊದಲ ಪತ್ನಿ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ನಂತರ, ಮಹದೇವು ಅವರ ಪಿಂಚಣಿ ಬಾಕಿಯನ್ನು ನೀಡಬೇಕು ಎಂದು ಕೋರಿ ಶ್ಯಾಮಲಾ ಟೇಟ್ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಟೇಟ್ ಅರ್ಜಿಯನ್ನು ನಾಲ್ಕು ಬಾರಿ ತಿರಸ್ಕರಿಸಿದ ಸರ್ಕಾರ
ಕಳೆದ 2007 ರಿಂದ 2014ರ ಅವಧಿಯಲ್ಲಿ ಸಾಕಷ್ಟು ಚರ್ಚೆಯ ನಂತರ ಶ್ಯಾಮಲಾ ಟೇಟ್ ಸಲ್ಲಿಸಿದ ನಾಲ್ಕು ಅರ್ಜಿಗಳನ್ನು ರಾಜ್ಯ ಸರ್ಕಾರ ತಿರಸ್ಕರಿಸಿತ್ತು. 2019ರಲ್ಲಿ ಟೇಟ್ ಅವರು ಮಹದೇವು ಅವರ ಮೂವರು ಮಕ್ಕಳ ತಾಯಿ ಆಗಿದ್ದಾರೆ. ಸಮಾಜದಲ್ಲಿ ಅವರನ್ನು ಗಂಡ ಮತ್ತು ಹೆಂಡತಿ ಎಂದು ಗುರುತಿಸಲಾಗುತ್ತದೆ. ವಿಶೇಷವಾಗಿ ಪಿಂಚಣಿ ಪಡೆಯಲು ಅರ್ಹರು ಎಂದು ಪ್ರತಿಪಾದಿಸಿದ ಮೊದಲ ಹೆಂಡತಿ ಮೃತಪಟ್ಟಿದ್ದಾರೆ ಎಂದು ಕೋರ್ಟ್ ಮೊರೆ ಹೋಗಿದ್ದರು.

ಬಾಂಬೆ ಹೈಕೋರ್ಟ್ ಏನು ಹೇಳಿದೆ?
ಮೊದಲ ಮದುವೆಯನ್ನು ಕಾನೂನುಬದ್ಧವಾಗಿ ಕೊನೆಗೊಳಿಸದೆಯೇ ವಿವಾಹವಾಗಿದ್ದರೆ, ಹಿಂದೂ ವಿವಾಹ ಕಾಯ್ದೆಯ ಅಡಿಯಲ್ಲಿ ಎರಡನೇ ಮದುವೆಯನ್ನು ಅನೂರ್ಜಿತಗೊಳಿಸಬೇಕು ಎಂದು ಹಲವಾರು ಸುಪ್ರೀಂ ಕೋರ್ಟ್ ತೀರ್ಪುಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಕಾನೂನುಬದ್ಧವಾಗಿ ವಿವಾಹವಾದ ಪತ್ನಿ ಮಾತ್ರ ಕುಟುಂಬ ಪಿಂಚಣಿಗೆ ಅರ್ಹಳು ಎಂಬ ರಾಜ್ಯ ಸರ್ಕಾರದ ವಾದ ಸರಿಯಾಗಿದೆ. "ಮೃತರ ಮೊದಲ ಪತ್ನಿ ಜೀವಂತವಾಗಿದ್ದಾಗ ಮೃತರೊಂದಿಗಿನ ಅರ್ಜಿದಾರರ (ಟೇಟ್) ವಿವಾಹವು ಅನೂರ್ಜಿತವಾಗಿದೆ" ಎಂದು ಪೀಠ ಹೇಳಿದೆ.












Click it and Unblock the Notifications